Thursday, October 29, 2026
Menu

ಎಕ್ಸ್‌ಪ್ರೆಸ್‌ ರಸ್ತೆಗಳಲ್ಲಿ 120 ಕಿ.ಮೀ. ವೇಗಕ್ಕೆ ದಂಡ ಇಲ್ಲ: ನಿತಿನ್ ಗಡ್ಕರಿ ಆದೇಶ

ಉದಯಕಾಲ ನ್ಯೂಸ್, ನವದೆಹಲಿ: ದೇಶದ ಎಕ್ಸ್‌ಪ್ರೆಸ್‌ವೇಗಳಲ್ಲಿ (Expressway) ಗಂಟೆಗೆ 120 ಕಿ.ಮೀ. ವೇಗದ ಮಿತಿಯಲ್ಲಿ ಚಲಿಸುವ ವಾಹನಗಳಿಗೆ ಯಾವುದೇ ಸಂಚಾರ ದಂಡದ ಚಲನ್ ಜಾರಿ ಮಾಡದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿತಿಳಿಸಿದ್ದಾರೆ. ವಾಹನ ಸವಾರರಿಗೆ ನಿರಾಳತೆ ತರುವ ಈ ನಿರ್ಧಾರವು ದೇಶಾದ್ಯಂತ ಸಂಚಾರ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಶೇ. 20ರಷ್ಟು ವೇಗ ವಿನಾಯಿತಿ

ಉದ್ಯಮ ಸಂಸ್ಥೆ ಸಿಐಐ (CII) ಆಯೋಜಿಸಿದ್ದ ‘ಭಾರತೀಯ ಹೆದ್ದಾರಿಗಳ ಭವಿಷ್ಯ’ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಹೆದ್ದಾರಿಗಳಲ್ಲಿ ಸಣ್ಣಪುಟ್ಟ ವೇಗದ ವ್ಯತ್ಯಾಸಕ್ಕೂ ನೋಟಿಸ್‌ಗಳು ಬರುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. 120 ಕಿ.ಮೀ. ವೇಗದವರೆಗೆ ಯಾವುದೇ ನೋಟಿಸ್ ಕಳುಹಿಸಬಾರದು ಎಂದು ನಾನು ಸೂಚಿಸಿದ್ದೇನೆ. ಅಷ್ಟೇ ಅಲ್ಲದೆ, ನಿಗದಿತ ಮಿತಿಗಿಂತ ಶೇ. 20ರಷ್ಟು ವೇಗ ಹೆಚ್ಚಿದ್ದರೂ ಅಂಥವರಿಗೆ ರಿಯಾಯಿತಿ ನೀಡಿ ಬಿಡಬೇಕು. ಅದಕ್ಕಿಂತಲೂ ಹೆಚ್ಚಿನ ಅತಿವೇಗದಲ್ಲಿ ವಾಹನ ಚಲಾಯಿಸುವವರಿಗೆ ಮಾತ್ರ ಚಲನ್ ವಿಧಿಸಬೇಕು ಎಂದು ಗಡ್ಕರಿ ಸ್ಪಷ್ಟಪಡಿಸಿದರು.

ಎಐ (AI) ಆಧಾರಿತ ಸಂಚಾರ ನಿರ್ವಹಣೆ

ದೇಶದಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ಹೆದ್ದಾರಿ ಜಾಲದಲ್ಲಿ ಸಂಚಾರ ನಿಯಮಗಳ ಜಾರಿಯನ್ನು ಚುರುಕುಗೊಳಿಸಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು (ATMS) ಅಳವಡಿಸಿಕೊಳ್ಳಲು ಕೈಗಾರಿಕಾ ವಲಯದ ಸಹಕಾರವನ್ನು ಸಚಿವರು ಕೋರಿದರು. ಈ ಅತ್ಯಾಧುನಿಕ ತಂತ್ರಜ್ಞಾನವು ಲೇನ್ ಶಿಸ್ತು ಉಲ್ಲಂಘಿಸುವವರನ್ನು ಸುಲಭವಾಗಿ ಪತ್ತೆಹಚ್ಚಲು ಮತ್ತು ಹೆದ್ದಾರಿ ಸುರಕ್ಷತೆಯನ್ನು ಹೆಚ್ಚಿಸಲು ಹೆಚ್ಚು ಸಹಕಾರಿಯಾಗಲಿದೆ ಎಂದರು.

ಎಥೆನಾಲ್ ಮಿಶ್ರಣದ ಅಪಪ್ರಚಾರಕ್ಕೆ ತಪರಾಕಿ

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ (E20) ಕುರಿತು ಇತ್ತೀಚೆಗೆ ವ್ಯಕ್ತವಾದ ಆಕ್ಷೇಪಗಳನ್ನು ತಳ್ಳಿಹಾಕಿದ ನಿತಿನ್ ಗಡ್ಕರಿ, ಇದು ಹಣ ನೀಡಿ ಮಾಡಿಸಿದ ಅಪಪ್ರಚಾರ ಎಂದು ತೀವ್ರವಾಗಿ ಕಿಡಿಕಾರಿದರು. 2022ರಿಂದಲೇ ದೇಶದಲ್ಲಿ 4 ಕೋಟಿ ಕಾರುಗಳು ಮತ್ತು 20 ಕೋಟಿ ದ್ವಿಚಕ್ರ ವಾಹನಗಳು ಇ-20 ಇಂಧನದಲ್ಲಿ ಯಾವುದೇ ತೊಂದರೆಯಿಲ್ಲದೆ ಓಡಾಡುತ್ತಿವೆ. ಯಾರ ವಾಹನವಾದರೂ ಕೆಟ್ಟು ನಿಂತಿದೆಯೇ? ಇದೆಲ್ಲವೂ ಸಂಪೂರ್ಣವಾಗಿ ಪ್ರಾಯೋಜಿತ ಅಪಪ್ರಚಾರವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು.

#NitinGadkari #ExpresswaySpeedLimit #TrafficChallan #NationalHighways #E20Petrol #CII #UdayakalaNews #KarnatakaNews

Related Posts

Leave a Reply

Your email address will not be published. Required fields are marked *