Saturday, November 14, 2026
Menu

ಬಳ್ಳಾರಿಯಲ್ಲಿ ಜಿಎಸ್‌ಟಿ ಮೆಗಾ ವಂಚನೆ : 350 ಕೋಟಿ ರೂ. ಮೋಸದ ಜಾಲದಲ್ಲಿ ಬಡ ಕುಟುಂಬ

ಉದಯಕಾಲ ನ್ಯೂಸ್, ಬಳ್ಳಾರಿ: ಬಿಸಿಲ ನಾಡು ಬಳ್ಳಾರಿ ನಗರದಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುವ ಬೃಹತ್ ಜಿಎಸ್‌ಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ತಿಂಗಳಿಗೆ ಕೇವಲ 15,000 ರೂ. ಸಂಬಳಕ್ಕೆ ಸಣ್ಣ ಕಂಪನಿಯೊಂದರಲ್ಲಿ ಸರ್ವಿಸ್ ಅಡ್ವೈಸರ್ ಆಗಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು, ಆತನ ಹೆಸರಿನಲ್ಲಿ ಬರೋಬ್ಬರಿ 350 ಕೋಟಿ ರೂ. ಜಿಎಸ್‌ಟಿ ವ್ಯವಹಾರ ನಡೆಸಿರುವ ವಂಚಕರ ಕೃತ್ಯ ಸೈಬರ್ ಪೊಲೀಸರನ್ನೇ ದಂಗಾಗಿಸಿದೆ. ಬಡತನದ ಬೇಗೆಯಲ್ಲಿರುವ ಯುವಕನ ಕುಟುಂಬಸ್ಥರು ಈ ದೈತ್ಯ ವಂಚನೆಯನ್ನು ಕಂಡು ಕಣ್ಣೀರುಹಾಕುತ್ತಿದ್ದು, ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಆಧಾರ್-ಪ್ಯಾನ್ ಕಾರ್ಡ್ ದುರ್ಬಳಕೆ: 5 ತಿಂಗಳಲ್ಲಿ 350 ಕೋಟಿ ವ್ಯವಹಾರ!

ಬಳ್ಳಾರಿಯ ರೋಷನ್ ಎಂಬ ಯುವಕನ ದಾಖಲೆಗಳಾದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ಮನೆ ಕರೆಂಟ್ ಬಿಲ್ ಅನ್ನು ವಂಚಕರು ಕದ್ದು ಅಥವಾ ನಕಲು ಮಾಡಿ ಈ ಕೃತ್ಯ ಎಸಗಿದ್ದಾರೆ. ಆದರೆ ವಂಚಕರು ನೊಂದ ಯುವಕನ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಬದಲಿಗೆ ತಮ್ಮದೇ ಆದ ಬೇರೆ ಸಂಖ್ಯೆಗಳನ್ನು ಬಳಸಿಕೊಂಡಿರುವುದರಿಂದ, ರೋಷನ್‌ಗೆ ಈ ಅಕ್ರಮ ವ್ಯವಹಾರದ ಸುಳುವೇ ಸಿಕ್ಕಿರಲಿಲ್ಲ.

‘ರೋಷನ್ ಎಂಟರ್‌ಪ್ರೈಸಸ್’ ಹೆಸರಿನಲ್ಲಿ ನಕಲಿ ಜಿಎಸ್‌ಟಿ ಖಾತೆ ತೆರೆದ ವಂಚಕರು, ಕೇವಲ ಐದೇ ತಿಂಗಳಲ್ಲಿ ಪ್ಲಾಸ್ಟಿಕ್ ವ್ಯಾಪಾರದ ನೆಪದಲ್ಲಿ ಅಕ್ಷರಶಃ 350 ಕೋಟಿ ರೂ.ಗಳ ಬೃಹತ್ ಜಿಎಸ್‌ಟಿ ವ್ಯವಹಾರ ನಡೆಸಿ ನಂತರ ಖಾತೆಯನ್ನೇ ಕ್ಲೋಸ್ ಮಾಡಿದ್ದಾರೆ. ನವೆಂಬರ್ 12ರಂದು ಜಿಎಸ್‌ಟಿ ಅಧಿಕಾರಿಗಳು ನೇರವಾಗಿ ರೋಷನ್ ಮನೆಗೆ ಭೇಟಿ ನೀಡಿ, ಯಾವ ಕಾರಣಕ್ಕಾಗಿ ಅಕೌಂಟ್ ಕ್ಲೋಸ್ ಮಾಡಿದ್ದೀರಿ? ಎಂದು ಪ್ರಶ್ನಿಸಿದಾಗಲೇ ಇಡೀ ಸಂಚು ಬಹಿರಂಗಗೊಂಡಿದೆ.

ಹಮಾಲಿ ಕೆಲಸ ಮಾಡುವ ತಂದೆ ಕಣ್ಣೀರು: ಸೈಬರ್ ಠಾಣೆಗೆ ದೂರು

ಎಸಿ ಗೋಡೌನ್‌ನಲ್ಲಿ ದಿನಗೂಲಿ ಹಮಾಲಿ ಕೆಲಸ ಮಾಡಿಕೊಂಡು ದಿನಕ್ಕೆ 700 ರೂ. ಸಂಪಾದಿಸುವ ತಂದೆ ಫಕೃದ್ದೀನ್ ಹಾಗೂ ತಾಯಿಗೆ ತಮ್ಮ ಮಗನ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿಗಳ ಹಣಕಾಸು ವಹಿವಾಟು ನಡೆದಿರುವ ವಿಷಯ ತಿಳಿದು ಆಘಾತವಾಯಿತು. ಕೆಲಸದಿಂದ ಮನೆಗೆ ಬಂದ ರೋಷನ್ ಕೂಡ ಈ ವಿಚಾರ ತಿಳಿದು ಬೆಚಲಿಹೋಗಿದ್ದಾರೆ. ತಕ್ಷಣವೇ ಜಿಎಸ್‌ಟಿ ಕಚೇರಿಗೆ ತೆರಳಿ ವಿಚಾರಿಸಿದರೂ ಸ್ಪಷ್ಟ ಉತ್ತರ ಸಿಗದ ಕಾರಣ, ಕುಟುಂಬ ಸಮೇತ ಬಳ್ಳಾರಿ ಸೈಬರ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ತಮ್ಮ ಅಮಾಯಕತೆಯ ಲಾಭ ಪಡೆದು ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ಅಕ್ರಮ ಹಣದ ವಹಿವಾಟು ನಡೆಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ರೋಷನ್ ಮತ್ತು ಕುಟುಂಬಸ್ಥರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಅಪರಾಧ ವಿಭಾಗದ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಜಿಎಸ್‌ಟಿ ವಂಚನೆಯ ಜಾಲದ ಬೆನ್ನುಬಿದ್ದಿದ್ದಾರೆ.
#BellaryNews #GSTFraud #CyberCrime #KarnatakaNews #RohanEnterprises #UdayakalaNews #FinancialFraud #PoliceInvestigation

Related Posts

Leave a Reply

Your email address will not be published. Required fields are marked *