Menu

ಬರದಲ್ಲಿ ಕೆರೆಗಳ ಹೂಳೆತ್ತಿದರೆ ಮಳೆ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಳ

ಶಿವಕುಮಾರ್ ಮತ್ತು ವಿಜಯ್ ಇಬ್ಬರೂ ಸಹಮತದಿಂದ  ಚರ್ಚಿಸಿದರೆ ಕಾವೇರಿ ಕಣಿವೆಯಲ್ಲಿ ನೀರಿನ ಸಮಸ್ಯೆ ಬಗೆಹರಿದೀತು. ಕೆರೆ, ಕುಂಟೆಗಳ  ಹೂಳೆತ್ತಲು ತಮಿಳುನಾಡು ಮಾಡಿರುವ ಎಲ್ಲ ತಗಾದೆಗಳನ್ನು ವಾಪಸ್ ಪಡೆಯುವುದು ಈಗ ಮುಖ್ಯ. ತಮಿಳುನಾಡಿನಲ್ಲಿ ಕಾಂಗ್ರೆಸ್ ಬೆಂಬಲಿತ ಟಿವಿಕೆ ಪಾರ್ಟಿಯ ಸರ್ಕಾರವಿದೆ . ಇದೇ ವೇಳೆ ರಾಜ್ಯದಲ್ಲಿ ಡಿ ಕೆ ಶಿವಕುಮಾರ್ ಸಾರಥ್ಯದ ಕಾಂಗ್ರೆಸ್ ಸರ್ಕಾರವಿದೆ.

ರಾಜ್ಯದಲ್ಲಿ ಈ ಸಾರಿ ಬರದ ಛಾಯೆ. ಮಳೆಯ ಕೊರತೆ. ನಾಡಿನ ಬಹುತೇಕ ಜಲಾಶಯಗಳಲ್ಲಿ ಸಾಕಷ್ಟು ನೀರಿಲ್ಲ. ಕೆರೆ, ಕುಂಟೆಗಳು ಬತ್ತಿವೆ. ಕೃಷ್ಣಾ ಮತ್ತು ಕಾವೇರಿ ಕಣಿವೆಯಲ್ಲಿ ಈ ಸಾರಿ ನೀರಿನ ಕೊರತೆ ಬಾಧಿಸಿದೆ. ಇದು ಕೇವಲ ನಾಡಿನ ಅನ್ನದಾತರಿಗೆ ಮತ್ತು ಜನತೆಗೆ ಸಂಬಂಧಿಸಿದ ಸಮಸ್ಯೆಯಲ್ಲ. ಕಣಿವೆಯ ರಾಜ್ಯವಾಗಿ ನೀರಿನ ಸಮಸ್ಯೆಯನ್ನು ರಾಜ್ಯ ಸರ್ಕಾರ ಹಲವು ಹತ್ತು ರೀತಿಯಲ್ಲಿ ಎದುರಿಸಬೇಕಿರುವುದು ಅನಿವಾರ್ಯ. ತಮಿಳುನಾಡಿನ ರೈತರಿಂದ ಈಗಾಗಲೇ ಕಾವೇರಿ ನದಿ ನೀರಿಗಾಗಿ ಅಲ್ಲಿನ ಜನತೆಯ ಹಾಹಾಕಾರ ಶುರುವಾಗಿದೆ. ಕರ್ನಾಟಕದಿಂದ ತನಗೆ ಸಿಗಬೇಕಾದ ನದಿನೀರಿನ ಪಾಲಿನ ಬಗ್ಗೆ ಆಗ್ರಹವೂ ಶುರುವಾಗಿದೆ.

ರಾಜ್ಯದ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಸಾಕಷ್ಟು ನೀರೇ ಇಲ್ಲದಿರುವಾಗ ತಮಿಳುನಾಡು ಮತ್ತು ನೆರೆ ರಾಜ್ಯಗಳಿಗೆ ನ್ಯಾಯಸಮ್ಮತ ಪಾಲಿನ ನೀರು ಒದಗಿಸುವುದು ಹೇಗೆ? ರಾಜ್ಯದ ಎಲ್ಲ ಕೆರೆ ಕುಂಟೆಗಳಲ್ಲಿ ಸಂಗ್ರಹವಾಗಿರುವ ಹೂಳು ಹೊರ ತೆಗೆದು ಕೆಲವು ದಶಕಗಳೇ ಕಳೆದಿರುವುದು ಕಟುಸತ್ಯ. ಮಳೆ ನೀರನ್ನು ಸಮರ್ಥವಾಗಿ ಸಂಗ್ರಹಿಸಲು ಅಂದು ರಾಜ – ಮಹಾರಾಜರು ನಾಡಿನ ಉದ್ದಗಲಕ್ಕೂ ಕಟ್ಟಿರುವ ಕೆರೆ ಕುಂಟೆಗಳೇ ಆಧಾರ. ಆದರೆ ತಮಿಳುನಾಡು ಎಸೆದಿರುವ ಅಡ್ಡಿ-ಆಕ್ಷೇಪಗಳಿಂದ ರಾಜ್ಯದ ನದಿಪಾತ್ರ ಮತ್ತು ಕೆರೆ ಕುಂಟಗಳಲ್ಲಿ ಹೂಳೆತ್ತಲು ಸಾಧ್ಯವಾಗಿಲ್ಲ.

