Menu

ಬಂಟ್ವಾಳ ಬಸ್‌ ನಿಲ್ದಾಣದಲ್ಲಿ ಯುವತಿಯ ಹತ್ಯೆಗೈದ ಯುವಕ 

ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್‌ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಯುವಕನೊಬ್ಬ ಯುವತಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.  ಕಕ್ಯಪದವು ನಿವಾಸಿ ಲಾವಣ್ಯ (21) ಕೊಲೆಯಾದ ಯುವತಿ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅಸು ನೀಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಮಾತನಾಡಿ, ಆರೋಪಿಯನ್ನು ಚೇತನ್ ಎಂದು ಗುರುತಿಸಲಾಗಿದ್ದು, ಆತ ಯುವತಿಯ ದೂರದ ಸಂಬಂಧಿ. ಆಕೆಯನ್ನು ಪ್ರೀತಿಸುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ ಆದರೆ ಲಾವಣ್ಯನಿಗೆ ಈ ಸಂಬಂಧದಲ್ಲಿ ಆಸಕ್ತಿ ಇರಲಿಲ್ಲ ಎಂಬ ಮಾಹಿತಿ ತನಿಖೆಯ ವೇಳೆ ತಿಳಿದು ಬಂದಿದೆ. ಇದೇ ಕಾರಣದಿಂದ ಈ ಕೊಲೆ ನಡೆದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ

ಲಾವಣ್ಯ  ಕಕ್ಯಪದವು ಕಡೆಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕುಳಿತಿದ್ದರು.  ಸಂಬಂಧಿಕರೊಬ್ಬರಿಗೆ ಕರೆ ಮಾಡಿ ತಮ್ಮ ಪಕ್ಕದಲ್ಲಿ ಅಪರಿಚಿತ ಯುವಕನೊಬ್ಬ ಕುಳಿತಿದ್ದಾನೆ ಎಂದು ತಿಳಿಸಿದ್ದು, ಬಳಿಕ ಕರೆ ಸಂಪರ್ಕ ಕಡಿತಗೊಂಡಿತ್ತು.

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಯುವತಿ ಬಸ್‌ನಿಂದ ಕೆಳಗಿಳಿದ ತಕ್ಷಣವೇ ಯುವಕ ಯುವತಿಯನ್ನು ಬೆನ್ನಟ್ಟಿದ್ದಾನೆ.ಬ್ಯಾಗ್‌ನಲ್ಲಿದ್ದಆಯುಧವನ್ನು ಹೊರತೆಗೆದಾಗ ಯುವತಿ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಆರೋಪಿ ದಾಳಿ ಮಾಡಿ ಪರಾರಿ ಆಗಿದ್ದಾನೆ.

ಬಂಟ್ವಾಳ ಉಪ ವಿಭಾಗದ ಪೊಲೀಸ್ ಅಧಿಕಾರಿಗಳು ಹಾಗೂ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ನಗರ ಠಾಣೆ ಪೊಲೀಸರು ಆರೋಪಿಯ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯ ಕೈಗೊಂಡಿದ್ದು, ಹತ್ಯೆಯ ನಿಖರ ಕಾರಣ ಮತ್ತು ಹಿನ್ನೆಲೆ ಕುರಿತು ತನಿಖೆ ಮುಂದುವರಿದಿದೆ.

Related Posts

Leave a Reply

Your email address will not be published. Required fields are marked *