ರಾಜ್ಯದ ಪರವಾಗಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರವೊಂದನ್ನು ಬರೆದಾಗ ಇದಕ್ಕೆ ಪೂರಕವಾಗಿ, ಕೇಂದ್ರದ ಈ ನಾಲ್ವರು ಮಂತ್ರಿಗಳೂ ಸಂಬಂಧಿತ ಸಚಿವರ ಮೇಲೆ ಒತ್ತಡವನ್ನು ತಂದು ಸೂಕ್ತ ನೆರವು ಮತ್ತು ಅನುದಾನ ಬಿಡುಗಡೆಗಾಗಿ ಧ್ವನಿ ಎತ್ತುವುದು ಸರಿಯಾದ ನಡೆ. ಆದರೆ ಮೋದಿ ಮಂತ್ರಿಮಂಡಲದಲ್ಲಿ ಪ್ರಮುಖ ಸಚಿವರೂ ಆಗಿರುವ ಪ್ರಹ್ಲಾದ ಜೋಶಿ ಅವರೀಗ ರಾಜ್ಯದ ಪತ್ರಕ್ಕೆ ಕಿಡಿ ಕಾರಿರುವುದು ದುರದೃಷ್ಟಕರ.
ರಾಜ್ಯದ ಅಹವಾಲುಗಳಿಗೆ ಕೇಂದ್ರ ಸರ್ಕಾರವು ತ್ವರಿತವಾಗಿ ಸ್ಪಂದಿಸುವುದಿಲ್ಲ. ಅಲ್ಲದೆ ರಾಜ್ಯದ ಕೆಲವೊಂದು ಪ್ರಮುಖ ಸಮಸ್ಯೆಗಳನ್ನು ಕೇಂದ್ರ ಮಾನವೀಯ ದೃಷ್ಟಿಯಲ್ಲಿ ಪರಿಗಣಿಸಿ ಸಕಾಲಿಕ ನೆರವು ಕೂಡಾ ನೀಡುವುದಿಲ್ಲ. ಇದು ರಾಜ್ಯದ ಕರ್ಮ. ಹೌದು. ರಾಜ್ಯವೀಗ ತೀವ್ರ ಸಂಕಷ್ಟದಲ್ಲಿದೆ. ಕೆರೆ ಮತ್ತು ಕುಂಟೆಗಳಲ್ಲಿ ನೀರಿಲ್ಲ. ಇಂತಹ ಸಮಯದಲ್ಲಿ ಕೇಂದ್ರವು ರಾಜ್ಯಗಳ ಮನವಿಗೆ ಮತ್ತು ಸಂಕಷ್ಟಕ್ಕೆ ಸ್ಪಂದಿಸುವುದು ಮಾನವೀಯತೆ. ಅಷ್ಟೇ ಅಲ್ಲ .ಇದು ಒಕ್ಕೂಟ ಪ್ರಜಾತಂತ್ರ ವ್ಯವಸ್ಥೆಯ ಧರ್ಮವೂ ಹೌದು.
ರಾಜ್ಯದ ಬರಗಾಲದ ಹಿನ್ನೆಲೆಯಲ್ಲಿ ಕೇಂದ್ರವು ನೆರವು ನೀಡುವಂತೆ ಕೋರಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಮತ್ತು ಕಂದಾಯ ಮಂತ್ರಿ ಡಾ. ಜಿ. ಪರಮೇಶ್ವರ್ ಇಬ್ಬರೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಮತ್ತು ಸಾಕಷ್ಟು ಆರ್ಥಿಕ ನೆರವಿನ ಹಸ್ತ ಚಾಚುವಂತೆ ಮುಖ್ಯಮಂತ್ರಿ ಮತ್ತು ಡಿಸಿಎಂ ಇಬ್ಬರೂ ಕೇಂದ್ರಕ್ಕೆ ಲಿಖಿತ ಮನವಿ ಸಲ್ಲಿಸಿರುವುದು ಗಮನಾರ್ಹ. ಇದೇ ವೇಳೆ ರಾಜ್ಯದಿಂದ ಲೋಕಸಭೆಗೆ ಚುನಾಯಿತರಾದ ನಾಲ್ವರು ನರೇಂದ್ರ ಮೋದಿ ಮಂತ್ರಿಮಂಡಲದ ಪ್ರಮುಖ ಸಚಿವರೂ ಆಗಿದ್ದಾರೆ. ಕುಮಾರಸ್ವಾಮಿ, ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ ಮತ್ತು ಸೋಮಣ್ಣ ಅವರಿಗೂ ರಾಜ್ಯದ ಬವಣೆ ಗೊತ್ತಿದೆ. ಇವರು