Menu

ಕೊಪ್ಪಳ: ಬಾಣಂತಿಗೆ ಕುತ್ತು ತಂದೊಡ್ಡಿದ ಅಧಿಕ ರಕ್ತದೊತ್ತಡ

ಕೊಪ್ಪಳ: ಬಾಣಂತಿಯರ ಸಾವಿನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಇದಕ್ಕೆ ನಾನಾ ಕಾರಣಗಳಿದ್ದರೂ ಆಗುತ್ತಿರುವ ಜೀವಹಾನಿ ಅಸಹನೀಯ. ಇಂಥ ಮತ್ತೊಂದು ಘಟನೆ ಕೊಪ್ಪಳದಲ್ಲಿ ಮಂಗಳವಾರ ಬೆಳಗಿನ ವೇಳೆ ನಡೆದಿದೆ.

ಗುರುವಾರವಷ್ಟೇ ಇಲ್ಲಿನ 100 ಹಾಸಿಗೆಗಳ ತಾಯಿ-ಶಿಶು ಆಸ್ಪತ್ರೆಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನ ಐಶ್ವರ್ಯ (20) ಎಂಬ ಬಾಣಂತಿ, ನಂಜು ಉಂಟಾಗಿದ್ದ ಕಾರಣಕ್ಕೆ ಸಾವನ್ನಪ್ಪಿದ್ದರು. ಮಂಗಳವಾರ ನಸುಕಿನ ವೇಳೆ ಕುಷ್ಟಗಿ ತಾಲೂಕಿನ ಆಡೂರು ಗ್ರಾಮದ ರೇಣುಕಾ ಪ್ರಕಾಶ್ ಹಿರೇಮನಿ (22) ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಬೆಳಗಿನ ಸುಮಾರು 7 ಗಂಟೆ ಹೊತ್ತಿಗೆ ಅಸು ನೀಗಿದ್ದಾರೆ.

ಕೊಪ್ಪಳದಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಪ್ರಕರಣಗಳಲ್ಲಿ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯವಾಗಲಿ, ಔಷಧೋಪಚಾರದ ಕೊರತೆಯಾಗಲಿ ಕಾರಣವಲ್ಲ, ಬಾಣಂತಿಯರ ಆರೋಗ್ಯದಲ್ಲಿ ಉಂಟಾದ ಏರು-ಪೇರಿನಿಂದ ಸಾವು ಸಂಭವಿಸಿರುವುದು ದೃಢವೆಂದು ಕೊಪ್ಪಳದ ಕಿಮ್ಸ್ನ ತಾಯಿ-ಶಿಶು ಆಸ್ಪತ್ರೆಯ ಮುಖ್ಯಸ್ಥ ಡಾ.ಬಿ.ಎಚ್.ನಾರಾಯಣಿ ಉದಯಕಾಲಕ್ಕೆ ತಿಳಿಸಿದರು.

ಕುಕನೂರು ತಾಲ್ಲೂಕಿನ ಆಡೂರು ಗ್ರಾಮದ ರೇಣುಕಾ ಪ್ರಕಾಶ ಹಿರೇಮನಿ(22) ಎನ್ನುವ ಬಾಣಂತಿ ಕೊನೆಯುಸಿರೆಳೆದಿದ್ದು, ಸೋಮವಾರ ಕುಷ್ಟಗಿಯ ಡಾ.ಚಂದ್ರಕಲಾ ಅವರ ಬಳಿ ತಪಾಸಣೆಗೊಳಗಾದಾಗ ಅಧಿಕ ರಕ್ತದೊತ್ತಡ ಕಂಡು ಬಂದಿದ್ದರಿಂದ ಮತ್ತು ಗರ್ಭದಲ್ಲಿದ್ದ 36 ವಾರ 6 ದಿನದ ಮಗು ಸಾವನ್ನಪ್ಪಿರುವ ಶಂಕೆಯಿಂದ ಕೊಪ್ಪಳದ ತಾಯಿ-ಶಿಶು ಆಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ.

ಸಾವನ್ನಪ್ಪಿರುವ ಮಗುವನ್ನು ಗರ್ಭದಿಂದ ಹೊರತೆಗೆದು ಬಾಣಂತಿ ರೇಣುಕಾ ಜೀವ ಉಳಿಸಲು ವೈದ್ಯಸಿಬ್ಬಂದಿ ಹರಸಾಹಸಪಟ್ಟರೂ ದುರದೃಷ್ಟವಶಾತ್ ಬಾಣಂತಿ ರೇಣುಕಾ ಸಹ ಕೊನೆಯುಸಿರೆಳೆದಿದ್ದಾರೆ. ಸ್ವಗ್ರಾಮ ಆಡೂರು ಗ್ರಾಮದಲ್ಲಿ ರೇಣುಕಾ ಅಂತ್ಯಕ್ರಿಯೆ ನೆರವೇರಿತು.

Related Posts

Leave a Reply

Your email address will not be published. Required fields are marked *