ವ್ಯಕ್ತಿಯೊಬ್ಬ ಗಾಢ ನಿದ್ರೆಯಲ್ಲಿದ್ದ ಪತ್ನಿಯನ್ನು ಕೊಚ್ಚಿಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ನಡೆದಿದೆ. ಅಥಣಿ ತಾಲೂಕಿನ ಖಾವತ್‌ಖೋಪ್ ಗ್ರಾಮದ ಮೂಲದ ಶೋಭಾ ಪರಗೊಂಡ ಸರ್ವಾಡ್ ಕೊಲೆಯಾದ ಮಹಿಳೆ, ಪರಗೊಂಡ ಸರ್ವಾಡ್ ಕೊಲೆ ಆರೋಪಿ ಪತಿ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಪತ್ನಿಯ ನಡತೆ ಬಗ್ಗೆ ಅನುಮಾನದಿಂದ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.
ಅಥಣಿ ತಾಲೂಕಿನ ಖವಟಕೊಪ್ಪ ಗ್ರಾಮದ ಈ ದಂಪತಿ ಉದ್ಯೋಗದ ನಿಮಿತ್ತ ಕಟಗೇರಿ ಗ್ರಾಮದ ಆವಜೀಕರ ಮಠದಲ್ಲಿ ವಾಸವಾಗಿದ್ದರು. ಶೋಭಾ ಮಠದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರೆ, ಪರ್ಗೊಂಡ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ.
ಕೆಲವು ದಿನಗಳಿಂದ ಪತ್ನಿಯ ನಡತೆ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಆರೋಪಿ ಆಗಾಗ ಜಗಳವಾಡುತ್ತಿದ್ದ. ಹೀಗೆ ಅನುಮಾನ ತೀವ್ರಗೊಂಡು ಶೋಭಾ ನಿದ್ರೆಯಲ್ಲಿದ್ದ ವೇಳೆ ಆರೋಪಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ವಿಷಯ ತಿಳಿದ ಅಥಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಂಡು ಮಗು ಹುಟ್ಟಿದ್ದಕ್ಕೆ ಪಾರ್ಟಿ ಕೇಳಿದ ಸ್ನೇಹಿತನ ಕೊಲೆ
ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಗಂಡು ಮಗು ಹುಟ್ಟಿದಕ್ಕೆ ಪಾರ್ಟಿ ಕೇಳಿದ ಸ್ನೇಹಿನನ್ನು ಕಲ್ಲಿನಿಂದ ಜಜ್ಜಿಗಿ ಹತ್ಯೆ ಮಾಡಿದ ಘಟನೆ ಕಳೆದ ಶುಕ್ರವಾರ ನಡೆದಿದೆ.
ಗ್ರಾಮದ ಹಣಮಂತಪ್ಪ ಯಮನಪ್ಪ ಇಟಗಿ ಕೊಲೆಯಾದ ವ್ಯಕ್ತಿ, ಗೆಳೆಯ ವಿಶ್ವನಾಥ ಪೂಜೇರಿ ಕೊಲೆ ಆರೋಪಿ. ಮದ್ಯದ ಅಮಲಿನಲ್ಲಿ ಗ್ರಾಮದ ಕಟ್ಟೆಯಲ್ಲಿ ಕುಳಿತುಮ ಇಬ್ಬರೂ ಹರಟೆ ಹೊಡೆಯುತ್ತಿದ್ದರು. ಗಂಡು ಮಗು ಹುಟ್ಟಿದಕ್ಕೆ ವಿಶ್ವನಾಥ್ ಬಳಿ ಹಣಮಂತಪ್ಪ ಪಾರ್ಟಿ ಕೇಳಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ಮಾತು ಬೆಳೆದು ಗಲಾಟೆ ನಡೆದಿದೆ.
ಗಲಾಟೆ ವೇಳೆ ವಿಶ್ವನಾಥನ ಕಣ್ಣಿಗೆ ರಭಸವಾಗಿ ಹಣಮಂತಪ್ಪ ಬೆರಳು ತಾಗಿದೆ. ಈ ಸಿಟ್ಟಲ್ಲಿ ಕಲ್ಲಿನಿಂದ ಹಣಮಂತ ತಲೆಗೆ ಆರೋಪಿ ಹೊಡೆದಿದ್ದಾನೆ. ರಕ್ತಸ್ರಾವವಾಗಿ ಹಣಮಂತಪ್ಪ ಸ್ಥಳದಲ್ಲೇ ಅಸು ನೀಗಿದ್ದಾನೆ. ತಲೆಮರೆಸಿಕೊಂಡಿದ್ದ ಆರೋಪಿಯನ್ನು ನೇಸರಗಿ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.


