ಉದಯಕಾಲ ನ್ಯೂಸ್, ಮಂಡ್ಯ: ಕಾವೇರಿ ಜಲಾನಯನ ಪ್ರದೇಶ ಹಾಗೂ ಕೊಡಗು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿರುವ ಹಿನ್ನೆಲೆಯಲ್ಲಿ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಜೀವನಾಡಿ ಕೃಷ್ಣರಾಜಸಾಗರ (KRS) ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಇದು ದಶಕದ ಬೆಳೆಗಳಿಗೆ ನೀರು ಹಾಯಿಸಲು ಚಿಂತೆಯಲ್ಲಿದ್ದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಜಲಾಶಯದ ಇಂದಿನ ನೀರಿನ ಮಟ್ಟದ ವಿವರ
ಗರಿಷ್ಠ ಮಟ್ಟ:124.80 ಅಡಿ
ಪ್ರಸ್ತುತ ನೀರಿನ ಮಟ್ಟ: 101.26 ಅಡಿ (ಸುಮಾರು)
ಒಳಹರಿವು: 4,918 ಕ್ಯೂಸೆಕ್ಗೂ ಅಧಿಕ ಏರಿಕೆ
ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
ಪ್ರಸ್ತುತ ನೀರಿನ ಸಂಗ್ರಹ: 23.814 ಟಿಎಂಸಿ
ಮಳೆಯಿಂದಾಗಿ ಚಿಗುರಿದ ಕೃಷಿ ಚಟುವಟಿಕೆಗಳ ಆಸೆ
ಕಳೆದ ಕೆಲವು ದಿನಗಳಿಂದ ಮಳೆಯ ಕೊರತೆ ಹಾಗೂ ಕುಸಿದಿದ್ದ ಒಳಹರಿವಿನಿಂದಾಗಿ ಜಲಾಶಯದ ನೀರಿನ ಮಟ್ಟ ತೀವ್ರ ಕುಸಿತ ಕಂಡಿತ್ತು. ಇದರಿಂದ ಮಂಡ್ಯ, ಮೈಸೂರು ಹಾಗೂ ಬೆಂಗಳೂರು ನಗರಗಳಿಗೆ ಕುಡಿಯುವ ನೀರಿನ ಸಮಸ್ಯೆ ಜತೆಗೆ ಮುಂಗಾರು ಹಾಗೂ ಹಿಂಗಾರು ಬೆಳೆಗಳ ಉಳಿವಿಗಾಗಿ ರೈತರು ಆತಂಕಗೊಂಡಿದ್ದರು. ಆದರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಈಗ ಮತ್ತೆ ಮಳೆ ಚುರುಕುಗೊಂಡಿರುವುದರಿಂದ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣ ಒಂದೇ ಸಮನೆ ಹೆಚ್ಚಾಗುತ್ತಿದ್ದು, ರೈತರಲ್ಲಿ ಹೊಸ ಹುರುಪು ಹಾಗೂ ಭರವಸೆ ಹುಟ್ಟಿಸಿದೆ. ಜಲಾಶಯದ ನೀರಿನ ಮಟ್ಟ ಮತ್ತಷ್ಟು ಏರಿಕೆಯಾದರೆ ಮುಂದಿನ ಕೃಷಿ ಹಂಗಾಮಿಗೆ ಹಾಗೂ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
#KRSDam #Mandya #CauveryBasin #KarnatakaRains #MandyaFarmers #UdayakalaNews #KRSDamWaterLevel #KarnatakaNews #FarmersJoy


