ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಪ್ರಕರಣದಿಂದ ರಾಜ್ಯದ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿರುವುದು ಸಹಜ. ಆದರೆ ಅದರ ಹಿಂದೆ ತಾನು ಇಲ್ಲ ಹಾಗೂ ಪಕ್ಷಕ್ಕೆ ದ್ರೋಹ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಡಿಕೆ ಶಿವಕುಮಾರ್ ಜತೆ ನನಗೆ ಯಾವುದೇ ವ್ಯಾವಹಾರಿಕ ಅಥವಾ ಆತ್ಮೀಯ ಸಂಬಂಧ ಇಲ್ಲ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳಕ್ಕೆ ಆಗಮಿಸುವ ಮೊದಲು ನಾಲ್ಕು ದಿನ ನವದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರನ್ನು ಭೇಟಿ ಆಗಿದ್ದೇನೆ. ರಾಜ್ಯ ವಿಧಾನ ಪರಿಷತ್ ಚುನಾವಣೆಯ ಅಡ್ಡಮತದಾನದಿಂದ ಲಕ್ಷಾಂತರ ಬಿಜೆಪಿ ಕಾರ್ಯಕರ್ತರಿಗೆ ನೋವಾಗಿದೆ ಎಂದು ತಿಳಿಸಿದರು.
ಈ ವಿಚಾರ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ತಮಗೂ ವೈಯಕ್ತಿಕವಾಗಿ ನೋವಾಗಿದೆ. ಧರ್ಮಸ್ಥಳದಲ್ಲಿ ಸತ್ಯಾಸತ್ಯತೆ ಬಹಿರಂಗಪಡಿಸುವ ಬಗ್ಗೆ ಭಾವನಾತ್ಮಕವಾಗಿ ಹೇಳಿದ್ದೆ. ಆದರೆ ಪಕ್ಷದ ಹಿರಿಯ ನಾಯಕರು ಆ ಹಂತಕ್ಕೆ ಹೋಗುವುದು ಸೂಕ್ತವಲ್ಲ ಎಂದು ಸಲಹೆ ನೀಡಿದ್ದರಿಂದ ಆ ವಿಚಾರವನ್ನು ಮುಂದುವರಿಸಲಿಲ್ಲ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಆಶೀರ್ವಾದದಿಂದ ರಾಜ್ಯ ಘಟಕದ ಅಧ್ಯಕ್ಷನ ಜವಾಬ್ದಾರಿ ದೊರೆತಿದ್ದು, ಪಕ್ಷಕ್ಕೆ ದ್ರೋಹ ಮಾಡುವ ಅಥವಾ ಕೀಳುಮಟ್ಟದ ರಾಜಕೀಯ ನಡೆಸುವ ಪ್ರಶ್ನೆಯೇ ಇಲ್ಲ ಎಂದರು.
ಕಾಂಗ್ರೆಸ್ ಉದ್ದೇಶಪೂರ್ವಕವಾಗಿಯೇ ಹೆಸರುಗಳನ್ನು ತೇಲಿಬಿಟ್ಟು ಬಿಜೆಪಿ ಶಾಸಕರ ಬಗ್ಗೆ ಅನುಮಾನ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಒಬ್ಬ ಭಕ್ತನಾಗಿ ಧರ್ಮಸ್ಥಳಕ್ಕೆ ಬಂದಿದ್ದೇನೆ. ಸಮಯ ಬಂದಾಗ ಸತ್ಯ ಇಂದು ಅಲ್ಲದಿದ್ದರೂ ನಾಳೆ ಹೊರ ಬರುತ್ತದೆ. ಕೇಂದ್ರ ನಾಯಕತ್ವಕ್ಕೂ ಎಲ್ಲ ಮಾಹಿತಿ ಇದೆ. ತನಗೆ ಯಾವುದೇ ತನಿಖಾ ವರದಿ ಬಂದಿಲ್ಲ ಎಂದು ತಿಳಿಸಿದರು.
ಎಸ್.ಟಿ. ಸೋಮಶೇಖರ್ ಸೇರಿದಂತೆ ಕೆಲವು ಶಾಸಕರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ನೀಡಿದ ಅಭಿಪ್ರಾಯವನ್ನು ಉತ್ತಮ ಉದ್ದೇಶದಿಂದ ಸ್ವಾಗತಿಸುತ್ತೇನೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಆರೋಪಗಳಿಗೆ ಹೆಚ್ಚಿನ ಮಹತ್ವ ನೀಡುವುದಿಲ್ಲ. ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತೇನೆ ಎಂದರು.
ಬರುವ ದಿನಗಳಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಮತ್ತಷ್ಟು ಬಲ ತುಂಬಲಾಗುವುದು. ಕಾರ್ಯಕರ್ತರ ಶಕ್ತಿಯ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಜನ ವಿರೋಧಿ ಹಾಗೂ ರೈತ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಜನರ ಬೆಂಬಲದೊಂದಿಗೆ ಅಧಿಕಾರದಿಂದ ಕೆಳಗಿಳಿಸುವ ವಿಶ್ವಾಸವಿದೆ ಎಂದು ಹೇಳಿದರು.
ಬಿಡದಿ ಭೂಸ್ವಾಧೀನ ವಿಚಾರದಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದೆ. ಮತದಾರರ ಪಟ್ಟಿಯಲ್ಲಿ ಅಕ್ರಮ ಹೆಸರು ಸೇರ್ಪಡೆ ಪ್ರಕರಣದಲ್ಲೂ ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ ಎಂದು ವಿಜಯೇಂದ್ರ ದೂರಿದರು.


