ಆನ್‌ಲೈನ್ ಗೇಮಿಂಗ್ ಚಟಕ್ಕೆ ಲಕ್ಷಾಂತರ ರೂಪಾಯಿ ಕಳೆದುಕೊಂಡು ಮೈ ತುಂಬ ಸಾಲ ಮಾಡಿಕೊಂಡಿದ್ದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.
ರಂಜಿತಾ(28) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದು, ನೆಲಮಂಗಲದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಗುಲ್ಬರ್ಗದವರಾದ ರಂಜಿತಾ 10 ವರ್ಷಗಳ ಹಿಂದೆ ಅರುಣ್ ಎಂಬವರನ್ನು ಮದುವೆಯಾಗಿದ್ದು, ದಂಪತಿ 5 ವರ್ಷದಿಂದ ನೆಲಮಂಗಲದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ವರ್ಷದ ಹಿಂದೆ ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದಿದ್ದ ರಂಜಿತಾ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದರು. ರಂಜಿತಾಳ ತಾಯಿ ಹಾಗೂ ಗಂಡ ಈಗಾಗಲೇ ಆಕೆ ಮಾಡಿದ್ದ 15 ಲಕ್ಷ ರೂ. ಸಾಲ ತೀರಿಸಿದ್ದರು. ಆಷ್ಟಾದರೂ ಕೂಡ ಆನ್‌ಲೈನ್ ಗೇಮಿಂಗ್ ಬಿಟ್ಟಿರಲಿಲ್ಲ. ಮತ್ತೆ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಎರಡು ದಿನಗಳ ಹಿಂದೆ ಪತಿ ಅರುಣ್ರು ಗುಲ್ಬರ್ಗಗೆ ತೆರಳಿದ್ದರು. ಮನೆಯಲ್ಲಿ ಏಳು ವರ್ಷದ ಮಗನ ಜೊತೆ ಇದ್ದ ರಂಜಿತಾ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.


