Menu

ಪ್ರಿಯತಮೆಯ ಕರೆದೊಯ್ಯಲು ಬಂದಿದ್ದ ಪ್ರಿಯಕರ ಮತ್ತು ಸಂಬಂಧಿಕರ ಮೇಲೆ ಹಲ್ಲೆ, ಆರೋಪಿಗಳ ಬಂಧನ

ಉದಯಕಾಲ ನ್ಯೂಸ್, ಹಾವೇರಿ: ಪ್ರೇಯಸಿಯನ್ನು ಆಕೆಯ ಮನೆಯಿಂದ ಕರೆದುಕೊಂಡು ಹೋಗಲು ಬಂದಿದ್ದ ಪ್ರಿಯಕರ ಹಾಗೂ ಆತನ ಮಾವ ಮತ್ತು ಚಿಕ್ಕಪ್ಪನನ್ನು ಮರಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ ಅಮಾನವೀಯ ಹಾಗೂ ದಾರುಣ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನಲ್ಲಿ ವರದಿಯಾಗಿದೆ. ಈ ಭೀಕರ ಹಲ್ಲೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿಯ ತಂದೆ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ ಮತ್ತು ಮದುವೆ

ಪ್ರಮೋದ್ ಹಾಗೂ ಬಂಧಿತ ಆರೋಪಿ ನಾಗೇಶಪ್ಪ ಬಳಿಗಾರ್ ಅವರ ಮಗಳು ಪರಸ್ಪರ ಪ್ರೀತಿಸುತ್ತಿದ್ದರು. ಈ ಜೋಡಿಯು ಸುಮಾರು ಇಪ್ಪತ್ತು ದಿನಗಳ ಹಿಂದೆ ರಟ್ಟಿಹಳ್ಳಿಯಿಂದ ಶಿವಮೊಗ್ಗಕ್ಕೆ ತೆರಳಿ, ಅಲ್ಲಿನ ವಿನೋಬನಗರದಲ್ಲಿರುವ ಶ್ರೀದುರ್ಗಾದೇವಿ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಬಳಿಕ ಶಿವಮೊಗ್ಗದಿಂದ ಹಿರೇಕೆರೂರ ಸಬ್ ರಿಜಿಸ್ಟಾರ್ ಕಚೇರಿಗೆ ತೆರಳಿ ವಿವಾಹವನ್ನು ನೋಂದಣಿ ಮಾಡಿಕೊಳ್ಳಲು ಮುಂದಾಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಯುವತಿಯ ಸಂಬಂಧಿಕರು, ರಿಜಿಸ್ಟರ್ ಮದುವೆಯಾಗುವುದನ್ನು ತಡೆದು ಯುವತಿಯನ್ನು ಬಲವಂತವಾಗಿ ಬತ್ತಿಕೊಪ್ಪ ಗ್ರಾಮಕ್ಕೆ ಕರೆದುಕೊಂಡು ಹೋಗಿ ತಮ್ಮ ಮನೆಯಲ್ಲಿ ಕೂಡಿಹಾಕಿದ್ದರು.

ನಂತರ ಅಕ್ಟೋಬರ್ 27ರಂದು ಯುವತಿಯು ತನ್ನನ್ನು ಬತ್ತಿಕೊಪ್ಪ ಗ್ರಾಮದಿಂದ ಬಂದು ಕರೆದುಕೊಂಡು ಹೋಗುವಂತೆ ಪ್ರಮೋದ್‌ಗೆ ಕರೆ ಮಾಡಿದ್ದಳು. ಇದರಿಂದ ಕಂಗಾಲಾದ ಪ್ರಮೋದ್, ಅಕ್ಟೋಬರ್ 28ರ ಮಧ್ಯಾಹ್ನ 1:30ರ ಸುಮಾರಿಗೆ ಬಾಡಿಗೆ ಕಾರಿನಲ್ಲಿ ತನ್ನ ಚಿಕ್ಕಪ್ಪ ಪರಶುರಾಮ ಹಾಗೂ ಮಾವ ಪ್ರಕಾಶ್ ಅವರನ್ನು ಜತೆಗೂಡಿಸಿಕೊಂಡು ಬತ್ತಿಕೊಪ್ಪ ಗ್ರಾಮಕ್ಕೆ ತೆರಳಿದ್ದನು.

ದೇವಸ್ಥಾನದಲ್ಲಿ ಕಟ್ಟಿಹಾಕಿ ಮಾರಣಾಕಾಂತ ಹಲ್ಲೆ

ಯುವತಿಯನ್ನು ಕರೆದೊಯ್ಯಲು ಬಂದ ಪ್ರಮೋದ್ ಹಾಗೂ ಆತನ ಸಂಬಂಧಿಕರನ್ನು ಕಂಡ ಯುವತಿಯ ತಂದೆ ನಾಗೇಶಪ್ಪ ಬಳಿಗಾರ್ ಹಾಗೂ ಆತನ ಸಹಚರರು ಆಕ್ರೋಶಗೊಂಡು ಬರ್ಬರ ವರ್ತನೆ ತೋರಿದ್ದಾರೆ. ಮೂವರನ್ನೂ ಬತ್ತಿಕೊಪ್ಪ ಗ್ರಾಮದ ಶ್ರೀಮಹೇಶ್ವರ ದೇವಸ್ಥಾನದ ಬಳಿ ಎಳೆದುಕೊಂಡು ಹೋಗಿ ಮರಕ್ಕೆ ಕಟ್ಟಿಹಾಕಿ, ಬಟ್ಟೆ ಬಿಚ್ಚಿ ಅಮಾನುಷವಾಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಅಮಾನವೀಯ ಹಲ್ಲೆಯ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಪೊಲೀಸರ ಕ್ರಮ ಹಾಗೂ ಆರೋಪಿಗಳ ಬಂಧನ

ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಯಶೋಧಾ ವಂಟಗೋಡಿ ಮಾತನಾಡಿ, “ಗಾಯಗೊಂಡಿದ್ದ ಪ್ರಮೋದ್, ಪರಶುರಾಮ್ ಹಾಗೂ ಪ್ರಕಾಶ್ ಅಂದು ತಕ್ಷಣ ಆಸ್ಪತ್ರೆಗೆ ತೆರಳಿರಲಿಲ್ಲ. ಮರುದಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಂತೆ ಅಕ್ಟೋಬರ್ 31ರಂದು ಹಂಸಭಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ” ಎಂದರು.

ಯುವತಿಯ ತಂದೆ ನಾಗೇಶಪ್ಪ ಬಳಿಗಾರ್ ಸೇರಿದಂತೆ ಒಟ್ಟು 10 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ದೂರು ದಾಖಲಾಗುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

#HaveriNews #Hirekerur #HamsabhaviPolice #AssaultCase #ViralVideo #UdayakalaNews #KarnatakaCrime

Related Posts

Leave a Reply

Your email address will not be published. Required fields are marked *