ಉದಯಕಾಲ ನ್ಯೂಸ್, ಬೆಳಗಾವಿ: ಸತತ 36 ದಿನಗಳ ಕಾಲ ಹಿಂಡಲಗಾ ಕೇಂದ್ರ ಕಾರಾಗೃಹದ ಕಂಬಿ ಎಣಿಸಿದರೂ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಯುವ ಘಟಕದ ಮುಖಂಡ ಶುಭಂ ಶಳಕೆ ತನ್ನ ಹಳೆಯ ಚಾಳಿ ಮತ್ತು ಉದ್ಧಟತನವನ್ನು ಮಾತ್ರ ಬಿಟ್ಟಿಲ್ಲ. ನ್ಯಾಯಾಂಗ ಬಂಧನದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಜೈಲಿನಿಂದ ಹೊರಬರುತ್ತಿದ್ದಂತೆಯೇ ಮತ್ತೆ ‘ಜೈ ಮರಾಠಿ, ಜೈ ಮಹಾರಾಷ್ಟ್ರ’ ಎಂದು ಘೋಷಣೆಗಳನ್ನು ಕೂಗುವ ಮೂಲಕ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಭಾಷಾ ಸಾಮರಸ್ಯ ಕದಡುವಂತಹ ಪ್ರಚೋದನಾಕಾರಿ ವರ್ತನೆಯನ್ನು ಪ್ರದರ್ಶಿಸಿದ್ದಾನೆ.
ಬೆಳಗಾವಿ ತಾಲ್ಲೂಕಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕಳೆದ 36 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಶುಭಂ ಶಳಕೆ ಇದೀಗ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಜೈಲಿನಿಂದ ಹೊರಬಂದ ತಕ್ಷಣವೇ ತನ್ನ ಮೊಬೈಲ್ನಲ್ಲಿ ಸೆಲ್ಫಿ ವಿಡಿಯೋವೊಂದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಆತ, ತಾನು 36 ದಿನಗಳ ನಂತರ ಜೈಲಿನಿಂದ ಹೊರಬಂದಿರುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ, ಆದಷ್ಟು ಬೇಗ ಎಲ್ಲರನ್ನೂ ಭೇಟಿಯಾಗುತ್ತೇನೆ ಎಂದು ಬೆಂಬಲಿಗರಿಗೆ ಸಂದೇಶ ರವಾನಿಸಿರುವ ಶಳಕೆ, ವಿಡಿಯೋದ ಕೊನೆಯಲ್ಲಿ ‘ಜೈ ಮರಾಠಿ, ಜೈ ಮಹಾರಾಷ್ಟ್ರ’ ಎಂದು ಜೋರಾಗಿ ಘೋಷಣೆ ಕೂಗಿದ್ದಾನೆ. ಕರ್ನಾಟಕದ ನೆಲದಲ್ಲಿದ್ದುಕೊಂಡೇ, ಇಲ್ಲಿನ ಕಾನೂನಿನಡಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದ ಬೆನ್ನಲ್ಲೇ ಆತ ತೋರಿರುವ ಈ ದುರಹಂಕಾರದ ವರ್ತನೆ ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಯಾವ ಪ್ರಕರಣದಲ್ಲಿ ಶುಭಂ ಶಳಕೆ ಜೈಲು ಸೇರಿದ್ದ?
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿದ್ದ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಖಡೇಬಜಾರ್ ಪೊಲೀಸ್ ಠಾಣೆಯ ಪೊಲೀಸರು ಶುಭಂ ಶಳಕೆಯನ್ನು ಬಂಧಿಸಿದ್ದರು. 2025ರ ಜನವರಿಯಲ್ಲಿ ರಾಮಲಿಂಗಖಿಂಡ್ ಗಲ್ಲಿಯಲ್ಲಿ ನಡೆದಿದ್ದ ಗಲಾಟೆ ಮತ್ತು ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖಡೇಬಜಾರ್ ಠಾಣೆಯಲ್ಲಿ (Crime No. 12/2025) ಎಫ್ಐಆರ್ ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆಗೆ ನ್ಯಾಯಾಲಯವು ಹಲವು ಬಾರಿ ಸಮನ್ಸ್ ಜಾರಿ ಮಾಡಿದ್ದರೂ ಶುಭಂ ಶಳಕೆ ಮತ್ತು ಸಹ ಆರೋಪಿ ಮನೋಹರ್ ಹುಂದ್ರೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಇಬ್ಬರನ್ನೂ ಘೋಷಿತ ಅಪರಾಧಿಗಳು ಎಂದು ಪರಿಗಣಿಸಿ ಬಂಧನ ವಾರಂಟ್ ಹೊರಡಿಸಿತ್ತು. ಅದರಂತೆ ಕಳೆದ ಅಕ್ಟೋಬರ್ 22ರಂದು (ನವೆಂಬರ್ 1ರ ಕನ್ನಡ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಎಂಇಎಸ್ ಆಚರಿಸುವ ಕರಾಳ ದಿನಾಚರಣೆಗೂ ಮುನ್ನ) ಖಡೇಬಜಾರ್ ಪೊಲೀಸರು ಕಾರ್ಯಾಚರಣೆ ನಡೆಸಿ ಶುಭಂ ಶಳಕೆಯನ್ನು ಬಂಧಿಸಿ, ವೈದ್ಯಕೀಯ ತಪಾಸಣೆಯ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಆತನನ್ನು ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.
ಪದೇ ಪದೇ ಗಡಿ ವಿವಾದ ಕೆದಕುವ ರೌಡಿ ಶೀಟರ್
ಎಂಇಎಸ್ ಯುವ ಸಮಿತಿಯ ಅಧ್ಯಕ್ಷ ಎಂದು ಹೇಳಿಕೊಳ್ಳುವ ಶುಭಂ ಶಳಕೆ ವಿರುದ್ಧ ಬೆಳಗಾವಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಬೆಳಗಾವಿಯಲ್ಲಿ ಭಾಷಾ ವಿವಾದವನ್ನು ಕೆದಕುವುದು, ಕನ್ನಡಿಗರ ವಿರುದ್ಧ ಅವಹೇಳನಕಾರಿ ಮತ್ತು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ವಿಡಿಯೋಗಳನ್ನು ಹರಿಬಿಟ್ಟು ಶಾಂತಿ ಕದಡುವುದು ಈತನ ನಿತ್ಯದ ಕಾಯಕವಾಗಿದೆ. ಈತನ ಸಮಾಜಘಾತುಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ಈತನ ಹೆಸರಿನಲ್ಲಿ ಈಗಾಗಲೇ ರೌಡಿ ಶೀಟರ್ ಪಟ್ಟಿಯನ್ನೂ ತೆರೆದಿದ್ದಾರೆ.
ಈ ಹಿಂದೆಯೂ ಕನ್ನಡಿಗರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿ ಜೈಲು ಸೇರಿದ್ದ ಶುಭಂ ಶಳಕೆ, ಜಾಮೀನಿನ ಮೇಲೆ ಹೊರಬಂದಾಗಲೂ ಇದೇ ರೀತಿ ಪುಂಡಾಟಿಕೆ ಮೆರೆದಿದ್ದ. ಇದೀಗ ಮತ್ತೆ 36 ದಿನಗಳ ಜೈಲುವಾಸದ ನಂತರವೂ ಆತನಲ್ಲಿ ಯಾವುದೇ ಪಶ್ಚಾತ್ತಾಪ ಕಾಣದೆ ಇರುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಘೋಷಣೆ ಕೂಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಸಮೀಪಿಸುತ್ತಿರುವ ಹೊತ್ತಲ್ಲೇ ಎಂಇಎಸ್ ಪುಂಡರ ಇಂತಹ ವರ್ತನೆಗೆ ಪೊಲೀಸ್ ಇಲಾಖೆ ಮತ್ತಷ್ಟು ಕಠಿಣ ಕಾನೂನು ಕ್ರಮಗಳ ಮೂಲಕ ಮೂಗುದಾರ ಹಾಕಬೇಕು ಎಂದು ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.
#ShubhamShelke #MES #Belagavi #HindalgaJail #BelagaviNews #KarnatakaNews #KannadaActivists #BorderDispute #UdayakalaNews #CrimeNews #BelagaviPolice #Karnataka #MarathiControversy


