Thursday, January 30, 2025
Menu

ಹಾಸನದಲ್ಲಿ ಪ್ರಿಯಕರನೊಂದಿಗೆ ಸೇರಿ ಸುಪಾರಿ ನೀಡಿ ಪತಿಯ ಕೊಲೆಗೈದ ಪತ್ನಿ

ಚನ್ನರಾಯಪಟ್ಟಣದ ಮರುವನಹಳ್ಳಿ-ಮಡಬ ರಸ್ತೆಯಲ್ಲಿ ನಡೆದಿದ್ದ ವ್ಯಕ್ತಿಯ ಕೊಲೆ ಪ್ರಕರಣದ ತನಿಖೆ ನಡೆಸಿರುವ ಪೊಲೀಸರಿಗೆ ಮಹತ್ವದ ಮಾಹಿತಿ ಲಭಿಸಿದೆ. ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು ಬಯಲಾಗಿದೆ.

ಮರುವನಹಳ್ಳಿ-ಮಡಬ ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ನಂಜುಂಡೇಗೌಡ ಎಂಬವರ ಹತ್ಯೆಯಾಗಿತ್ತು. ಪೊಲೀಸರು ತನಿಖೆ ಆರಂಭಿಸಿದಾಗ, ಗ್ರಾಮಸ್ಥರು ನಂಜುಂಡೇಗೌಡರ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಮಾಹಿತಿ ನೀಡಿದ್ದರು.

ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಯ ಕಾರಣ ಬಹಿರಂಗಗೊಂಡಿದೆ. 14 ವರ್ಷಗಳ ಹಿಂದೆ ನಂಜುಂಡೇಗೌಡರ ಮದುವೆಯಾಗಿತ್ತು. ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಜೊತೆ ಕುಂಬಾರಹಳ್ಳಿಯಲ್ಲಿ ವಾಸವಿದ್ದರು. ಮದುವೆಯಾಗಿ ಮೂರು ವರ್ಷದ ನಂತರ ಪತ್ನಿ ಎದುರು ಮನೆಯ ಅರುಣ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು. ಅರುಣ್‌ಗೆ ಇಬ್ಬರು ಮಕ್ಕಳಿದ್ದು, ಪತ್ನಿಯಿಂದ ದೂರವಿದ್ದ. ಅಕ್ರಮ ಸಂಬಧದ ವಿಚಾರವಾಗಿ ನಂಜುಂಡೇಗೌಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ರಾಜಿ ಪಂಚಾಯ್ತಿ ನಡೆಸಿ ಹೊಂದಿಕೊಂಡು ಹೋಗುವಂತೆ ಕುಟುಂಬಸ್ಥರು ತಿಳುವಳಿಕೆ ಹೇಳಿದ್ದರು.

ಅಕ್ರಮ ಸಂಬಂಧಕ್ಕೆ ಯಾರೂ ಅಡ್ಡಿ ಬರಬಾರದೆಂದು ಪತಿಯನ್ನು ಅವರ ಸಂಬಂಧಿಕರಿಂದ ಮಹಿಳೆ ದೂರ ಮಾಡಿದ್ದಳು. ಎರಡು ಹೆಣ್ಣುಮಕ್ಕಳಿಗಾಗಿ ನಂಜುಂಡೇಗೌಡ ಎಲ್ಲವನ್ನು ಸಹಿಸಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಎರಡು ಬಾರಿ ನಂಜುಂಡೇಗೌಡರ ಮೇಲೆ ಅರುಣ್ ಮತ್ತು ಗ್ಯಾಂಗ್ ದಾಳಿ ಮಾಡಿತ್ತು. ಅದೃಷ್ಟವಶಾತ್ ಬಚಾವಾಗಿದ್ದರು. ಮೂರನೇ ಬಾರಿ ಮಿಸ್ ಆಗಬಾರದು ಎಂದು ಮೂರು ಕಡೆ ಕೊಲೆ ಮಾಡಲು ಹಂತಕರು ಸ್ಕೆಚ್ ಹಾಕಿದ್ದರು. ಬ್ಯಾಡರಹಳ್ಳಿಗೆ ಹೋಗುವ ರಸ್ತೆ ಮಧ್ಯೆಯಿರುವ ಬಾರೆಯ ಬಳಿ ಮರದಪಟ್ಟಿಗೆ ಉದ್ದವಾದ 50ಕ್ಕೂ ಹೆಚ್ಚು ಮೊಳೆ ಹೊಡೆದು, ಹುಲ್ಲಿನಿಂದ ಮುಚ್ಚಿ ವಾಹನ ಪಂಚರ್ ಮಾಡಿದ್ದರು. ಪಂಚರ್ ಆದ ವಾಹನದಿಂದ ಇಳಿಯುತ್ತಿದ್ದಂತೆ ಕಣ್ಣಿಗೆ ಖಾರದ ಪುಡಿ ಎರಚಿ ಲಾಂಗ್‌ನಿಂದ ದಾಳಿ ನಡೆಸಿ ಹತ್ಯೆಗೈದಿದ್ದರು.

ಹತ್ಯೆಯ ವಿಚಾರ ಮಹಿಳೆಗೆ ತಿಳಿಯುತ್ತಿದ್ದಂತೆ ಅರ್ಧ ಗಂಟೆ ಮೂರ್ಛೆ ಹೋದಂತೆ ಮಹಿಳೆ ನಟಿಸಿದ್ದಳು .ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *