ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾದ ಯುವಕನನ್ನು ಅಪಹರಿಸಿದ ಯುವತಿ ಆತನಿಂದ 3.75 ಲಕ್ಷ ರೂ. ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪೂನಂ ಎಂಬ ಯುವತಿ ಶೇಬಿನ್ ಬೇಬಿ ಎಂಬ ಯುವಕನನ್ನು ಪಬ್ಗೆ ಆಹ್ವಾನಿಸಿ ಅಪಹರಿಸಿದ ಬಳಿಕ ಸಹಚರರೊಂದಿಗೆ ಸೇರಿ ಯುವಕನಿಂದ 3.75 ಲಕ್ಷ ರೂ. ದೋಚಿ ಪರಾರಿಯಾಗಿದ್ದು, ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ, ವಂಚನೆಗೆ ಒಳಗಾದ ಚಂದಾಪುರ ನಿವಾಸಿ ಶೇಬಿನ್ ಬೇಬಿ ನೀಡಿದ ದೂರಿನ ಅನ್ವಯ, ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಪೂನಂ ಎಂಬ ಮಹಿಲೆ ವಿರುದ್ಧ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಯುವಕ ಕೆಲವು ತಿಂಗಳಿಂದ ಡೇಟಿಂಗ್ ಆ್ಯಪ್ ಬಳಸುತ್ತಿದ್ದು, ವಂಚಕಿ ಪೂನಂಳ ಪರಿಚಯವಾಗಿ ಇಬ್ಬರೂ ಆತ್ಮೀಯ ಮಾತುಕತೆ ನಡೆಸುತ್ತಿದ್ದರು. ವಂಚಕಿ ಯುವತಿ, ಆ.19ರಂದು ರಾತ್ರಿ ಪಬ್ಗೆ ಯುವಕನಿಗೆ ಬರಲು ಸೂಚಿಸಿದ್ದಳು. ಪಬ್ ಮುಂಭಾಗ ಯುವಕ ಕಾಯುತ್ತ ನಿಂತಿದ್ದ. ಕಾರಿನಲ್ಲಿ ಬಂದ ಆಕೆ , ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಬರಲು ಆತನನ್ನು ತನ್ನ ಕಾರಿನಲ್ಲೇ ಕರೆದುಕೊಂಡು ಹೋಗಿದ್ದಳು.
ಪೆಟ್ರೋಲ್ ಹಾಕಿಸಿಕೊಂಡು ಬರಲು ಹೋದ ವೇಳೆ ಮಾರ್ಗ ಮಧ್ಯ ಮೂತ್ರ ವಿಸರ್ಜನೆ ಮಾಡಬೇಕೆಂದು ಕಾರನ್ನು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿದ್ದಳು. ಅಲ್ಲಿ ಆಕೆ ಕಾರಿನಿಂದ ಇಳಿದು ಕೆಳಗೆ ಹೋದ ಕೆಲವೇ ನಿಮಿಷಗಳಲ್ಲಿ ನಾಲ್ವರು ಶೇಬಿನ್ ಅವರನ್ನು ಬೆದರಿ, ಅದೇ ಕಾರಿನಲ್ಲಿ ಸ್ವಲ್ಪ ದೂರ ಕರೆದುಕೊಂಡು ಹೋಗಿ ಅಲ್ಲಿಂದ ಬೇರೆ ಕಾರಿನಲ್ಲಿ ಕೂರಿಸಿಕೊಂಡು ನಗರದ ಸುತ್ತ ಸುತ್ತಾಡಿಸಿ ಒಟ್ಟು 3.75 ಲಕ್ಷ ರೂಪಾಯಿ ದೋಚಿಸಿದ್ದಾರೆ.
ಪೊಲೀಸರು ಅಪಹರಣ ಮತ್ತು ಸುಲಿಗೆ ಪ್ರಕರಣ ದಾಖಲಿಸಿಕೊಂಡು, ಯುವತಿಯ ಮೊಬೈಲ್ ಸಂಖ್ಯೆ, ಎಟಿಎಂ ಹಾಗೂ ಪೆಟ್ರೋಲ್ ಬಂಕ್ಗಳ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸುತ್ತಿದ್ದು, ವಂಚಕ ಜಾಲಕ್ಕಾಗಿ ಶೋಧ ಮುಂದುವರಿಸಿದ್ದಾರೆ.
ಶೇಬಿನ್ ಅವರನ್ನು ಅಪಹರಿಸಿ ನಗರದಲ್ಲಿ ಸುತ್ತಾಡುತ್ತಿದ್ದ ವೇಳೆ ಅವರ ಜೇಬಿನಲ್ಲಿದ್ದ 7 ಸಾವಿರ ನಗದು, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಲವಂತವಾಗಿ ಕಿತ್ತುಕೊಂಡಿದ್ದರು. ಮಾರ್ಗ ಮಧ್ಯೆ ಕಂಡು ಬಂದ ಎಟಿಎಂ ಬಳಿ ಕಾರು ನಿಲ್ಲಿಸಿ ಬಲವಂತವಾಗಿ 45 ಸಾವಿರ ರೂ. ಡ್ರಾ ಮಾಡಿಸಿದ್ದರು. ಕ್ರೆಡಿಟ್ ಕಾರ್ಡ್ ಬಳಸಿ ಕಾರಿಗೆ ಪೆಟ್ರೊಲ್ ಹಾಕಿಸಿಕೊಂಡಿದ್ದರು ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ರಾತ್ರಿಯಿಡಿ ಹೆದರಿಸಿ ಕಾರಿನಲ್ಲೇ ಸುತ್ತಾಡಿಸಿ ಕ್ರೆಡಿಟ್ ಕಾರ್ಡ್ನ ಪಾಸ್ವರ್ಡ್ ಬದಲಿಸಿದ ಆರೋಪಿಗಳು, 3.21 ಲಕ್ಷರೂ. ತಮ್ಮ ಖಾತೆಗೆ ವರ್ಗಾಯಿಸಿಕೊಂಡು, ಆ.20 ರ ಬೆಳಗ್ಗೆ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣದ ಸಮೀಪ ಬಿಟ್ಟು ಪರಾರಿಯಾಗಿದ್ದರು.


