ವಿರೋಧ ಪಕ್ಷದ ಶಾಸಕರಿಗೆ ಆಮಿಷ ಒಡ್ಡಿ, ಅಡ್ಡಮತದಾನ ಮಾಡಿಸುವ ರಾಜಕೀಯ ಸರ್ಕಸ್‌ನಲ್ಲಿ ದಿನಪೂರ್ತಿ ಮುಳುಗಿರುವ ಮುಖ್ಯಮಂತ್ರಿ @DKShivakumar ಅವರೇ, ನಿಮ್ಮ ಈ ಅಡ್ಡಕಸುಬಿ ಆಡಳಿತದಿಂದಾಗಿ ರಾಜ್ಯದ ಶಾಲಾ ಮಕ್ಕಳ ಭವಿಷ್ಯ ಡೋಲಾಯಮಾನವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಕಿಡಿ ಕಾರಿದ್ದಾರೆ.
ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಕಳೆಯುತ್ತಾ ಬಂದರೂ ಸರ್ಕಾರಿ ಶಾಲೆಗಳ ಕಡೆ ಕಣ್ಣೆತ್ತಿ ನೋಡುವ ವ್ಯವಧಾನ ಕೂಡ ನಿಮ್ಮ ಸರ್ಕಾರಕ್ಕೆ ಇಲ್ಲದಂತಾಗಿದೆ. ದಿನಬೆಳಗಾದರೆ ಕುರ್ಚಿ ಉಳಿಸಿಕೊಳ್ಳುವಲ್ಲೇ ತಾವು ಮುಳುಗಿದ್ದರೆ, ಇತ್ತ ಬಡವರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲದೆ ಪರದಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಅಡ್ಡಮತದಾನ ಮಾಡಿಸುವಲ್ಲೇ ಬ್ಯುಸಿಯಾಗಿರುವ ಈ ಅಡ್ಡಕಸುಬಿ ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತ ಸಂಪೂರ್ಣ ಮುಳುಗಿ ಹೋಗಿದೆ!
ವಿರೋಧ ಪಕ್ಷದ ಶಾಸಕರಿಗೆ ಆಮಿಷ ಒಡ್ಡಿ, ಅಡ್ಡಮತದಾನ ಮಾಡಿಸುವ ರಾಜಕೀಯ ಸರ್ಕಸ್‌ನಲ್ಲಿ ದಿನಪೂರ್ತಿ ಮುಳುಗಿರುವ ಮುಖ್ಯಮಂತ್ರಿ @DKShivakumar ಅವರೇ… ನಿಮ್ಮ ಈ ಅಡ್ಡಕಸುಬಿ ಆಡಳಿತದಿಂದಾಗಿ ರಾಜ್ಯದ ಶಾಲಾ ಮಕ್ಕಳ ಭವಿಷ್ಯ… pic.twitter.com/U6sX1O2ddq
— R. Ashoka (@RAshokaBJP) June 20, 2026
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಶಾಲೆಗಳು ಆರಂಭವಾಗಿ 20 ದಿನ ಕಳೆದರೂ ಹೊಸದಾಗಿ ದಾಖಲಾದ ಬಡ ವಿದ್ಯಾರ್ಥಿಗಳಿಗೆ ಕನಿಷ್ಠ ಪಠ್ಯಪುಸ್ತಕಗಳನ್ನು ವಿತರಿಸಲು ನಿಮ್ಮ ಇಲಾಖೆಗೆ ಸಾಧ್ಯವಾಗಿಲ್ಲ. ಇನ್ನೂ ಕೆಲವು ಟೈಟಲ್‌ಗಳು ಮುದ್ರಣದ ಹಂತದಲ್ಲೇ ಇವೆ ಎಂದರೆ ನಿಮ್ಮ ಸರ್ಕಾರದ ಸಿದ್ಧತೆ ಎಷ್ಟು ದರಿದ್ರವಾಗಿದೆ ಎಂಬುದು ಅರ್ಥವಾಗುತ್ತದೆ. ಪುಸ್ತಕಗಳಿಲ್ಲದೆ ಮಕ್ಕಳು ತರಗತಿಯಲ್ಲಿ ಖಾಲಿ ಕೈಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. ಪೋಷಕರು ಮತ್ತು ಶಿಕ್ಷಕರು ಪ್ರತಿದಿನ ಪುಸ್ತಕಗಳಿಗಾಗಿ ಶಿಕ್ಷಣ ಇಲಾಖೆಯ ಕಚೇರಿಗಳಿಗೆ ಅಲೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. .
ಮಕ್ಕಳಿಗೆ ಸಕಾಲದಲ್ಲಿ ಉಚಿತ ಸಮವಸ್ತ್ರ ಹಾಗೂ ಶೂ-ಸಾಕ್ಸ್‌ಗಳನ್ನು ವಿತರಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ಹಳಿ ತಪ್ಪಿದೆ. ಹೊಸದಾಗಿ ಶಾಲೆಗೆ ಸೇರಿದ ಮಕ್ಕಳು ಹಳೆಯ ಬಟ್ಟೆಗಳಲ್ಲೇ ಶಾಲೆಗೆ ಬರುವಂತಾಗಿದೆ. ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಜಾಹೀರಾತು ನೀಡಲು ನಿಮ್ಮ ಬಳಿ ದುಡ್ಡಿದೆ, ಆದರೆ ದೇಶದ ಭವಿಷ್ಯವಾಗಿರುವ ಮಕ್ಕಳಿಗೆ ಒಂದು ಜೊತೆ ಸಮವಸ್ತ್ರ ಕೊಡಲು ಖಜಾನೆಯಲ್ಲಿ ಹಣವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ, ಕುದುರೆ ವ್ಯಾಪಾರ ಕುದುರಿಸಿ ಶಾಸಕರನ್ನು ಖರೀದಿ ಮಾಡುವ ನಿಮ್ಮ ಬುದ್ಧಿವಂತಿಕೆಯನ್ನು ಸ್ವಲ್ಪ ಇತ್ತ ಆಡಳಿತದ ತಿರುಗಿಸಿ. ಬಡ ಮಕ್ಕಳ ಶೈಕ್ಷಣಿಕ ಭವಿಷ್ಯದ ಜೊತೆ ಈ ರೀತಿ ಕ್ರೂರವಾಗಿ ಆಟವಾಡಲು ನಿಮಗೆ ಹೇಗೆ ಮನಸ್ಸು ಬರುತ್ತದೆ ಎಂದು ಹರಿ ಹಾಯ್ದಿದ್ದಾರೆ.
ತಕ್ಷಣವೇ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಯುದ್ಧೋಪಾದಿಯಲ್ಲಿ ವಿತರಿಸಬೇಕು. ಇಲ್ಲದಿದ್ದರೆ, ಮಕ್ಕಳ ಭವಿಷ್ಯಕ್ಕಾಗಿ ಬಿಜೆಪಿ ಇಡೀ ರಾಜ್ಯಾದ್ಯಂತ ಬೀದಿಗಿಳಿದು ನಿಮ್ಮ ಅಡ್ಡಕಸುಬಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ರೂಪಿಸಲಿದೆ ಎಂದು ಎಚ್ಚರಿಸಿದ್ದಾರೆ.


