Menu

ಅಮೆರಿಕ ದಾಳಿಗೆ ಇರಾನ್‌ನಲ್ಲಿ ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ವಿಭಾಗ ಧ್ವಂಸ

24 ಗಂಟೆಗಳಲ್ಲಿ ಇರಾನ್ ಮೇಲೆ ಮೂರನೇ ಬಾರಿಗೆ ಅಮೆರಿಕ ಪಡೆ ದಾಳಿ ನಡೆಸಿದ್ದು, ಇರಾನ್ ಬಂದರುಗಳಿಗೆ ನೌಕಾ ದಿಗ್ಬಂಧನ ವಿಧಿಸಿದೆ. ಹರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಿಬಿಡುವುದಾಗಿ ಇರಾನ್‌ ಪಟ್ಟು ಹಿಡಿದಿದೆ.

ಇರಾನ್‌ನ ಅಹ್ವಾಜ್ ನಗರದಲ್ಲಿರುವ ‘ಶಾಹಿದ್ ಬಘೈ’ ಆಸ್ಪತ್ರೆಯ ಮೇಲೆ ಅಮೆರಿಕ ಬಾಂಬ್‌ ದಾಳಿ ಮಾಡಿದ್ದು, ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ವಿಭಾಗ ಸಂಪೂರ್ಣ ಧ್ವಂಸಗೊಂಡಿದೆ. ಕೀಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳು ಹಾಗೂ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳನ್ನು ಸ್ಥಳಾಂತರಿಸಲಾಗಿದೆ.

ಅಮೆರಿಕದ ಸರಣಿ ದಾಳಿಗಳಲ್ಲಿ ಇರಾನ್‌ನ ಇಡೀ ಸೇನಾ ಬ್ಯಾರಕ್‌ಗಳು ಧೂಳೀಪಟವಾಗಿದ್ದು, ಏಳು ಸೈನಿಕರು ಸೇರಿ ಇದುವರೆಗೆ 35 ಕ್ಕೂ ಹೆಚ್ಚು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇರಾನ್‌ನ ಏಕೈಕ ನಾಗರಿಕ ಪರಮಾಣು ಸ್ಥಾವರವಿರುವ ಬುಶೆಹರ್ ಮೇಲೂ ಅಮೆರಿಕ ದಾಳಿ ನಡೆಸಿದೆ.

ಅಮೆರಿಕದ ವಾಯುದಾಳಿಗೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ತಿರುಗೇಟು ನೀಡಿದೆ. ಅಮೆರಿಕ ಸೇನೆಯ ಹೆಮ್ಮೆಯ, ಜಗತ್ತಿನ ಅತ್ಯಂತ ಸುಧಾರಿತ ಹಾಗೂ ದುಬಾರಿ ಬೇಹುಗಾರಿಕಾ ಯುದ್ಧ ವಿಮಾನವನ್ನು ಆಂಡಿಮೆಶ್ಕ್ ಆಕಾಶದಲ್ಲಿ ಹೊಡೆದುರುಳಿಸಿದೆ. ಬಹ್ರೇನ್‌ನಲ್ಲಿರುವ ಅಮೆರಿಕದ ನೌಕಾಪಡೆಯ 5ನೇ ಫ್ಲೀಟ್ ಬೇಸ್ ಗುರಿಯಾಗಿಸಿ ಇರಾನ್ ಕ್ಷಿಪಣಿಗಳನ್ನು ಹಾರಿಸಿದೆ.

ಅಮೆರಿಕದ ಸೆಂಟ್ರಲ್ ಕಮಾಂಡ್ ಇರಾನ್‌ನ ಬಂದರುಗಳ ದಿಗ್ಬಂಧನವನ್ನು ಮುರಿಯಲು ಯತ್ನಿಸುತ್ತಿದ್ದ ತೈಲ ಟ್ಯಾಂಕರ್ ಹಡಗಿನ ಮೇಲೆ ಯುದ್ಧವಿಮಾನದ ಕ್ಷಿಪಣಿಗಳನ್ನು ಹಾರಿಸಿ ಜಲಮಾರ್ಗದ ನಡುವೆಯೇ ನಿಷ್ಕ್ರಿಯಗೊಳಿಸಿದೆ.

ಪೆನ್ಸಿಲ್ವೇನಿಯಾದ ರಕ್ಷಣಾ ಶೃಂಗಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ ಒಪ್ಪಂದಕ್ಕೆ ಬರಲು ಬಯಸುತ್ತಿದೆ. ಮಾತುಕತೆಗೆ ಬರದಿದ್ದರೆ ಮುಂದಿನ ವಾರ ಇಡೀ ದೇಶದ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳನ್ನು ಸಂಪೂರ್ಣವಾಗಿ ಕೆಡವಿಹಾಕಲಿದ್ದೇವೆ ಎಂದು ಎಚ್ಚರಿಸಿದ್ದಾರೆ.

Related Posts

Leave a Reply

Your email address will not be published. Required fields are marked *