ಜನಗಣತಿಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಗಣತಿ ಹಂತದಲ್ಲಿ ಸಾರ್ವಜನಿಕರನ್ನು ಕೇಳಲಾಗುವ 40 ಪ್ರಶ್ನೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ವ್ಯಕ್ತಿಯ ಜಾತಿ ಹಾಗೂ ಕೋವಿಡ್-19 ಲಸಿಕೆ ಪಡೆದ ಸ್ಥಳದ ವಿವರಗಳೂ ಇದರಲ್ಲಿ ಸೇರಿವೆ.
ವ್ಯಕ್ತಿಯು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರೇ ಎಂಬ ವಿವರಗಳ ಜೊತೆಗೆ ಅವರ ನಿರ್ದಿಷ್ಟ ಜಾತಿಯ ಮಾಹಿತಿ ಕೇಳುವ ಪ್ರಶ್ನೆಗಳನ್ನು ಒಳಗೊಂಡಿದೆ. ಲಡಾಖ್ ಹಾಗೂ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಪ್ರದೇಶಗಳಲ್ಲಿ ಸೆಪ್ಟೆಂಬರ್ 1 ರಿಂದ 30 ರವರೆಗೆ ಜನಸಂಖ್ಯಾ ಗಣತಿ ನಡೆಯಲಿದೆ. ಮನೆ ಮನೆಗೆ ತೆರಳಿ ನಡೆಸುವ ಜನಸಂಖ್ಯಾ ಗಣತಿ ಆರಂಭವಾಗುವ ಮುನ್ನ ಸಾರ್ವಜನಿಕರು ತಾವೇ ವಿವರಗಳನ್ನು ದಾಖಲಿಸಲು ಆಗಸ್ಟ್ 17 ರಿಂದ ಆಗಸ್ಟ್ 31 ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ನಡೆಯಲಿದೆ. ಎರಡನೇ ಹಂತದಲ್ಲಿ ಜನಗಣತಿ ನಡೆಯಲಿದೆ. 2027ರ ಫೆಬ್ರವರಿ ತಿಂಗಳಿನಲ್ಲಿ ದೇಶಾದ್ಯಂತ ಈ ಪ್ರಕ್ರಿಯೆ ನಡೆಯಲಿದ್ದು ನಾಗರಿಕರ ಸಾಮಾಜಿಕ, ಆರ್ಥಿಕ ಮತ್ತು ಜನಸಂಖ್ಯಾ ವಿವರ ಸಂಗ್ರಹಿಸಲಾಗುತ್ತದೆ.
ಗಣತಿಯಲ್ಲಿ ಯಾವ ವಿವರ ಕೇಳಲಾಗುತ್ತದೆ
ವ್ಯಕ್ತಿಯ ಹೆಸರು, ಕುಟುಂಬದ ಮುಖ್ಯಸ್ಥರೊಂದಿಗಿನ ಸಂಬಂಧ, ಲಿಂಗ, ಹುಟ್ಟಿದ ದಿನಾಂಕ ಮತ್ತು ವಯಸ್ಸು (ಪೂರ್ಣಗೊಂಡ ವರ್ಷಗಳಲ್ಲಿ), ಪ್ರಸ್ತುತ ವೈವಾಹಿಕ ಸ್ಥಿತಿ, ವಿವಾಹದ ಸಂದರ್ಭದಲ್ಲಿದ್ದ ವಯಸ್ಸು (ಪೂರ್ಣಗೊಂಡ ವರ್ಷಗಳಲ್ಲಿ), ಪತಿ ಅಥವಾ ಪತ್ನಿಯ ಹೆಸರು, ರಾಷ್ಟ್ರೀಯತೆ, ಧರ್ಮ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಜಾತಿ, ತಂದೆ- ತಾಯಿಯ ವಿವರ, ಅಂಗವೈಕಲ್ಯ ಅಥವಾ ವಿಕಲಾಂಗತೆ, ಮಾತೃಭಾಷೆ ಮತ್ತು ತಿಳಿದಿರುವ ಇತರ ಭಾಷೆಗಳು, ಸಾಕ್ಷರತೆ ಮತ್ತು ಡಿಜಿಟಲ್ ಸಾಕ್ಷರತೆಯ ಸ್ಥಿತಿ.
