Wednesday, October 14, 2026
Menu

ಹುಲಿಕಲ್‌ ಘಾಟ್‌ ಗುಡ್ಡ ಕುಸಿತ: ಮೂವರು ಕಾರ್ಮಿಕರ ಶವಗಳೂ ಪತ್ತೆ

ಶಿವಮೊಗ್ಗದ ಹುಲಿಕಲ್‌ ಘಾಟ್‌ನಲ್ಲಿ ಗುಡ್ಡ ಕುಸಿದು ಮೃತಪಟ್ಟಿದ್ದವರಲ್ಲಿ ಮತ್ತೊಬ್ಬ ಕಾರ್ಮಿಕನ ಶವ ಪತ್ತೆಯಾಗಿದೆ. ಇಬ್ಬರ ಶವ ಈಗಾಗಲೇ ಪತ್ತೆಯಾಗಿತ್ತು. ಶುಕ್ರವಾರ ಮುಂಜಾನೆ 3 ಗಂಟೆ ಕಾರ್ಮಿಕ ಶಬ್ಬೀರ್ (40) ಮೃತದೇಹ ಸಿಕ್ಕಿದೆ.

ಘಾಟ್‌ನ ಹೇರ್ ಪಿನ್ ಕ್ರಾಸ್ ನಲ್ಲಿ ಕಾಂಕ್ರೀಟ್ ವಾಲ್ ದುರಸ್ತಿ ವೇಳೆ ಭೂ ಕುಸಿತ ಸಂಭವಿಸಿತ್ತು. ಕಾಮಗಾರಿ ಮೇಲ್ವಿಚಾರಕ ಚಕ್ಕಾರು ಗ್ರಾಮದ ರಾಘು (37), ಹಾವೇರಿ ಜಿಲ್ಲೆಯ ನೆಲಗಲು ಗ್ರಾಮದ ರಾಜು (30) ಮೃತಪಟ್ಟಿದ್ದರು. ಇಬ್ಬರ ಶವ ಗುರುವಾರ ಪತ್ತೆಯಾಗಿದ್ದವು. ದುರಂತದಲ್ಲಿ ಗಾಯಗೊಂಡ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳದಲ್ಲಿ ಎಸ್‌ಡಿಆರ್‌ಎಫ್, ಅಗ್ನಿಶಾಮಕ ಹಾಗೂ ಪೊಲೀಸ್‌ ಸಿಬ್ಬಂದಿ ರಕ್ಷಣಾ ಕಾರ್ಯ ಕೈಗೊಂಡಿದ್ದರು.

ಈ ಕುಸಿತದಿಂದಾಗಿ ಮಲೆನಾಡು-ಕರಾವಳಿ ಸಂಪರ್ಕಿಸುವ ಈ ಮಾರ್ಗದಲ್ಲಿ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ವಾಹನಗಳನ್ನು ನಾಗೋಡಿ-ಕೊಲ್ಲೂರು ಮಾರ್ಗದ ಮೂಲಕ ಕಳುಹಿಸಲಾಗಿತ್ತು.

ಹುಲಿಕಲ್ ಘಾಟಿ ತಿರುವಿನಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿಯ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತಪಟ್ಟ ಸುದ್ದಿ ಕೇಳಿ‌ ದುಃಖವಾಯಿತು. ಮೃತ ದುರ್ದೈವಿ ಕಾರ್ಮಿಕರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ಸದಸ್ಯರಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಘಟನೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರೊಂದಿಗೆ ಮಾತುಕತೆ ನಡೆಸಿ, ಮಾಹಿತಿ ಪಡೆದಿದ್ದೇನೆ. ಕುಟುಂಬಕ್ಕೆ ಆಧಾರವಾಗಿದ್ದ ದುಡಿಯುವ ಜೀವಗಳು ಈ ಘಟನೆಯಲ್ಲಿ ಬಲಿಯಾಗಿದ್ದು, ಮಾನವೀಯ ನೆಲೆಯಲ್ಲಿ ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *