Menu

ಅಡ್ಡ ಮತದಾನ-ಪಕ್ಷ ವಿಭಜನೆ-ಸೇರ್ಪಡೆ ವಾಮಮಾರ್ಗ

ಪ್ರಜಾಪ್ರಭುತ್ವದಲ್ಲಿ ಒಂದು ರಾಜಕೀಯ ಪಕ್ಷದ ಚಿನ್ಹೆಯಲ್ಲಿ ಗೆದ್ದ ಮೇಲೆ ಐದು ವರ್ಷ ಆ ಪಕ್ಷದಲ್ಲಿರುವುದು ಧರ್ಮ. ಒಂದು ವೇಳೆ ಪಕ್ಷದ ನೀತಿ ನಿಯಮ ಒಪ್ಪಿಗೆ ಆಗದಿದ್ದಲ್ಲಿ ಚುನಾಯಿತ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಜನರ ಮುಂದೆ ಮತ್ತೆ ಹೋಗಬೇಕು. ಜನಮನ್ನಣೆ ಪಡೆದು ಬರಬೇಕು.

ಈಗ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಲು ಒಳದಾರಿಗಳನ್ನು ಹುಡುಕಲಾಗುತ್ತಿದೆ. ಚುನಾವಣೆ ಕಾಲದಲ್ಲಿ ಪಕ್ಷ ವಿಪ್ ನೀಡಿದರೂ ಅಡ್ಡ ಮತದಾನ ಮಾಡುವುದು. ಅದು ಅಶಿಸ್ತು ಆಗಿದ್ದರೂ ಇದನ್ನು ಪತ್ತೆ ಹಚ್ಚಲು ಸ್ವಲ್ಪ ಸಮಯ ಹಿಡಿಯುತ್ತದೆ. ವಿಚಿತ್ರ ಎಂದರೆ ಈ ರೀತಿ ಅಡ್ಡ ಮತದಾನ ಮಾಡುವುದಕ್ಕೆ ಮನಸಾಕ್ಷಿ ಮತ ಎಂದು ಕರೆಯುತ್ತಾರೆ. ಅಂದರೆ ಪಕ್ಷಾಂತರ ಮಾಡುವುದು ಮನಸಾಕ್ಷಿ ಎಂದರ್ಥ.

ಪ್ರಜಾಪ್ರಭುತ್ವದಲ್ಲಿ ಒಂದು ಪಕ್ಷಕ್ಕೆ ನಿಷ್ಠರಾಗಿರುವುದು ನಿಯಮ. ಅದನ್ನು ಉಲ್ಲಂಘಿಸಿದವರಿಗೆ ಯಾವುದೇ ರೀತಿಯಲ್ಲೂ ರಿಯಾಯಿತಿ ಇರಬಾರದು. ಗ್ರಾಮಸಭೆ ಕಾಯ್ದೆಯಲ್ಲಿ ಇದು ಸ್ಪಷ್ಟವಾಗಿದೆ. ಪಕ್ಷ ವಿರೋಧಿಸಿದರೆ ಸದಸ್ಯತ್ವ ಕಳೆದುಕೊಳ್ಳುವುದು ಖಚಿತ. ಅದೇ ನಿಯಮವನ್ನು ಶಾಸನಸಭೆ, ಸಂಸತ್ತಿಗೆ ಅನ್ವಯಿಸಬೇಕಿತ್ತು. ಆದರೆ ಅಲ್ಲಿ ಗುಂಪಾಗಿ ಹೋದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯಿಸುವುದಿಲ್ಲ ಎಂಬ ರಿಯಾಯಿತಿ ನೀಡಲಾಗಿದೆ. ಇದು ಒಂದು ರೀತಿಯಲ್ಲಿನ ರಂಗೋಲೆ ಕೆಳಗೆ ನುಸುಳುವ ವಿಧಾನ. ಇದರ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿಲ್ಲ. ಅದರಿಂದ ಸ್ಪೀಕರ್‌ಗಳು ತಮಗೆ ತೋಚಿದಂತೆ ತೀರ್ಮಾನಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಿದಂತಾಗಿದೆ.

ಹೀಗಾಗಿ ಪಶ್ಚಿಮ ಬಂಗಾಳ,ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಕ್ಷಗಳನ್ನು ವಿಭಜಿಸುವ ಹಾಗೂ ಬೇರೆ ಪಕ್ಷದೊಂದಿಗೆ ವಿಲೀನಗೊಳ್ಳುವ ಅಪಮಾರ್ಗಗಳು ಜಾರಿಗೆ ಬಂದಿವೆ. ಇವುಗಳ ಮೇಲೆ ಸುಪ್ರೀಂ ಕೋರ್ಟ್ ಗದಾಪ್ರಹಾರ ಮಾಡುವ ಅಗತ್ಯವಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಮೇಲ್ಮನೆ ಚುನಾವಣೆಯಲ್ಲಿ ೧೧ ಜನ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಅವರಿಗೆ ಮನಸಾಕ್ಷಿ ಇದ್ದರೆ ಕೂಡಲೇ ಶಾಸಕ ಪದವಿಗೆ ರಾಜೀನಾಮೆ ಸಲ್ಲಿಸಬೇಕು. ವಿಪ್ ಕಾಯ್ದೆ ಜಾರಿಯಲ್ಲಿರುವವರೆಗೆ ಅಡ್ಡ ಮತದಾನ ಅಪರಾಧ.

