ಮಲೆನಾಡಿದ 6 ಮಂದಿ ನಕ್ಸಲರು ಕೊನೆ ಕ್ಷಣದಲ್ಲಿ ಶರಣಾಗತಿ ಸ್ಥಳವನ್ನು ಬದಲಾಯಿಸಿದ್ದು, ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗಲಿದ್ದಾರೆ.
ಚಿಕ್ಕಮಗಳೂರಿನ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡದ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ. ಮತ್ತು ರಾಯಚೂರಿನ ಮಾರಪ್ಪ ಅರೋಲಿ ಶರಣಾಗತಿ ಆಗುತ್ತಿರುವ ನಕ್ಸಲರಾಗಿದ್ದಾರೆ.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಶಾಂತಿಗಾಗಿ ನಾಗರಿಕ ವೇದಿಕೆ ಆಶ್ರಯದಲ್ಲಿ ಆರು ಮಂದಿ ನಕ್ಸಲರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎದುರು ಶರಣಾಗಲು ನಿರ್ಧರಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ತಮ್ಮ ತೀರ್ಮಾನ ಬದಲಿಸಿದರು.
ಸರ್ಕಾರದ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಮುಂದೆ ಶರಣಾಗತಿ ಪ್ರಕ್ರಿಯೆ ನಡೆಯಬೇಕೆಂದು ಸಮಿತಿಯ ಕೆಲವು ಸದಸ್ಯರು ಪಟ್ಟು ಹಿಡಿದ ಕಾರಣ ಅಂತಿಮ ಕ್ಷಣದಲ್ಲಿ ಶರಣಾಗತಿ ಪ್ರಕ್ರಿಯೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ವರ್ಗಾವಣೆಯಾಗಿದೆ.
ಬೆಳಗ್ಗೆ ಶೃಂಗೇರಿಯಿಂದ ಹೊರಟ ನಕ್ಸಲರ ತಂಡ ಕಣತಿ ಸಮೀಪ ಬರುತ್ತಿದ್ದಂತೆ ಬೆಂಗಳೂರಲ್ಲಿ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಅವರ ಸಮ್ಮುಖದಲ್ಲೇ ಶರಣಾಗತಿ ಆಗಬೇಕು ಎಂಬ ಒತ್ತಾಯದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.