ಕರ್ನಾಟಕದಲ್ಲಿ ಎಚ್ಎಂಪಿವಿ ವೈರಸ್ ಟೆಸ್ಟ್ ಕಡ್ಡಾಯವಲ್ಲ ಎಂದು ಆರೋಗ್ಯ ಇಲಾಖೆ ಆಸ್ಪತ್ರೆಗೆ ಹೋಗುವವರಿಗೆ ಸೂಚನೆ ನೀಡಿದೆ. ಎಚ್ಎಂಪಿವಿ ವೈರಸ್ ಟೆಸ್ಟ್ ಮಾಡಿಸಿಕೊಳ್ಳಿ ಎನ್ನುವ ಖಾಸಗಿ ಲ್ಯಾಬ್ ಹಾಗೂ ಖಾಸಗಿ ಆಸ್ಪತ್ರೆಗಳ ಮೇಲೆ ಇಲಾಖೆ ನಿಗಾ ಇಡುವುದಾಗಿ ತಿಳಿಸಿದೆ. ಜ್ವರ, ಕೆಮ್ಮು ಎಂದು ಆಸ್ಪತ್ರೆಗೆ ಹೋಗುವವರು ಎಚ್ಎಂಪಿವಿ ವೈರಸ್ ಟೆಸ್ಟ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದೆ.
ಈ ವಿಚಾರವಾಗಿ ಆರೋಗ್ಯ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಎಚ್ಎಂಪಿವಿ ವೈರಸ್ ಟೆಸ್ಟ್ಗೆ 10 ಸಾವಿರ ರೂ.ನಿಂದ 12 ಸಾವಿರ ರೂ. ದರ ಇದೆ. ಚಳಿಗಾಲದಲ್ಲಿ ವೈರಸ್ ಕಾಣಿಸಿಕೊಳ್ಳುವುದು ಸಹಜ. ಅದಕ್ಕಾಗಿ ಸರ್ಕಾರಿ ಆಸ್ಪತ್ರೆಗಳಲ್ಲೂ ಎಚ್ಎಂಪಿವಿ ಟೆಸ್ಟಿಂಗ್ ಮಾಡುವುದಿಲ್ಲ. ಈ ವೈರಸ್ ಅಪಾಯಕಾರಿ ಅಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಪತ್ತೆಯಾಗಿರುವುದು ಚೀನಾದಲ್ಲಿ ಪತ್ತೆಯಾಗಿದೆ ಎನ್ನಲಾಗಿರುವ ವೈರಸ್ ಅಲ್ಲ, ಜನರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಹೇಳಿದೆ.
ದೇಶದಾದ್ಯಂತ ಈವರೆಗೆ ಒಟ್ಟು 7 ಹೆಚ್ಎಂಪಿವಿ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ 2, ತಮಿಳುನಾಡಿನಲ್ಲಿ 2, ಮಹಾರಾಷ್ಟ್ರದಲ್ಲಿ 2, ಗುಜರಾತ್ನಲ್ಲಿ 1 ಪ್ರಕರಣ ದೃಢಪಟ್ಟಿವೆ.