Menu

ಕಾಮಗಾರಿಗಳ ಗುಣಮಟ್ಟ ನಿರ್ವಹಣೆ ಹೊಣೆ ಸರ್ಕಾರಗಳದ್ದು

ದೇಶಕ್ಕೆ ಮತ್ತು ರಾಜ್ಯಕ್ಕೆ ಬೇಕಿರುವುದು ಖಜಾನೆಯನ್ನು ಲೂಟಿ ಮಾಡುವ ವ್ಯಕ್ತಿಗಳ ಜೊತೆ ಕೈ ಜೋಡಿಸುವ ಅಧಿಕಾರ ವರ್ಗವಲ್ಲ. ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಖಜಾನೆಯ ಪ್ರತಿ ರೂಪಾಯಿಗೆ ಲೆಕ್ಕ ಕೊಡುವ ಮತ್ತು ಅದನ್ನು ಸರಿಯಾಗಿ ಬಳಸುವಂತಹ ಆಡಳಿತ ಯಂತ್ರಾಂಗವಿಂದು ಸಕ್ರಿಯವಾಗಬೇಕಿದೆ.

ಸಾರ್ವತ್ರಿಕ ಕಾಮಗಾರಿಗಳ ಗುಣಮಟ್ಟ ಅತಿಮುಖ್ಯ. ಇದನ್ನು ಕಾಪಾಡುವ ಹೊಣೆ ಸರ್ಕಾರಗಳದ್ದು. ರಸ್ತೆ, ಸೇತುವೆ, ಶಾಲೆ, ಸರ್ಕಾರಿ ಆಸ್ಪತ್ರೆ , ಅಣೆಕಟ್ಟೆ ಇವುಗಳ ಗುಣಮಟ್ಟ ಪರೀಕ್ಷಿಸಲು ಇಲಾಖೆಗಳಿವೆ. ನುರಿತ ಅಧಿಕಾರಿಗಳೂ ಆಯಾ ಇಲಾಖೆಯಲ್ಲಿ ಲಭ್ಯ. ದುರಂತ ಎಂದರೆ ಗುಣಮಟ್ಟದ ಜೊತೆ ರಾಜಿಯಾಗಿ ಲಂಚಕೋರರೊಂದಿಗೆ ಅಧಿಕಾರಿಗಳು ಮತ್ತು ಎಂಜನಿಯರುಗಳು ಕೈ ಜೋಡಿಸುವ ಪರಿಣಾಮವಾಗಿ ಇಂದು ಕಾಮಗಾರಿಗಳು ಹಾಳಾಗಿವೆ ಮತ್ತು ಶಿಥಿಲಾವಸ್ಥೆಯಲ್ಲಿವೆ.

ವಿವಿಧ ಕಾಮಗಾರಿಗಳಿಗೆ ಹಣಕಾಸು ಇಲಾಖೆಯಿಂದ ಅನುದಾನ ಎಷ್ಟು ಬಿಡುಗಡೆ ಆಗಿದೆ ಅಥವಾ ಆಗುತ್ತೆ ಎಂಬುದಲ್ಲ. ಬಿಡುಗಡೆಯಾದ ಹಣದ ಮೊತ್ತ ಆಯಾ ಕೆಲಸಕ್ಕೆ ನೂರಕ್ಕೆ ನೂರರಷ್ಟು ಸದುಪಯೋಗವಾಯಿತೇ ಎಂಬುದು ಮುಖ್ಯ. ಬಿಡುಗಡೆಯಾದ ಪ್ರತಿ ರೂಪಾಯಿ ನಿರ್ದಿಷ್ಟ ಕೆಲಸಕ್ಕೆ ಬಳಕೆಯಾದಾಗ ಗುಣಮಟ್ಟವೂ ನಿರ್ವಹಣೆ ಅಗಬೇಕಲ್ಲವೇ?

