Menu

ನಕಲಿ ಚಿನ್ನ ನೀಡಿ 85 ಲಕ್ಷ ರೂ. ವಂಚಿಸಿದ್ದ ಮೂವರ ಬಂಧನ

ಹಳೆ ಮನೆಯ ಪಾಯ ತೋಡುವಾಗ ‘ಚಿನ್ನದ ನಿಧಿ’ ಸಿಕ್ಕಿದೆ ಎಂದು ನಂಬಿಸಿ ಮಹಾರಾಷ್ಟ್ರದ ಉದ್ಯಮಿಯೊಬ್ಬರಿಗೆ 85 ಲಕ್ಷ ರೂಪಾಯಿ ವಂಚಿಸಿದ್ದ ಮೂವರು ಆರೋಪಿಗಳನ್ನು ನ್ಯಾಮತಿ ಪೊಲೀಸರು ಬಂಧಿಸಿದ್ದಾರೆ.

​ದಾವಣಗೆರೆಯ ಚನ್ನಗಿರಿ ತಾಲೂಕಿನ ಸಚಿನ್ ಗೋಂಧಳಿ ಅಲಿಯಾಸ್ ಸ್ಯಾಂಡಿ (21), ನ್ಯಾಮತಿ ತಾಲೂಕಿನ ಸಂದೀಪ (38) ಹಾಗೂ ರವಿ (40) ಬಂಧಿತ ಆರೋಪಿಗಳು. ವಂಚನೆ ಮಾಡಿದ್ದ 62.25 ಲಕ್ಷ ನಗದು  ಪೊಲೀಸರು ವಶಪಡಿಸಿಕೊಂಡಿದ್ದಾರೆ.

​ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಶಿವಾನಂದಪ್ಪ ಎಂಬವರಿಗೆ ರಮೇಶ ಎಂಬಾತ ಕರೆ ಮಾಡಿ, ನಮ್ಮ ಹಳೆ ಮನೆ ಕೆಡವಿ ಪಾಯ ತೆಗೆಯುವಾಗ ಚಿನ್ನದ ನಾಣ್ಯಗಳ ನಿಧಿ ಸಿಕ್ಕಿದೆ. ಅದನ್ನು ಕಡಿಮೆ ಬೆಲೆಗೆ ನೀಡುತ್ತೇವೆ. ಮೊದಲು ಸ್ಯಾಂಪಲ್ ಕೊಂಡೊಯ್ದು ಪರೀಕ್ಷಿಸಿ ಎಂದು ನಂಬಿಸಿದ್ದ. ಶಿವಾನಂದಪ್ಪ ಮತ್ತು ಅವರ ಸ್ನೇಹಿತ ವಿಜಯಕುಮಾರ್ ಬಂದು ಸ್ಯಾಂಪಲ್ ಪಡೆದು ಪರೀಕ್ಷಿಸಿದಾಗ ಅದು ಅಸಲಿ ಚಿನ್ನವಾಗಿತ್ತು.

​ಅಸಲಿ ಚಿನ್ನವೆಂದು ನಂಬಿದ ಶಿವಾನಂದಪ್ಪ ಅವರು ಜೂನ್ 28ರಂದು ವಾಪಸ್ ಬಂದಾಗ, ಆರೋಪಿಗಳು ಅವರನ್ನು ಸವಳಂಗ-ಶಿಕಾರಿಪುರ ರಸ್ತೆಯ ಮಾಚಿಗೊಂಡನಹಳ್ಳಿ ಕೆರೆ ಹತ್ತಿರದ ತೋಟಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಶಿವಾನಂದಪ್ಪ ಅವರಿಂದ 85 ಲಕ್ಷ  ರೂ. ಪಡೆದು,  1 ಕೆ.ಜಿ ತೂಕದ ನಕಲಿ ಬಂಗಾರದ ಬಿಲ್ಲೆಗಳಿದ್ದ ಕವರ್ ನೀಡಿ ಪರಾರಿಯಾಗಿದ್ದರು. ಮೋಸ ಹೋಗಿರುವುದು ತಿಳಿಯುತ್ತಿದ್ದಂತೆ ಶಿವಾನಂದಪ್ಪ ಅವರು ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಮಾರ್ಗದರ್ಶನದಲ್ಲಿ, ಚನ್ನಗಿರಿ ಡಿವೈಎಸ್‌ಪಿ ಬಸವರಾಜ್ ಬಿ.ಎಸ್. ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.

​ನ್ಯಾಮತಿ ಇನ್ಸ್‌ಪೆಕ್ಟರ್ ಸಿದ್ದೇಗೌಡ ಹೆಚ್.ಎಂ. ನೇತೃತ್ವದ ತಂಡವು ತಾಂತ್ರಿಕ ಸಾಕ್ಷ್ಯ ಹಾಗೂ ಬಾತ್ಮೀದಾರರ ಮಾಹಿತಿ ಆಧರಿಸಿ ಸಚಿನ್ ಮತ್ತು ಸಂದೀಪನನ್ನು ಬಂಧಿಸಿ ವಿಚಾರಣೆ ನಡೆಸಿದೆ.  ಈ ವೇಳೆ ಆರೋಪಿಗಳು ಮತ್ತೊಬ್ಬ ಆರೋಪಿ ರವಿ ಜೊತೆಗೂಡಿ ಈ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ.

​ಯಶಸ್ವಿ ಕಾರ್ಯಾಚರಣೆ ನಡೆಸಿದ ನ್ಯಾಮತಿ ಇನ್ಸ್‌ಪೆಕ್ಟರ್ ಸಿದ್ದೇಗೌಡ ಹೆಚ್.ಎಂಪಿಎಸ್‌ಐಗಳಾದ ಹೊಳಬಸಪ್ಪ ಹೋಳಿ, ಶೋಭಾರಾಣಿ ಹಾಗೂ ಸಿಬ್ಬಂದಿಯನ್ನು  ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

Related Posts

Leave a Reply

Your email address will not be published. Required fields are marked *