ನದಿ ಪಾತ್ರದ ಮೇಲಿನ ಭಾಗದಲ್ಲಿರುವ ಕರ್ನಾಟಕದ ಜಲಾಶಯಗಳಲ್ಲಿ ತುಂಬಿಕೊಂಡಿರುವ ಹೂಳು ವಿಲೇವಾರಿಗೊಳಿಸದೆ ಮಳೆ ನೀರನ್ನು ಹೇಗೆ ಸಮರ್ಥವಾಗಿ ಹಿಡಿದಿಡಲು ಸಾಧ್ಯ? ರಾಜ್ಯದ ಕೆರೆ, ಕುಂಟೆಗಳಲ್ಲಿ ಹೂಳು ವಿಲೇವಾರಿಯಾಗಿ ನೀರಿನ ಸಂಗ್ರಹ ಹೆಚ್ಚಾದರೆ ಇದು ತಮಿಳುನಾಡಿನ ಪಾಲಿಗೆ ವರದಾನ ಅಲ್ಲವೇ? ಕರುನಾಡಿನ ಕಾವೇರಿ ಕಣಿವೆಯ ಕೆರೆ ಕುಂಟೆಗಳಲ್ಲಿ ಸಂಗ್ರಹವಾಗುವ ನೀರೆಲ್ಲವೂ ಕರ್ನಾಟಕವೇ ಸಂಪೂರ್ಣವಾಗಿ ಬಳಸುವುದೆಂಬ ಸಂದೇಹ ಏಕೆ ? ಹೂಳೆತ್ತಲು ತಮಿಳುನಾಡು ಮಾಡಿರುವ ಆಕ್ಷೇಪಗಳನ್ನು ವಾಪಸ್ ಪಡೆದರೆ ಇದರಿಂದ ಕಾವೇರಿ ಕಣಿವೆಯಲ್ಲಿ ತಲೆದೋರಿರುವ ನೀರಿನ ಸಮಸ್ಯೆ ತುಸು ಮಟ್ಟಿಗಾದರೂ ಶಮನಗೊಂಡೀತು.

ತಮಿಳುನಾಡಿನ ಶಾಸನಸಭೆಯಲ್ಲಿ ಕರ್ನಾಟಕದ ವಿರುದ್ದ ಗೊತ್ತುವಳಿ ಅಂಗೀಕರಿಸುವುದರಲ್ಲಿ ಅರ್ಥಹೀನ. ಇದು ಕರುಣಾನಿಧಿ, ಜಯಲಲಿತಾ, ಪನ್ನೀರ್‌ಸೆಲ್ವಂ ಕಾಲದಿಂದಲೂ ನಡೆದು ಬಂದಿರುವ ಸಂಪ್ರದಾಯಿಕ ಅರ್ಥವಿಲ್ಲದ ನಿಲುವು. ಈಗ ಆಗಬೇಕಿರುವುದೇ ಬೇರೆ. ಕೆರೆ – ಕುಂಟೆಗಳಲ್ಲಿ ಹೂಳೆತ್ತಲು ತಮಿಳುನಾಡು ಮಾಡಿರುವ ಎಲ್ಲ ತಗಾದೆಗಳನ್ನು ವಾಪಸ್ ಪಡೆಯುವುದು ಈಗ ಮುಖ್ಯ. ತಮಿಳುನಾಡಿನಲ್ಲಿ ಕಾಂಗ್ರೆಸ್ ಬೆಂಬಲಿತ ಟಿವಿಕೆ ಪಾರ್ಟಿಯ ಸರ್ಕಾರವಿದೆ . ಇದೇ ವೇಳೆ ರಾಜ್ಯದಲ್ಲಿ ಡಿ ಕೆ ಶಿವಕುಮಾರ್ ಸಾರಥ್ಯದ ಕಾಂಗ್ರೆಸ್ ಸರ್ಕಾರವಿದೆ. ಈ ವಿಚಾರದಲ್ಲಿ ಶಿವಕುಮಾರ್ ಮತ್ತು ವಿಜಯ್ ಇಬ್ಬರೂ ಸಹಮತದಿಂದ ಒಂದೆಡೆ ಕುಳಿತು ಚರ್ಚಿಸಿದರೆ ಕಾವೇರಿ ಕಣಿವೆಯಲ್ಲಿ ಬಹುದಿನಗಳಿಂದ ನೆಲೆಗೊಂಡ ನೀರಿನ ಸಮಸ್ಯೆ ಬಗೆಹರಿದೀತು. ತುಂಗಭದ್ರಾ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಮೂಡಿದ ಸಹಮತ ಮತ್ತು ಸಾಮರಸ್ಯವೀಗ ಕಾವೇರಿ ಕಣಿವೆಯಲ್ಲಿಯೂ ಮೂಡುವುದು ಅನಿವಾರ್ಯ.

Related Posts

Leave a Reply

Your email address will not be published. Required fields are marked *