2030ರ ವೇಳೆಗೆ ಭಾರತ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನಿಗದಿ ಮಾಡಿರುವ ಗುರಿ ಮುಟ್ಟುವ ದೃಷ್ಟಿಯಿಂದ ಮತ್ತೊಂದು ಸುತ್ತಿನ ‘ಉತ್ಪಾದನೆ ಆಧಾರಿತ ಉತ್ತೇಜನ ಸೌಲಭ್ಯ ಯೋಜನೆಗೆ ಕೇಂದ್ರ ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.
ನವದೆಹಲಿಯಲ್ಲಿ ಸಚಿವರು ಈ ಸೌಲಭ್ಯಕ್ಕೆ ಉಕ್ಕು ಉತ್ಪಾದಕರು ನೋಂದಾಯಿಸಿಕೊಳ್ಳುವ ಪೋರ್ಟಲ್ ಗೆ ಚಾಲನೆ ನೀಡಿದರು. ಉಕ್ಕು ಆಮದು ಪ್ರಮಾಣಕ್ಕೆ ಅಂಕೆ ಹಾಕುವ, ದೇಶೀಯವಾಗಿ ಹೆಚ್ಚು ಪ್ರಮಾಣದಲ್ಲಿ ಉಕ್ಕು ಉತ್ಪಾದಿಸುವ ಗುರಿಯೊಂದಿಗೆ ಈ ಸೌಲಭ್ಯ ನೀಡಲಾಗುತ್ತಿದೆ ಎಂದರು.
ಪಿಎಲ್ ಐ 1.1 ಪೋರ್ಟಲ್ ಈಗಿನಿಂದಲೇ ನೋಂದಾವಣೆಗೆ ತೆರೆದುಕೊಂಡಿದೆ. ಈ ತಿಂಗಳ ಕೊನೆ, ಎಂದರೆ ಜನವರಿ 31ರವರೆಗೂ ಉಕ್ಕು ಉದ್ಯಮಿಗಳು ನೋಂದಾಯಿಸಿಕೊಳ್ಳಲು ಅವಕಾಶವಿದೆ ಎಂದು ಸಚಿವರು ಮಾಹಿತಿ ನೀಡಿದರು.
PLI ಯೋಜನೆಯ ಮೊದಲ ಹಂತದಲ್ಲಿ ಮಹತ್ವದ ಯಶಸ್ಸು ಸಾಧಿಸಿದೆ. ₹27,106 ಕೋಟಿ ಹೂಡಿಕೆಯ ಜತೆಗೆ 14,760 ನೇರ ಉದ್ಯೋಗ ಅವಕಾಶ ಹಾಗೂ 7.90 ದಶಲಕ್ಷ ಟನ್ಗಳಷ್ಟು ಹೆಚ್ಚುವರಿ ವಿಶೇಷ ಉಕ್ಕಿನ ಉತ್ಪಾದನಾ ಸಾಮರ್ಥ್ಯವನ್ನು ತೋರಿಸಿದೆ. ಕಳೆದ 2024ರ ಅಕ್ಟೋಬರ್ ಹೊತ್ತಿಗೆ ₹17,581 ಕೋಟಿಗಳಷ್ಟು ಹೂಡಿಕೆ ಆಗಿದೆ. ಪರಿಣಾಮವಾಗಿ 8,660 ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಸಚಿವ ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.
ನಿಜಕ್ಕೂ ಪಿ ಎಲ್ ಐ 1.0 ಯಶಸ್ಸು ಸ್ಪೂರ್ತಿದಾಯಕವಾಗಿದೆ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಉಕ್ಕು ಉದ್ಯಮವನ್ನು ಮುನ್ನಡೆಸುವ ನಮ್ಮ ಸಂಕಲ್ಪಕ್ಕೆ ದೊಡ್ಡ ಶಕ್ತಿ ತುಂಬಿದೆ ಎಂದು ಹೇಳಿದರು.