Menu

ಮದುವೆ ಮಂಟಪದಿಂದ ಹನಿಮೂನ್‌ಗೆ ತೆರಳುತ್ತಿದ್ದಾಗ ಹೆಲಿಕಾಪ್ಟರ್‌ ಪತನ: ವರ, ಪೈಲಟ್‌ ಸಾವು

ಮದುವೆ ಸಂಭ್ರಮದಿಂದ ಹನಿಮೂನ್‌ಗೆ ತೆರಳುತ್ತಿದ್ದ ಜೋಡಿಯಿದ್ದ ಹೆಲಿಕಾಪ್ಟರ್‌ ಅಮೆರಿಕದ ಜಾರ್ಜಿಯಾದಲ್ಲಿ ಪತನಗೊಂಡಿದ್ದು, ಕೇರಳದ ವರ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ವಧು ಗಂಭೀರ ಗಾಯಗೊಂಡಿದ್ದಾರೆ.

ಮೃತಪಟ್ಟ ವರ ಕೇರಳದ 26 ವರ್ಷದ ಡೇವ್ ಫಿಜಿ, ವೃತ್ತಿಯಲ್ಲಿ ಪೈಲಟ್‌ ಆಗಿದ್ದವರು, ಮದುವೆ ಸಮಾರಂಭದ ಬಳಿಕ ದಂಪತಿ ಹನಿಮೂನ್‌ಗೆ ತೆರಳುತ್ತಿದ್ದಾಗ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಡಾಸನ್‌ವಿಲ್ಲೆಯಲ್ಲಿರುವ ಮದುವೆ ಮಂಟಪದ ಬಳಿಯೇ ಪತನಗೊಂಡಿದೆ.

ಅಪಘಾತದಲ್ಲಿ ಹೆಲಿಕಾಪ್ಟರ್‌ನ ಮುಖ್ಯ ಪೈಲಟ್ ಕೂಡ ಅಸು ನೀಗಿದ್ದು, ಗುರುತು ಇನ್ನೂ ಪತ್ತೆಯಾಗಿಲ್ಲ. ಡೇವ್ ಪತ್ನಿ ಜೆಸ್ನಿ ತೀವ್ರವಾಗಿ ಗಾಯಗೊಂಡಿದ್ದು, ಅಟ್ಲಾಂಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೃತ್ತಿಯಲ್ಲಿ ಆಕೆ ನರ್ಸ್ ಎಂದು ತಿಳಿದುಬಂದಿದೆ.

ಮೃತ ಡೇವ್ ತಂದೆ ಜಾರ್ಜ್ ಫಿಜಿ ಅವರು ಮಾತನಾಡಿ, ನನ್ನ ಮಗ ಅಷ್ಟೊಂದು ಸಂತೋಷವಾಗಿದ್ದನ್ನು ನಾನು ಯವತ್ತೂ ನೋಡಿರಲಿಲ್ಲ. ಅದೆಲ್ಲ ಕೆಲವೇ ಗಂಟೆಗಳಲ್ಲೇ ಅಂತ್ಯವಾಗಿ ಹೋಗಿದೆ ಎಂದು ಮಾಧ್ಯಮಗಳ ಕಣ್ಣೀರಿಟ್ಟಿದ್ದಾರೆ.

ಹತ್ತು ವರ್ಷಗಳ ಹಿಂದೆ ಜೆಸ್ನಿ ಚರ್ಚ್‌ನಲ್ಲಿ ಡೇವ್‌ ಅವರಿಗೆ ಪರಿಚಯವಾಗಿದ್ದರು. ಡಾಸನ್‌ವಿಲ್ಲೆಯ ರೆಸಾರ್ಟ್‌ವೊಂದರಲ್ಲಿ ಅದ್ಧೂರಿ ವಿವಾಹ ನಡೆದಿದ್ದು, 400ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು. ನಂತರ ದಂಪತಿ ಜಾರ್ಜಿಯಾದ ಡೆಕಾಲ್ಬ್-ಪೀಚ್‌ಟ್ರೀ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿತ್ತು. ಅವರು ಅಟ್ಲಾಂಟಾದ ಹೋಟೆಲ್‌ಗೆ ತೆರಳಬೇಕಿತ್ತು. ಹೆಲಿಕಾಪ್ಟರ್ ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ನಿಯಂತ್ರಣ ಕಳೆದುಕೊಂಡು ಸಮೀಪದ ದಟ್ಟ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ.

ದಟ್ಟ ಅರಣ್ಯ ಪ್ರದೇಶದಲ್ಲಿ ಅಪಘಾತ ನಡೆದಿದ್ದರಿಂದ ರಕ್ಷಣಾ ಸಿಬ್ಬಂದಿಗೆ ಹೆಲಿಕಾಪ್ಟರ್ ಪತ್ತೆಹಚ್ಚುವುದು ಕಷ್ಟಕರವಾಗಿತ್ತು. ಗಾಯಗೊಂಡಿದ್ದ ಪತ್ನಿ ಜೆಸ್ನಿ ಆರು ಗಂಟೆ ಅವಶೇಷಗಳ ಮಧ್ಯೆ ಸಿಲುಕಿಕೊಂಡಿದ್ದರು. ಪ್ರಜ್ಞೆ ಬಂದಾಗ ಪತಿ ಡೇವ್ ಮಡಿಲಲ್ಲಿ ಮಲಗಿದ್ದರು, ದೇಹವೆಲ್ಲ ರಕ್ತಸಿಕ್ತವಾಗಿ ಸಂಪೂರ್ಣ ತಣ್ಣಗಾಗಿತ್ತು ಎಂದು ಕಣ್ಣೀರಿಟ್ಟಿದ್ದಾರೆ.

ಪೈಲಟ್ ಆಗಿದ್ದಡೇವ್‌ ಹೆಲಿಕಾಪ್ಟರ್ ಹತ್ತುವ ಮುನ್ನವೇ ಹವಾಮಾನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ದಟ್ಟ ಮಂಜು ಕವಿದಿದೆ, ಏನೂ ಕಾಣಿಸುತ್ತಿಲ್ಲ ಇಂತಹ ಹವಾಮಾನದಲ್ಲಿ ನಾವು ಪ್ರಯಾಣಿಸುವುದಿಲ್ಲ ಎಂದು ಪೈಲಟ್‌ಗೆ ತಿಳಿಸಿದ್ದರು. ಆದರೆ ಪೈಲಟ್ ನಾವು ಇನ್ನೂ ಎತ್ತರದಲ್ಲಿ ಹಾರಾಟ ನಡೆಸುತ್ತೇವೆ, ಹೀಗಾಗಿ ಏನೂ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದರು ಎನ್ನಲಾಗಿದೆ. ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಘಟನೆ ಕುರಿತು ತನಿಖೆ ಆರಂಭಿಸಿದೆ.

Related Posts

Leave a Reply

Your email address will not be published. Required fields are marked *