ಉತ್ತರಪ್ರದೇಶದ ಪ್ರಯಾಗ್‌ರಾಜ್ ಮತ್ತು ಕೌಶಂಬಿ ಗಡಿ ಪ್ರದೇಶದಲ್ಲಿರುವ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಹನ್ನೊಂದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದುರಂತಕ್ಕೆ ಬಲಿಯಾದವರಲ್ಲಿ ಎಂಟು ಮಕ್ಕಳೂ ಸೇರಿದ್ದಾರೆ. ಕಾರ್ಖಾನೆಯ ಸಮೀಪವಿರುವ ಮನೆಗಳಲ್ಲಿ ವಾಸವಿದ್ದ ಮಕ್ಕಳು ಸ್ಫೋಟದಲ್ಲಿ ಅಸು ನೀಗಿದ್ದಾರೆ.
ಸ್ಫೋಟದ ತೀವ್ರತೆಗೆ ಇಡೀ ಕಾರ್ಖಾನೆ ನೆಲಸಮಗೊಂಡಿದೆ. 100 ಮೀಟರ್ ವ್ಯಾಪ್ತಿಯೊಳಗಿನ ಎಂಟು ಮನೆಗಳು ಹಾನಿಗೊಂಡಿವೆ. ದುರಂತ ಸ್ಥಳದಿಂದ 500 ಮೀಟರ್ ದೂರದಲ್ಲಿರುವ ಪ್ರಯಾಗ್‌ರಾಜ್-ಕಾನ್ಪುರ್ ರೈಲ್ವೆ ಮಾರ್ಗದ ಓವರ್‌ಹೆಡ್ ಎಲೆಕ್ಟ್ರಿಕ್ ಲೈನ್ ಮಾರ್ಗವು ಅಸ್ತವ್ಯಸ್ತಗೊಂಡಿದೆ. ಇದರಿಂದ ಒಂದುವರೆ ಗಂಟೆ ರೈಲು ಕಾರ್ಯಾಚರಣೆ ಸ್ಥಗಿತಗೊಂಡಿತು.
ಪೊಲೀಸ್, ವಾಯುಪಡೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌ನ 200 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು. 10 ಬುಲ್ಡೋಜರ್‌ಗಳು ಅವಶೇಷಗಳನ್ನು ತೆರವುಗೊಳಿಸಿವೆ.


