Menu

ಆಯುಧ ಪೂಜೆ, ವಿಜಯದಶಮಿ ಸಂಭ್ರಮ, ಬೆಲೆಯೇರಿಕೆಯಿದ್ದರೂ ಮಾರುಕಟ್ಟೆಗಳಲ್ಲಿ ಭರ್ಜರಿ ಖರೀದಿ!

ಉದಯಕಾಲ ನ್ಯೂಸ್, ಬೆಂಗಳೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಘಟ್ಟವಾದ ಆಯುಧ ಪೂಜೆ ಹಾಗೂ ವಿಜಯದಶಮಿ ಸಂಭ್ರಮವು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆಗಟ್ಟಿದೆ. ಅತಿವೃಷ್ಟಿ ಹಾಗೂ ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿಯಾಗಿರುವುದು ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಬೆಲೆಯನ್ನು ಗಗನಕ್ಕೇರಿಸಿದೆ. ಗ್ರಾಹಕರ ಜೇಬಿಗೆ ದುಬಾರಿ ಬೆಲೆ ಕತ್ತರಿ ಹಾಕುತ್ತಿದ್ದರೂ, ಹಬ್ಬದ ಸಡಗರದ ಮುಂದೆ ಬೆಲೆ ಏರಿಕೆಯೆಂಬುದು ಲೆಕ್ಕಕ್ಕಿಲ್ಲದಂತಾಗಿದ್ದು, ನಗರದ ಎಲ್ಲಾ ಪ್ರಮುಖ ಮಾರುಕಟ್ಟೆಗಳಲ್ಲಿ ಜನರಿಂದ ಖರೀದಿ ಭರಾಟೆ ಜೋರಾಗಿ ನಡೆಯುತ್ತಿದೆ.

ಹೂವಿನ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬಿಸಿ

ಹಬ್ಬದ ಸಂದರ್ಭದಲ್ಲಿ ದೇವರಿಗೆ ಪೂಜೆ ಸಲ್ಲಿಸಲು ಅನಿವಾರ್ಯವಾಗಿರುವ ವಿವಿಧ ಹೂವುಗಳ ಬೆಲೆಗಳು ಈ ಬಾರಿ ಗರಿಷ್ಠ ಮಟ್ಟವನ್ನು ತಲುಪಿವೆ. ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರಂ, ಯಶವಂತಪುರ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಹೂವುಗಳ ಇಂದಿನ ಪ್ರಮುಖ ದರ ವಿವರ ಹೀಗಿದೆ:

ಹೂಗಳ ಬೆಲೆ ವಿವರ

ಕನಕಾಂಬರ: ಕೆಜಿಗೆ 1,500 ರಿಂದ 1,800 ರೂ.
ದುಂಡುಮಲ್ಲಿಗೆ: ಕೆಜಿಗೆ 1,400 ರಿಂದ 1,600 ರೂ.
ಬಟನ್ ರೋಸ್ (ಗುಲಾಬಿ): ಕೆಜಿಗೆ 500 ರಿಂದ 600 ರೂ.
ಸೇವಂತಿಗೆ ಹೂವು: ಕೆಜಿಗೆ 250 ರಿಂದ 300 ರೂ.
ಚೆಂಡುಹೂವು (ಚೆಂಡು):ಕೆಜಿಗೆ 60 ರಿಂದ 70 ರೂ.

ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಬೆಲೆ ವಿವರ

ಹೂವುಗಳಷ್ಟೇ ಅಲ್ಲದೆ, ಪೂಜೆಗೆ ಅತ್ಯಗತ್ಯವಿರುವ ಹಣ್ಣುಗಳು ಮತ್ತು ಇತರೆ ಸಾಮಗ್ರಿಗಳ ದರವೂ ಕೂಡ ತುಸು ಹೆಚ್ಚಾಗಿಯೇ ಇದೆ. ಆದರೂ ಹೊರರಾಜ್ಯಗಳಿಂದ ಆಪಲ್ (ಸೇಬು) ಪೂರೈಕೆ ಸುಧಾರಿಸಿರುವುದರಿಂದ ಅದರ ಬೆಲೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ.

ಸೇಬು: ಕೆಜಿಗೆ 180 ರಿಂದ 250 ರೂ.
ದಾಳಿಂಬೆ: ಕೆಜಿಗೆ 150 ರಿಂದ 180 ರೂ.
ಕಿತ್ತಳೆ:ಕೆಜಿಗೆ 100 ರಿಂದ 150 ರೂ.
ಏಲಕ್ಕಿ ಬಾಳೆಹಣ್ಣು: ಕೆಜಿಗೆ 100 ರಿಂದ 120 ರೂ.
ಬೂದುಗುಂಬಳಕಾಯಿ: ಕೆಜಿಗೆ 25 ರಿಂದ 30 ರೂ.
ಬಾಳೆ ಕಂಬ (ಜೋಡಿ):ಗಾತ್ರಕ್ಕನುಗುಣವಾಗಿ 150 ರಿಂದ 200 ರೂ.
ನಿಂಬೆಹಣ್ಣು: ಒಂದಕ್ಕೆ 8 ರಿಂದ 10 ರೂ. ವರೆಗೆ ಮಾರಾಟವಾಗುತ್ತಿವೆ.

ಹಬ್ಬದ ಉತ್ಸಾಹ: ವಾಹನ, ಆಯುಧ ಪೂಜೆಗೆ ಸಿದ್ಧತೆ

ಮನೆಗಳು, ಆಫೀಸ್‌ಗಳು, ಕಾರ್ಖಾನೆಗಳು ಹಾಗೂ ವಾಹನಗಳನ್ನು ಸಿಂಗರಿಸಲು ಬೂದುಗುಂಬಳ, ಬಾಳೆಕಂಬ, ಮಾವಿನ ಸೊಪ್ಪು ಮತ್ತು ಬಾಳೆಹಣ್ಣಿನ ಖರೀದಿಗೆ ಸಾರ್ವಜನಿಕರು ಮುಗಿಬಿದ್ದಿದ್ದಾರೆ. ಬೆಲೆ ಏರಿಕೆಯಿಂದ ಒಂದಷ್ಟು ಬೇಸರ ವ್ಯಕ್ತವಾದರೂ, ವರ್ಷಕ್ಕೊಮ್ಮೆ ಬರುವ ಹಬ್ಬವನ್ನು ಅತ್ಯಂತ ಸಡಗರ ಮತ್ತು ಭಕ್ತಿಯಿಂದ ಆಚರಿಸಲು ಬೆಂಗಳಿಗರು ಯಾವುದೇ ಕೊರತೆ ಮಾಡಿಲ್ಲ. ಮಾರುಕಟ್ಟೆಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನಸಂದಣಿ ಕಂಡುಬಂದಿದ್ದು, ವ್ಯಾಪಾರಸ್ಥರ ಮೊಗದಲ್ಲೂ ಮಂದಹಾಸ ಮೂಡಿದೆ.
#AyudhaPuja2026 #Vijayadashami #BangaloreMarkets #FlowerPrices #DasaraCelebration #UdayakalaNews #BengaluruNews #KarnatakaFestivals #FestivalShopping

Related Posts

Leave a Reply

Your email address will not be published. Required fields are marked *