Menu

ದರ್ಶನ್‌ ಬೆನ್ನುನೋವು ಚಿಕಿತ್ಸೆಗೆ ಕೋರ್ಟ್‌ ಅಸ್ತು: ಖಾಸಗಿ ಬದಲು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್‌!

ಉದಯಕಾಲ ನ್ಯೂಸ್, ಬೆಂಗಳೂರು:ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ ತೂಗುದೀಪಗೆ ತೀವ್ರ ಬೆನ್ನುನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲು ನ್ಯಾಯಾಲಯ ಅನುಮತಿ ನೀಡಿದೆ. ಈ ಮೂಲಕ ತೀವ್ರ ನೋವಿನಿಂದ ಬಳಲುತ್ತಿದ್ದ ನಟ ದರ್ಶನ್‌ಗೆ ನ್ಯಾಯಾಲಯದಿಂದ ಕೊಂಚ ರಿಲೀಫ್ ಸಿಕ್ಕಂತಾಗಿದ್ದು, ಇಂದೇ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡುವ ಸಾಧ್ಯತೆ ದಟ್ಟವಾಗಿದೆ.

ಬೆಂಗಳೂರಿನ 59ನೇ ಸಿಸಿಎಚ್ (CCH-59) ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಅವರು ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಜೈಲಿನ ವೈದ್ಯಾಧಿಕಾರಿಗಳು ಸಲ್ಲಿಸಿದ ಆರೋಗ್ಯ ತಪಾಸಣಾ ವರದಿ ಹಾಗೂ ದರ್ಶನ್ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಪೀಠ, ನೋವು ಉಪಶಮನಕ್ಕೆ ಅಗತ್ಯವಿರುವ ಫಿಸಿಯೋಥೆರಪಿ ಚಿಕಿತ್ಸೆಯನ್ನು ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊಡಿಸಲು ಜೈಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಖಾಸಗಿ ಆಸ್ಪತ್ರೆ ಕೇಳಿದ್ದ ದರ್ಶನ್ ಪರ ವಕೀಲರು

ಚಳಿಗಾಲ ಆರಂಭವಾದ ಬೆನ್ನಲ್ಲೇ ತಮ್ಮ ಹಳೆಯ ಬೆನ್ನುನೋವಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ನಟ ದರ್ಶನ್ ಈ ಹಿಂದೆ ನ್ಯಾಯಾಲಯದ ಮುಂದೆ ಅಳಲು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ದರ್ಶನ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ (ಬಿಜಿಎಸ್, ಅಪೋಲೋ ಅಥವಾ ಹಾಸ್ಮಟ್ ಆಸ್ಪತ್ರೆ) ವಿಶೇಷ ಚಿಕಿತ್ಸೆ ಕೊಡಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು.

ವಿಚಾರಣೆ ವೇಳೆ ವಾದ ಮಂಡಿಸಿದ ವಕೀಲ ಹಷ್ಮತ್ ಪಾಷಾ, ದರ್ಶನ್ ಅವರು ಕಳೆದ 12 ವರ್ಷಗಳಿಂದ ತೀವ್ರ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ನೋವು ನಿಯಂತ್ರಣಕ್ಕಾಗಿ ನಿಯಮಿತವಾಗಿ ‘ಎಪಿಡ್ಯೂರಲ್ ಇಂಜೆಕ್ಷನ್’ ಪಡೆಯುತ್ತಿದ್ದರು. ಆದರೆ ಜೈಲಿಗೆ ಹೋದ ನಂತರ ಈ ಚುಚ್ಚುಮದ್ದು ನೀಡಿಲ್ಲ. ಈ ವಿಶೇಷ ಇಂಜೆಕ್ಷನ್ ಅನ್ನು ಆಪರೇಷನ್ ಥಿಯೇಟರ್‌ನಲ್ಲಿ ಅರಿವಳಿಕೆ ನೀಡಿಯೇ ಕೊಡಬೇಕಾಗುತ್ತದೆ. ಜೈಲಿನ ಆಸ್ಪತ್ರೆಯಲ್ಲಿ ಕಳೆದ 20 ದಿನಗಳಲ್ಲಿ ಕೇವಲ ಎರಡು-ಮೂರು ಬಾರಿ ಮಾತ್ರ ಸಹಾಯಕ ಸಿಬ್ಬಂದಿಯಿಂದ ಫಿಸಿಯೋಥೆರಪಿ ನೀಡಲಾಗಿದ್ದು, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕಳುಹಿಸಬೇಕು ಎಂದು ಕೋರಿದ್ದರು.

ವೈದ್ಯರ ವರದಿ ಪರಿಶೀಲಿಸಿ ಕೋರ್ಟ್ ನೀಡಿದ ಆದೇಶವೇನು?

ನ್ಯಾಯಾಲಯದ ಸೂಚನೆಯಂತೆ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ವೈದ್ಯಾಧಿಕಾರಿಗಳು ದರ್ಶನ್ ಅವರ ಆರೋಗ್ಯ ಸ್ಥಿತಿ ಮತ್ತು ಜೈಲಿನಲ್ಲಿ ನೀಡಲಾಗುತ್ತಿರುವ ಫಿಸಿಯೋಥೆರಪಿ ಚಿಕಿತ್ಸೆಯ ಕುರಿತಾದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅರ್ಜಿ ಮತ್ತು ವೈದ್ಯರ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಾಧೀಶರು, ತಕ್ಷಣಕ್ಕೆ ಖಾಸಗಿ ಆಸ್ಪತ್ರೆಗೆ ಅನುಮತಿ ನೀಡುವ ಬದಲು ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಚಿಕಿತ್ಸೆ ಕೊಡಿಸಲು ಸೂಚಿಸಿದ್ದಾರೆ.

ಇದೇ ವೇಳೆ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ದರ್ಶನ್ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಅವರಿಗೆ ನ್ಯಾಯಾಲಯ ಕಾಲಾವಕಾಶ ನೀಡಿದ್ದು, ಆ ಅರ್ಜಿಯ ವಿಚಾರಣೆಯನ್ನು ನವೆಂಬರ್ 30, ಸೋಮವಾರಕ್ಕೆ ಮುಂದೂಡಿದೆ.

ನ್ಯಾಯಾಲಯದ ಅಧಿಕೃತ ಆದೇಶದ ಪ್ರತಿ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳ ಕೈ ಸೇರಿದ ತಕ್ಷಣವೇ ದರ್ಶನ್ ಅವರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವ ಪ್ರಕ್ರಿಯೆ ಆರಂಭವಾಗಲಿದೆ. ಇಂದೇ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡುವ ಸಾಧ್ಯತೆಯಿದ್ದು, ಆಸ್ಪತ್ರೆ ಆವರಣದಲ್ಲಿ ಅಭಿಮಾನಿಗಳು ಜಮಾಯಿಸುವ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಭದ್ರತೆ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ.

#ActorDarshan #DarshanBackPain #VictoriaHospital #ParappanaAgrahara #BengaluruCourt #RenukaswamyCase #SandalwoodNews #BengaluruNews #UdayakalaNews #KarnatakaNews #DarshanThoogudeepa #CourtOrder

Related Posts

Leave a Reply

Your email address will not be published. Required fields are marked *