ಕೇಂದ್ರ ದ ಮಂತ್ರಿಗಳೇನೋ ಸರಿ. ಆದರೆ ರಾಜ್ಯದ ಕೆರೆ ಕುಂಟೆಗಳಲ್ಲಿ ನೀರಿಲ್ಲದೆ ಜನತೆ ಪರದಾಡುತ್ತಿರುವುದು ಇವರ ಕಣ್ಣಿಗೆ ಬೀಳಲಿಲ್ಲವೇ ? ರಾಜ್ಯದ ಪರವಾಗಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರವೊಂದನ್ನು ಬರೆದಾಗ ಇದಕ್ಕೆ ಪೂರಕವಾಗಿ, ಕೇಂದ್ರದ ಈ ನಾಲ್ವರು ಮಂತ್ರಿಗಳೂ ಸಂಬಂಧಿತ ಸಚಿವರ ಮೇಲೆ ಒತ್ತಡವನ್ನು ತಂದು ಸೂಕ್ತ ನೆರವು ಮತ್ತು ಅನುದಾನ ಬಿಡುಗಡೆಗಾಗಿ ಧ್ವನಿ ಎತ್ತಬೇಕಿತ್ತು .
ಆದರೆ ಮೋದಿ ಮಂತ್ರಿಮಂಡಲದಲ್ಲಿ ಪ್ರಮುಖರೂ ಆದ ಸಚಿವ ಪ್ರಹ್ಲಾದ ಜೋಶಿ ಅವರು ರಾಜ್ಯದ ಪತ್ರಕ್ಕೆ ಕಿಡಿ ಕಾರಿರುವುದು ದುರದೃಷ್ಟಕರ . ಅವರು ಶಿವಕುಮಾರ್ ಮತ್ತು ಪರಮೇಶ್ವರ್ ಬರೆದ ಪತ್ರಗಳು ಅವಾಸ್ತವಿಕ ಎಂದಿರುವುದು ಗಂಭೀರ. ಸಚಿವ ಜೋಶಿ ಈ ಬಗೆಯ ತಕರಾರು ಎತ್ತಿರುವುದೇ ಬಾಲಿಶ. ಇಂತಹ ಪತ್ರಗಳು ಕೇಂದ್ರಕ್ಕೆ ತಲುಪಿದಾಗ ಇದರ ಪರವಾಗಿ ಕಾಳಜಿ ವಹಿಸುವ ಹೊಣೆಗಾರಿಕೆ, ಜೋಶಿ, ಕುಮಾರಸ್ವಾಮಿ, ಶೋಭಾ ಮತ್ತು ಸೋಮಣ್ಣ , ಇವರೆಲ್ಲರ ಮೇಲೂ ಇದೆ. ಈ ವಿಚಾರದಲ್ಲಿ ತಾವು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಕಾಕದೃಷ್ಟಿ ಮತ್ತು ಕೆಂಗೆಣ್ಣಿಗೆ ಗುರಿಯಾಗಬೇಕಾದೀತು ಎಂಬ ಅಂಜಿಕೆ ಈ ನಾಲ್ವರ ಸಚಿವರ ಮನದಲ್ಲಿ ಇದ್ದಂತಿದೆ.
ಈ ಹಿಂದೆ ಮನಮೋಹನಸಿಂಗ್ ಅವರ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿದ್ದ ಅಂಬರೀಶ್, ರಾಜ್ಯದ ಹಿತ ಕಾಪಾಡುವ ವಿಷಯದಲ್ಲಿ ಕೇಂದ್ರದಿಂದ ಸೂಕ್ತ ಸ್ಪಂದನೆ ದೊರಕದ ಕಾರಣ, ಅಂಬರೀಶ್ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ಸಚಿವ ಜೋಶಿ ಅವರೇಕೆ ಗಮನಿಸುವುದಿಲ್ಲ ? ತಮ್ಮ ಸ್ವಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಮಂತ್ರಿಗಳು ರಾಜ್ಯದ ಹಿತವನ್ನು ಕಡೆಗಣಿಸಿ ಮೋದಿ ಮತ್ತು ಶಾ ಅವರನ್ನು ಸಂಪ್ರೀತಗೊಳಿಸುವ ಮಾತುಗಳನ್ನು ಆಡುವುದು ಶೋಭಿತವಲ್ಲ.


