Wednesday, August 12, 2026
Menu

ಬೆಳಗಾವಿ ಶಿವಂ ಅಸೋಸಿಯೇಟ್ಸ್‌ ವಂಚನೆ ಮೊತ್ತ 2,110 ಕೋಟಿ ರೂ.: ಇಡಿ

ಸಾರ್ವಜನಿಕರಿಗೆ ವಂಚನೆ ಪ್ರಕರಣದಲ್ಲಿ ಸದ್ದು ಮಾಡುತ್ತಿರುವ ಬೆಳಗಾವಿಯ ಶಿವಂ ಅಸೋಸಿಯೇಟ್ಸ್‌ 2,110 ಕೋಟಿ ರೂಪಾಯಿ ವಂಚಿಸಿರುವುದಾಗಿ ಇಡಿ ಪ್ರಕಟಿಸಿದೆ. ತನಿಖೆ ಬಳಿಕ ಇಡಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಶಿವಾನಂದ ನೀಲಣ್ಣವರ್ ಒಡೆತನದ ಕಂಪನಿ ಮೂಲಕ ನಡೆದಿದೆ ಎನ್ನಲಾದ ಹಣಕಾಸು ವಂಚನೆಯ ಹಲವು ವಿವರಗಳನ್ನು ಬಯಲಿಗೆಳೆದಿದೆ.

ಶಿವಂ ಅಸೋಸಿಯೇಟ್ಸ್ ಹಾಗೂ ಅಂಗ ಸಂಸ್ಥೆಗಳಿಂದ 2,110 ಕೋಟಿ ರೂ. ವಂಚನೆಯಾಗಿದೆ ಎಂದು ಇಡಿ ಮಾಹಿತಿ ನೀಡಿದೆ. ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ನಂತರ ಇಡಿ ಅಧಿಕಾರಿಗಳು ಶಿವಾನಂದ ನೀಲಣ್ಣವರ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದರು.

2,110 ಕೋಟಿ ರೂ. ವಂಚನೆ ನಡೆದಿದ್ದು, ಹೂಡಿಕೆದಾರರಿಗೆ 333.89 ಕೋಟಿ ರೂ. ಮಾತ್ರ ವಾಪಸ್ ಮಾಲಾಗಿದೆ. ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಶೇರು ಮಾರುಕಟ್ಟೆ, ಬ್ಯಾಂಕ್‌ಗಳ ನಿಶ್ಚಿತ ಠೇವಣಿ ಹಾಗೂ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲಾಗಿತ್ತು. ಈ ವಂಚನೆ ಜಾಲದಲ್ಲಿ ಶಿವಂ ಅಸೋಸಿಯೇಟ್ಸ್, ಸುಭಾಷ್ ರಾಮನಗೌಡ ನಂದರಗಿ, ಮಹೇಶ್ ಎಸ್. ನೀಲಣ್ಣವರ್, ಶಿವಂ ಪ್ರೊಡಕ್ಷನ್ಸ್, ಶಿವಂ ಲೈಫ್ಲೈನ್ , ಶಿವಂ ಸೇವಾ ಸೇರಿದಂತೆ ಕೆಲವು ವ್ಯಕ್ತಿಗಳು ಭಾಗಿಯಾಗಿರುವುದು ಕಂಡುಬಂದಿದೆ ಎಂದು ಇಡಿ ಹೇಳಿದೆ.

ಅಕ್ರಮ ಹಣಕಾಸು ವಹಿವಾಟು ಹಾಗೂ ಬೇನಾಮಿ ಆಸ್ತಿ ಹೂಡಿಕೆಗೆ ಸಂಬಂಧಿಸಿದಂತೆ ಡಿಜಿಟಲ್ ಸಾಕ್ಷಿಗಳು ಹಾಗೂ ಇತರ ಹಲವು ಮಹತ್ವದ ದಾಖಲೆಗಳನ್ನು ಇಡಿ ವಶಕ್ಕೆ ಪಡೆದುಕೊಂಡಿದೆ.  ಆರ್‌ಬಿಐ ಅಥವಾ ಸೆಬಿ ಅನುಮತಿ ಇಲ್ಲದೆ ಅಕ್ರಮ ಠೇವಣಿ ಸಂಗ್ರಹಿಸುತ್ತಿದ್ದ ಆರೋಪದ ಮೇಲೆ ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಬಳಿಕ ಪೊಲೀಸರು ಶಿವಾನಂದ್‌ನನ್ನು ಮೇ 2026 ರಲ್ಲಿ ಬಂಧಿಸಿದ್ದರು. ತನಿಖೆ ಬಳಿಕ ವಂಚನೆಯ ವ್ಯಾಪ್ತಿ ದೊಡ್ಡದಾಗಿದ್ದರಿಂದ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಇಡಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.

ತಿಂಗಳಿಗೆ ಶೇ. 3% ಅಥವಾ ಅದಕ್ಕಿಂತ ಹೆಚ್ಚಿನ ಬಡ್ಡಿ ನೀಡುವುದಾಗಿ ಭರವಸೆ ನೀಡಿ 40,000ಕ್ಕೂ ಹೆಚ್ಚು ಜನರಿಂದ ಹಣ ಸಂಗ್ರಹಿಸಿರುವುದು ಪತ್ತೆಯಾಗಿದೆ. ಈ ಹಗರಣದ ತನಿಖೆ ವೇಳೆ ಕೆಲವು ಸ್ಯಾಂಡ್‌ವುಡ್ ಹಾಗೂ ಇತರ ಚಲನಚಿತ್ರ ನಟ-ನಟಿಯರ ಹೆಸರುಗಳು ಮುನ್ನೆಲೆಗೆ ಬಂದಿವೆ.

ಜೂನ್ ತಿಂಗಳಲ್ಲಿ ಜಾಮೀನಿನ ಮೇಲೆ ಹೊರಬಂದ ನಂತರ ಶಿವಾನಂದ ನೀಲಣ್ಣವರ್ ಸಾರ್ವಜನಿಕವಾಗಿ ಪತ್ತೆಯಾಗದ ಕಾರಣ ಹಣ ಕಳೆದುಕೊಂಡ ಹೂಡಿಕೆದಾರರು ಆತನ ಕಚೇರಿ ಹಾಗೂ ನಿವಾಸಗಳ ಮುಂದೆ ಹುಡುಕಾಟ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *