ಕಡಿಮೆ ದರದಲ್ಲಿ ಮತ್ತು ಕಡಿಮೆ ತೂಕದಲ್ಲಿ ಹೊಸ ಆಭರಣ ಮಾಡಿಕೊಡುವುದಾಗಿ ನಂಬಿಸಿ ರಾಮದೇವ್ ಜ್ಯುವೆಲರ್ಸ್ ಮಾಲೀಕ ಬುಂಡಾರಾಮ್ ನೂರಾರು ಮಹಿಳೆಯರಿಂದ ಎಂಟು ಕೋಟಿ ರೂ. ಮೌಲ್ಯದ ಚಿನ್ನಾಭರಣ ಪಡೆದುಕೊಂಡು ವಂಚಿಸಿ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪಟ್ಟಣದ ಮಾರುತಿ ಬಡಾವಣೆಯಲ್ಲಿರುವ ವೆಂಕಟೇಶ್ವರ ಆಸ್ವತ್ರೆ ರಸ್ತೆಯಲ್ಲಿದ್ದ ರಾಮದೇವ್ ಜೂಯಲರ್ಸ್ ಅಂಗಡಿ ಮಾಲೀಕ ಬುಂಡಾರಾಮ್ ಮಹಿಳೆಯರನ್ನು ವಂಚಿಸಿ ಪರಾರಿಯಾಗಿರುವ ಆರೋಪಿ. ಆತ ರಾಜಸ್ತಾನವನು. ಕಳೆದ 15 ವರ್ಷಗಳಿಂದ ಇಲ್ಲಿನ ಸೋಲಂಕಿ ಒಡವೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ವರ್ಷವಷ್ಟೇ ಸೋಲಂಕಿಯಿಂದ ಹೊರಬಂದು ಹೊಸ ಅಂಗಡಿ ತರೆದಿದ್ದ.
ಸೋಲಂಕಿ ಬಳಿ ಕೆಲಸ ಮಾಡುತ್ತಿದ್ದ ಪರಿಚಯವಾಗಿದ್ದ ಮಹಿಳೆಯನ್ನು ಸೆಳೆದಿದ್ದ ಆರೋಪಿ, ಹಳೆ ಒಡವೆಯನ್ನು ಕಡಿಮೆ ವೇಸ್ಟೇಜ್ನಲ್ಲಿ ಕರಗಿಸಿ ಹೊಸ ಒಡವೆ ಮಾಡಿಕೊಡುವುದಾಗಿ ನಂಬಿಸಿದ್ದ. ಇದಕ್ಕಾಗಿ 180 ಮಹಿಳೆಯರಿದ್ದ ವಾಟ್ಸಪ್ ಗ್ರೂಪ್ ರಚಿಸಿ ಹೊಸ ಡಿಸೈನ್ಗಳನ್ನು ಹಾಕುತ್ತಿದ್ದ. ಅತಿ ಕಡಿಮೆ ತೊಕದಲ್ಲಿ ಸುಂದರ ಆಭರಣಗಳನ್ನು ಕಂಡ ಬಹುತೇಕ ಮಹಿಳೆಯರು ತಮ್ಮಲ್ಲಿದ್ದ ಹಳೆ ಮಾಂಗಲ್ಯ, ತಾಳಿ, ಓಲೆ ಹಾಗೂ ಬ್ರಾಸ್ ಲೈಟ್ಗಳನ್ನು ಕೊಟ್ಟಿದ್ದಲ್ಲದೇ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸಿದ್ದರು.
ಕಳೆದ ವಾರದಿಂದ ಅಂಗಡಿ ತೆಗೆಯದ ಬುಂಡಾರಾಮ್ ಮೊಬೈಲ್ ಸ್ವೀಚ್ ಆಫ್ ಮಾಡಿಕೊಂಡಿದ್ದಾನೆ. ಬಳಿಕ ಸಂತ್ರಸ್ತ ಮಹಿಳೆಯರು ಸ್ಥಳೀಯ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ ಒಡವೆ ಹಾಗೂ ಹಣವನ್ನು ವಾಪಸ್ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.