ಶಿಕ್ಷಣ ಸಂಸ್ಥೆಗೆ ಹಾಜರಾಗುತ್ತಿರುವ ಸ್ಥಿತಿ, ಪಡೆದ ಗರಿಷ್ಠ ಶಿಕ್ಷಣ ಮಟ್ಟ ಮತ್ತು ವಿಷಯ ಅಥವಾ ಅಧ್ಯಯನ ಶಾಖೆ, ಕಳೆದ ವರ್ಷದಲ್ಲಿ ಯಾವುದೇ ಸಮಯದಲ್ಲಿ ಕೆಲಸ ಮಾಡಿದ್ದಾರೆಯೇ? ಆರ್ಥಿಕ ಚಟುವಟಿಕೆಯ ವರ್ಗ, ಉದ್ಯೋಗ ಅಥವಾ ವೃತ್ತಿ, ಕೈಗಾರಿಕೆ, ವ್ಯಾಪಾರ ಅಥವಾ ಸೇವೆಯ ಸ್ವರೂಪ, ಕೆಲಸಗಾರನ ವರ್ಗ ಅಥವಾ ಶ್ರೇಣಿ, ಆರ್ಥಿಕೇತರ ಚಟುವಟಿಕೆ (ಅಲ್ಪಾವಧಿ, ಅರೆ-ಅಲ್ಪಾವಧಿ ಮತ್ತು ಕೆಲಸ ಮಾಡದ ವ್ಯಕ್ತಿಗಳಿಗೆ, ಕೆಲಸ ಹುಡುಕುತ್ತಿದ್ದಾರೆಯೇ ಅಥವಾ ಕೆಲಸಕ್ಕೆ ಲಭ್ಯವಿದ್ದಾರೆಯೇ? (ಅಲ್ಪಾವಧಿ, ಅರೆ-ಅಲ್ಪಾವಧಿ ಮತ್ತು ಕೆಲಸ ಮಾಡದ ವ್ಯಕ್ತಿಗಳಿಗೆ), ಕೆಲಸದ ಸ್ಥಳಕ್ಕೆ ಪ್ರಯಾಣ, ಹುಟ್ಟಿದ ಸ್ಥಳ, ಹಿಂದಿನ ವಾಸಸ್ಥಳ, ವಲಸೆಗೆ ಕಾರಣ.
ಕೊನೆಯ ವಲಸೆಯ ನಂತರ ಈ ಗ್ರಾಮ ಅಥವಾ ಪಟ್ಟಣದಲ್ಲಿ ವಾಸಿಸುತ್ತಿರುವ ಅವಧಿ, ಖಾಯಂ ವಾಸಸ್ಥಳದ ವಿಳಾಸ, ಪ್ರಸ್ತುತ ಜೀವಂತವಿರುವ ಮಕ್ಕಳ ಸಂಖ್ಯೆ (ಪ್ರಸ್ತುತ ವಿವಾಹಿತ, ವಿಧವೆ, ವಿಚ್ಛೇದಿತ ಮತ್ತು ಪ್ರತ್ಯೇಕವಾಗಿ ವಾಸಿಸುತ್ತಿರುವ ಮಹಿಳೆಯರಿಗೆ ಮಾತ್ರ) ಜನಿಸಿದ ಒಟ್ಟು ಜೀವಂತ ಮಕ್ಕಳ ಸಂಖ್ಯೆ (ಪ್ರಸ್ತುತ ವಿವಾಹಿತ, ವಿಧವೆ, ವಿಚ್ಛೇದಿತ ಮತ್ತು ಪ್ರತ್ಯೇಕವಾಗಿ ವಾಸಿಸುತ್ತಿರುವ ಮಹಿಳೆಯರಿಗೆ ಮಾತ್ರ), ಕಳೆದ ಒಂದು ವರ್ಷದಲ್ಲಿ ಜನಿಸಿದ ಜೀವಂತ ಮಕ್ಕಳ ಸಂಖ್ಯೆ (ಪ್ರಸ್ತುತ ವಿವಾಹಿತ ಮಹಿಳೆಯರಿಗೆ ಮಾತ್ರ), ಕೋವಿಡ್-19 ಲಸಿಕೆ ಪಡೆದ ಸ್ಥಳ, ಒಟ್ಟು ಬ್ಯಾಂಕ್ ಖಾತೆಗಳ ಸಂಖ್ಯೆ, ಮೊಬೈಲ್ ದೂರವಾಣಿ ಸಂಖ್ಯೆ (ಲಭ್ಯವಿದ್ದರೆ), ಆಧಾರ್ ಸಂಖ್ಯೆ (ಲಭ್ಯವಿದ್ದರೆ)
ಮತದಾರರ ಗುರುತಿನ ಚೀಟಿ ಸಂಖ್ಯೆ (ಲಭ್ಯವಿದ್ದರೆ), ವಿದೇಶಾಂಗ ಪಾಸ್‌ಪೋರ್ಟ್ ಸಂಖ್ಯೆ (ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರೆ), ಚಾಲನಾ ಪರವಾನಗಿಯ ಲಭ್ಯತೆ.


