ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಬಿರುಸುಗೊಂಡಿರುವ ಬೆನ್ನಲ್ಲೇ, ಜೆಡಿಎಸ್ ನಾಯಕರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ನೇರ ವಾಗ್ದಾಳಿ ನಡೆಸಿದ್ದಾರೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವವರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಎಡಗೈ ಮತ್ತು ಬಲಗೈ ಬಂಟರೇ ಆಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸ್ಟಿಂಗ್ ಪ್ರಕರಣದಲ್ಲಿ ಪೊಲೀಸರು ನೋಟಿಸ್ ನೀಡಿದ ಬಳಿಕ ದಿಢೀರ್ ಎಂದು ನಾಪತ್ತೆಯಾಗಿರುವ ವ್ಯಕ್ತಿಗಳು ಬೇರಾರೂ ಅಲ್ಲ, ಅದು ಕುಮಾರಸ್ವಾಮಿ ಅವರ ಎಡಗೈ-ಬಲಗೈ ಬಂಟರೇ ಆಗಿದ್ದಾರೆ. ಅವರನ್ನು ಪೋಷಿಸಿ ಯಾರ ಮನೆಯಲ್ಲಿ ಗುಪ್ತವಾಗಿ ಬಚ್ಚಿಡಲಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.
ಅಬ್ಸ್ಕ್ಯಾಂಡ್ ಆಗಿರುವವರು ಯಾರು ಎಂದು ಕುಮಾರಸ್ವಾಮಿ ಅವರನ್ನೇ ಕೇಳಿ, ಅವರೇ ಹೇಳ್ತಾರೆ. ಅವರನ್ನು ಕರೆಸಿ ಹೊರಗೆ ಕಳುಹಿಸಲಿ, ಆಗ ಎಲ್ಲಾ ಸತ್ಯ ಬಯಲಾಗುತ್ತದೆ ಎಂದು ಖರ್ಗೆ ಸವಾಲು ಹಾಕಿದ್ದಾರೆ. ಕುಮಾರಸ್ವಾಮಿ ಅವರು ಯಾವುದೋ ಹಳೆ ಪ್ರಕರಣಗಳನ್ನು (ವಿಕ್ಕಿ ಹತ್ಯೆ ವಿಚಾರ) ಮುನ್ನೆಲೆಗೆ ತಂದು ಈಗ ಮಾತನಾಡುತ್ತಿದ್ದಾರೆ.ಅವರ ಬಳಿ ದಾಖಲೆಗಳಿದ್ದರೆ ದೂರು ನೀಡಲಿ, ತನಿಖೆ ಮಾಡಿಸೋಣ. ಆದರೆ ತಮ್ಮ ವೈಯಕ್ತಿಕ ದ್ವೇಷಗಳನ್ನು ಸರ್ಕಾರದ ಮುಖಾಂತರ ತೀರಿಸಿಕೊಳ್ಳಲು ಯತ್ನಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಪಾರದರ್ಶಕ ತನಿಖೆ ಹಾಗೂ ಕಾನೂನು ಕ್ರಮ
ಈ ಸ್ಟಿಂಗ್ ಆಪರೇಷನ್ ಹಿಂದೆ ದೊಡ್ಡ ಮಟ್ಟದ ಕ್ರಿಮಿನಲ್ ಸಂಚು ಅಡಗಿದೆ ಎಂದು ಪುನರುಚ್ಚರಿಸಿರುವ ಪ್ರಿಯಾಂಕ್ ಖರ್ಗೆ, ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯುತ್ತಿದೆ ಎಂದಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೌರವಕ್ಕೆ ಧಕ್ಕೆ ತರುವ ಹಾಗೂ ಸರ್ಕಾರದ ವರ್ಚಸ್ಸು ಕೆಡಿಸುವ ಈ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಮುಖಾಮುಖಿ ಮಾಡಲಾಗುವುದು. ಯಾವುದೇ ರಾಜಕೀಯ ಒತ್ತಡವಿಲ್ಲದೆ ತನಿಖೆ ಮುಂದುವರಿದಿದ್ದು, ತಪ್ಪಿತಸ್ಥರು ಕಾನೂನಿನ ಬಲೆಗೆ ಬರುವುದು ಖಚಿತ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
#PriyankKharge #HDKumaraswamy #StingOperationCase #JDS #CongressVsJDS #UdayakalaNews #KarnatakaPolitics #Siddaramaiah #CCBBengaluru