ಕಳ್ಳನು  ಪೊಲೀಸರು ಹಿಡಿಯುವವರೆಗೆ ಕಾಯುತ್ತಾನೆ. ಮನಸಾಕ್ಷಿ ಇರುವವರು ತಮ್ಮ ತಪ್ಪನ್ನು ಒಪ್ಪಿಕೊಂಡು ಜನನೀಡಿದ ಪದವಿಯನ್ನು ಗೌರವಯುತವಾಗಿ ಹಿಂತಿರುಗಿಸಬೇಕು. ಜನ ಮತ್ತೊಮ್ಮೆ ಅವರನ್ನೇ ಆಯ್ಕೆ ಮಾಡಿದರೆ ಸೇವೆ ಸಲ್ಲಿಸುವುದು ಸೂಕ್ತ. ಜನಪ್ರತಿನಿಧಿ ಹುದ್ದೆಗಳ ಪರಿಶುದ್ಧತೆಯನ್ನು ಕಾಪಾಡುವುದು ಅವರ ಕೈಯಲ್ಲೇ ಇರುತ್ತದೆ. ಇಲ್ಲದಿದ್ದಲ್ಲಿ ಜನಪ್ರತಿನಿಧಿ ಬೇರೆಯವರಿಗೆ ನೀತಿ ಹೇಳುವ ನೈತಿಕತೆಯನ್ನು ಕಳೆದುಕೊಳ್ಳುತ್ತಾನೆ. ಹಿಂದೆ ರೈಲ್ವೆ ಅಪಘಾತ ಸಂಭವಿಸಿದಾಗ ರೈಲ್ವೆ ಸಚಿವರಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ರಾಜೀನಾಮೆ ಸಲ್ಲಿಸಿದರು. ಅದರಿಂದಲೇ ಜನ ಅವರನ್ನು ಪ್ರಧಾನಿ ಮಾಡಿದರು. ಅಬ್ದುಲ್ ಕಲಾಂ ರಾಜಕಾರಣಿಯೇ ಅಲ್ಲ. ನೇರವಾಗಿ ರಾಷ್ಟ್ರಪತಿ ಆದರು. ಸರ್ವಪಲ್ಲಿ ರಾಧಾಕೃಷ್ಣನ್ ಪ್ರಾಧ್ಯಾಪಕರು. ನೇರವಾಗಿ ಉಪರಾಷ್ಟ್ರಪತಿಯಾದರು. ನಂತರ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದರು. ಅವರು ಜನರ ವಿಶ್ವಾಸಕ್ಕೆ ತಕ್ಕಂತೆ ನಡೆದುಕೊಂಡರು.

ನಮ್ಮ ಜನಪ್ರತಿನಿಧಿಗಳು ಒಮ್ಮೆ ಚುನಾಯಿತರಾದರೆ ಕುರ್ಚಿಯನ್ನು ಬಿಡಲು ಒಪ್ಪುವುದೇ ಇಲ್ಲ. ವಂಶ ಪಾರಂಪರ್‍ಯ ಆಸ್ತಿ ಮಾಡಿಕೊಳ್ಳಲು ಬಯಸುತ್ತಾರೆ. ಅದರಿಂದ ಅವರು ವಾಮಮಾರ್ಗದಲ್ಲಿ ಅಧಿಕಾರ ಉಳಿಸಿಕೊಳ್ಳಲು ಯತ್ನಿಸುತ್ತಾರೆ. ಇಂಥವರಿಗೆ ಮನಸಾಕ್ಷಿ ಎಂಬುದು ಇರುವುದಿಲ್ಲ. ಅವರಿಗೆ ಅಧಿಕಾರದ ಮದ ಕುತಂತ್ರ ಮಾರ್ಗ ಅನುಸರಿಸಲು ಪ್ರೇರಣೆ ನೀಡುತ್ತದೆ. ಈ ರೀತಿ ಕಳ್ಳ ಮಾರ್ಗ ಅನುಸರಿಸಿ ಬಂದವರಿಗೆ ವಿರೋಚಿತ ಸ್ವಾಗತ ನೀಡುವ ಪಕ್ಷದ ನಾಯಕರಲ್ಲಿ ನೈತಿಕತೆ ಇರಬೇಕೆಂದು ಬಯಸುವುದು ತಪ್ಪಾಗುತ್ತದೆ. ಈ ರೀತಿ ಮೇಲಾಟ ನಡೆಯವುದನ್ನು ರಾಜಕೀಯ ಚಾಣಕ್ಯತನ ಎಂದು ಕರೆಯುವುದು ವಿಪರ್ಯಾಸ.

Related Posts

Leave a Reply

Your email address will not be published. Required fields are marked *