ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ವ್ಯಕ್ತಿಯು ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತರನ್ನು ಮನೋಜ್ (28) ಮತ್ತು ಸ್ವಪ್ನ (26) ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದವರಾದ ಇವರು ಮೂರು ವರ್ಷಗಳ ಹಿಂದೆ ಮದುವೆಯಾಗಿ ಕುಟುಂಬ ಸದಸ್ಯರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಮನೋಜ್ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದು, ಸ್ವಪ್ನ ಗೃಹಿಣಿಯಾಗಿದ್ದರು.
ಸ್ವಪ್ನ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು, ಇತ್ತೀಚಿನ ದಿನಗಳಲ್ಲಿ ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಜಗಳ ನಡೆಯುತ್ತಿತ್ತು. ನಾಲ್ಕು ದಿನಗಳಿಂದ ಮನೋಜ್ ಕೆಲಸಕ್ಕೂ ಹೋಗದೆ ಮನೆಯಲ್ಲೇ ಇದ್ದು, ಈ ಅವಧಿಯಲ್ಲಿ ದಂಪತಿ ನಡುವೆ ಹಲವು ಬಾರಿ ವಾಗ್ವಾದ ನಡೆದಿತ್ತು ಎನ್ನಲಾಗಿದೆ.
ಗುರುವಾರ ಮಧ್ಯಾಹ್ನ ಮನೆಯಲ್ಲಿ ಮತ್ತೊಮ್ಮೆ ಗಲಾಟೆ ನಡೆದಿದ್ದು, ಸ್ವಪ್ನ ಅವರ ತಾಯಿ ಮನೆಯ ಮೇಲ್ಛಾವಣಿಗೆ ಬಟ್ಟೆ ಒಣಗಿಸಲು ತೆರಳಿದ್ದರು. ಮನೋಜ್, ಮನೆಯ ಕೋಣೆಯಲ್ಲಿ ನಾಯಿಗೆ ಬಳಸುವ ನೈಲಾನ್ ಬೆಲ್ಟ್‌ನಿಂದ ಸ್ವಪ್ನ ಅವರ ಕುತ್ತಿಗೆ ಬಿಗಿದು ಹತ್ಯೆಗೈದಿದ್ದಾನೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಬಳಿಕ ಅದೇ ನೈಲಾನ್ ಹಗ್ಗವನ್ನು ಬಳಸಿಕೊಂಡು ಫ್ಯಾನ್‌ಗೆ ನೇಣು ಬಿಗಿದು ಮನೋಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ. . ಕೌಟುಂಬಿಕ ಕಲಹ ಹೊರತಾಗಿ ಬೇರೆ ಯಾವುದಾದರೂ ಕಾರಣ ಇದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.