ದುರದೃಷ್ಟಕರ ಸಂಗತಿ ಎಂದರೆ ಒಂದು ಸೂಚಿತ ಕೆಲಸಕ್ಕೆ ಮಂಜೂರಾದ ಹಣ ಸರಿಯಾಗಿ ಬಳಕೆಯಾಗದೆ ಭ್ರಷ್ಟರ ಖಾತೆಗೆ ರವಾನೆಯಾಗುವುದು. ಯಾವಾಗ ಸರ್ಕಾರಿ ಹಣ ಕೆಲವೇ ಮಂದಿ ಭ್ರಷ್ಟರ ಜೇಬಿಗಳಿಯುವುದೋ, ಆಗ ರಸ್ರೆ, ಸೇತುವೆ ಮತ್ತು ಶಾಲಾ ಕಟ್ಟಡಗಳ ಗುಣಮಟ್ಟವೂ ಕುಸಿಯುತ್ತೆ. ಕ್ಯಾಲಿಟಿ ಚೆಕ್ ಎಂಬುದು ಬೊಗಳೆ ಆಗುತ್ತೆ. ಸಿಮೆಂಟ್, ಕಬ್ಬಿಣ ಇಟ್ಟಿಗೆ ಮತ್ತು ಮರಳು ಸರಿಯಾದ ಅನುಪಾತದಲ್ಲಿ ಯಾಕೆ ಬಳಕೆಯಾಗಲಿಲ್ಲ ಎಂಬುದಲ್ಲ. ಸರಿಯಾದ ಅನುಪಾತವನ್ನು ಎಂಜನಿಯರ್ ಮತ್ತು ಕಂಟ್ರಾಕ್ಟರ್ ಯಾಕೆ ಬಳಸಲಿಲ್ಲ ಎಂಬುದು ಗಂಭೀರ ಪ್ರಶ್ನೆ. ಎಲ್ಲಿಯವರೆಗೆ ಓರ್ವ ಭ್ರಷ್ಟ ಕಂಟ್ರಾಕ್ಟರ್ ಸರಿಯಾದ ಅನುಪಾತವನ್ನು ಬಳಸುವುದಿಲ್ಲವೋ ಮತ್ತು ಎಲ್ಲಿಯವರೆಗೆ ಲಂಚಕೋರ ಎಂಜಿನಿಯರ್ ಇಂತಹ ದುರುದ್ದೇಶ -ದೋಷಪೂರಿತ ಕಳಪೆ ಅನುಪಾತಕ್ಕೆ ಪ್ರಮಾಣಪತ್ರವನ್ನು ನೀಡಲು ನಿರಾಕರಿಸುವುದಿಲ್ಲವೋ, ಅಲ್ಲಿಯವರೆಗೂ ನಾವು ಯೋಗ್ಯ, ಬಾಳಿಕೆಯುಕ್ತ ಕಾಮಗಾರಿಗಳನ್ನು ನಿರ್ಮಿಸಲು ಸಾಧ್ಯವಾಗದು.

ರಾಜಕೀಯ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ ಮತ್ತು ಐದು ವರ್ಷಗಳ ಬಳಿಕ ಈ ಜಾಗದಿಂದ ನಿರ್ಗಮಿಸುವಂತಾಗುತ್ತೆ. ಆದರೆ ಐ ಎ ಎಸ್, ಐ ಪಿ ಎಸ್, ಮತ್ತು ಕೆ ಎ ಎಸ್ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳನ್ನು ಒಳಗೊಂಡ ಆಡಳಿತದ ಕಾರ್ಯಾಂಗ (ಎಕ್ಸಿಕೂಟಿವ್) ಮಾತ್ರ ಎಲ್ಲ ಕಾಲಕ್ಕೂ ಒಂದೇ. ಒಟ್ಟಿನಲ್ಲಿ ರಾಜ್ಯವೊಂದರ ಗುಣಮಟ್ಟ ಅವಲಂಬಿತವಾಗಿರುವುದು ದಕ್ಷ ಮತ್ತು ಸಮರ್ಥ ಆಧಿಕಾರಿಗಳ ನ್ಯಾಯ, ನಿರ್ಭೀತ ಮತ್ತು ಪ್ರಾಮಾಣಿಕ ಕರ್ತವ್ಯಗಳಿಂದ. ದೇಶಕ್ಕೆ ಮತ್ತು ರಾಜ್ಯಕ್ಕೆ ಬೇಕಿರುವುದು ಖಜಾನೆಯನ್ನು ಲೂಟಿ ಮಾಡುವ ವ್ಯಕ್ತಿಗಳ ಜೊತೆ ಕೈ ಜೋಡಿಸುವ ಅಧಿಕಾರ ವರ್ಗವಲ್ಲ.

ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಖಜಾನೆಯ ಪ್ರತಿ ರೂಪಾಯಿಗೆ ಲೆಕ್ಕ ಕೊಡುವ ಮತ್ತು ಅದನ್ನು ಸರಿಯಾಗಿ ಬಳಸುವಂತಹ ಆಡಳಿತ ಯಂತ್ರಾಂಗವಿಂದು ಸಕ್ರಿಯವಾಗಬೇಕಿದೆ. ಅಷ್ಟೇ ಅಲ್ಲ. ಸರ್ಕಾರದ ವರ್ಚಸ್ಸಿಗೆ ಮಸಿ ಬಳಿಯದಂತೆ ಖಡಕ್ ಆಗಿ ಕೆಲಸ ಮಾಡುವ ಉತ್ತಮ ಅಧಿಕಾರಿಗಳ ಬೃಹತ್ ಕಾರ್ಯ ಪಡೆ ದೇಶಕ್ಕಿಂದು ಅಗತ್ಯವಿದೆ. ಈ ಕೆಲಸ ಸಾಕಾರಗೊಳ್ಳಬೇಕಾದರೆ ಮೊದಲು ರಾಜ್ಯ ಲೋಕಸೇವಾ ಆಯೋಗಕ್ಕೆ ಭರ್ಜರಿ ಸರ್ಜರಿ ಆಗಲೇಬೇಕು. ಇದು ಸಾಮಾನ್ಯ ಜನತೆಯ ಆಶೋತ್ತರ ಕೂಡಾ.

Related Posts

Leave a Reply

Your email address will not be published. Required fields are marked *