ಬೆಳಗಾವಿಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಗಾಂಜಾ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಣ ಸುಲಿಗೆ ಮಾಡಿದ ಆರೋಪದಡಿ ನಾಲ್ವರು ಯೂಟ್ಯೂಬರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗಳ ಕಾರು, ಮೊಬೈಲ್ ಫೋನ್‌ಗಳು ಹಾಗೂ ನಗದು ವಶಕ್ಕೆ ಪಡೆದುಕೊಂಡಿದ್ದಾರೆ.
ಕಲ್ಲಪ್ಪ ಮಾಳಾಜ್, ಮಲ್ಲಿಕಾರ್ಜುನ ಜುಲಫಿ, ಪೃಥ್ವಿರಾಜ್ ಚವ್ಹಾಣ ಹಾಗೂ ಡೇವಿಡ್ ತಂಗೇರಾಳ ಬಂಧಿತ ಆರೋಪಿಗಳು. ಕೊಟಬಾಗಿ ಗ್ರಾಮದ ಮೆಹಬೂಬ್ ಜಮಾದಾರ್ ನೀಡಿದ ದೂರಿನ ಆಧಾರದಡಿ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳು ಮೆಹಬೂಬ್ ಜಮಾದಾರ್ ಅವರಿಗೆ ಮೊದಲು ಗಾಂಜಾ ಪ್ಯಾಕೆಟ್ ನೀಡಿದ್ದು, ಬಳಿಕ ಪೊಲೀಸರ ಹೆಸರಿನಲ್ಲಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ‘ನೀವು ಗಾಂಜಾ ಮಾರಾಟ ಮಾಡುತ್ತಿದ್ದೀರಿ, ನಿಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗಾಂಜಾ ನೀಡಿದ ದೃಶ್ಯಗಳನ್ನು ತಾವೇ ಚಿತ್ರೀಕರಿಸಿಕೊಂಡು ಅದನ್ನು ಆಧಾರವನ್ನಾಗಿ ಮಾಡಿಕೊಂಡು ಮೂರು ಲಕ್ಷ ರೂ. ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೆಹಬೂಬ್ ಅವರಿಂದ 60 ಸಾವಿರ ರೂಪಾಯಿ ಪಡೆದಿದ್ದಾರೆಂದು ಹೇಳಳಾಗಿದೆ.
ದೂರುದಾರರು ಹೆಚ್ಚಿನ ಹಣ ನೀಡಲು ನಿರಾಕರಿಸಿದ ನಂತರ ಆರೋಪಿಗಳು ವೀಡಿಯೊವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂಬ ಆರೋಪವಿಎ. ಮೆಹಬೂಬ್ ಜಮಾದಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.


