ಐಪಿಎಲ್ ಬೆಟ್ಟಿಂಗ್‌ಗಾಗಿ ಸಾಲ ಮಾಡಿಕೊಂಡು ತೀರಿಸಲಾಗದೆ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದ ಅರಿಶಿನಕುಂಟೆ ಗ್ರಾಮದಲ್ಲಿ ನಡೆದಿದೆ.
ತಮಿಳುನಾಡಿನ ಸಿಂಗಸದನಪಲ್ಲಿ ಗ್ರಾಮದ ಶಿವಕುಮಾರ್ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ಆರು ವರ್ಷದಿಂದ ನೆಲಮಂಗಲದ ಕಾರ್ ಗ್ಯಾರೇಜ್‌ನಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ. ಎರಡು ದಿನಗಳ ಹಿಂದೆ ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೂ ಮೊದಲು ಸೆಲ್ಫಿ ವೀಡಿಯೊ ಮಾಡಿ, ನನ್ನ ಸಾವಿಗೆ ನಾನೇ ಕಾರಣ, ಬೇರೆ ಯಾರೂ ಅಲ್ಲ. ಸಾಲ ಮಾಡಿಕೊಂಡು ನನಗೆ ಬದುಕಲು ಇಷ್ಟ ಇಲ್ಲ. ನನ್ನ ಸ್ನೇಹಿತ ನನಗೆ ತುಂಬಾ ಹೆಲ್ಪ್ ಮಾಡಿದ್ದಾನೆ. ನಾನೇ ಆತ್ಮಹತ್ಯೆ ಮಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾನೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಡಬ್ಲ್ಯುಡಿ ಎಂಜಿನಿಯರ್ ಆತ್ಮಹತ್ಯೆ
ಪಾವಗಡ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿದ್ದ ಮಂಜುಪ್ರಸಾದ್(33) ದೇವರಾಯನದುರ್ಗ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತುಮಕೂರಿನ ಸತ್ಯಮಂಗಲ ನಿವಾಸಿಯಾಗಿದ್ದ ಮಂಜುಪ್ರಸಾದ್ ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಅವರ ತಾಯಿ ಒಂದೂವರೆ ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಬಳಿಕ ಮಂಜುಪ್ರಸಾದ್ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿ, ಮಾನಸಿಕ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
ಸೋಮವಾರ ಬೆಳಗ್ಗೆ ಕೆಲಸಕ್ಕೆ ಹೋಗುವುದಾಗಿ ಮನೆಯಿಂದ ಹೊರಟಿದ್ದ ಅವರು ಕೊರಟಗೆರೆಯಲ್ಲಿ ಸಂಬಂಧಿಕರಿಗೆ ಮೊಬೈಲ್ ಮತ್ತು ಮನೆಯ ಕೀ ಕೊಟ್ಟಿದ್ದರು. ಮೀಟಿಂಗ್ ಇದೆ ಎಂದು ಹೇಳಿ ದೇವರಾಯನದುರ್ಗಕ್ಕೆ ಬಂದು ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


