Menu

11ನೇ ತರಗತಿಯವನಿಗೆ  ಡಾಕ್ಟರ್‌ ಕೆಲಸ – 15 ಲಕ್ಷ ರೂ.ನಂತೆ 3೦೦ ಜನಕ್ಕೆ ನಕಲಿ ವೈದ್ಯಕೀಯ ಪದವಿ ಸೇಲ್‌!

ಉದಯಕಾಲ ನ್ಯೂಸ್, ನವದೆಹಲಿ / ಜೈಪುರ: ದೇಶದ 4 ರಾಜ್ಯಗಳಲ್ಲಿ ನಕಲಿ ವೈದ್ಯಕೀಯ ಪದವಿಗಳನ್ನು ಮಾರಾಟ ಮಾಡುತ್ತಿದ್ದ ಬೃಹತ್ ಜಾಲವೊಂದನ್ನು ರಾಜಸ್ಥಾನ ವಿಶೇಷ ಕಾರ್ಯಾಚರಣೆ ದಳದ ಪೊಲೀಸರು ಬಯಲಿಗೆಳೆದಿದ್ದಾರೆ. ಆರೋಪಿಗಳು ಸುಮಾರು 300 ಮಂದಿಗೆ ನಕಲಿ MBBS, MD ಹಾಗೂ DMRD ಪದವಿಗಳನ್ನು ಮಾರಾಟ ಮಾಡಿದ್ದು, ಇದಕ್ಕಾಗಿ 15 ಲಕ್ಷ ರೂ. ಗಿಂತಲೂ ಅಧಿಕ ಹಣ ಸಂಗ್ರಹಿಸಿರುವ ಶಂಕೆ ವ್ಯಕ್ತವಾಗಿದೆ.

ವಿಶ್ವವಿದ್ಯಾಲಯಗಳ ವೆಬ್‌ಸೈಟ್‌ಗಳಲ್ಲಿಯೇ ನಕಲಿ ಪದವಿಗಳ ವಿವರಗಳನ್ನು ಅಪ್‌ಲೋಡ್ ಮಾಡಿಸಿ, ಅವು ನೈಜ ಪದವಿಗಳೆಂಬಂತೆ ಬಿಂಬಿಸಲಾಗುತ್ತಿತ್ತು. ಈ ಮೂಲಕ ನಕಲಿ ಪದವಿ ಪಡೆದವರು ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಂಡು ಆಸ್ಪತ್ರೆಗಳಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗುತ್ತಿತ್ತು ಎಂಬ ಸ್ಫೋಟಕ ಸಂಗತಿ ತನಿಖೆಯಲ್ಲಿ ಬಯಲಾಗಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್ ಮೂಲಕ ಗ್ರಾಹಕರನ್ನು ಸೆಳೆದು, ಹಿನ್ನೆಲೆ ದಿನಾಂಕದ ಪ್ರಮಾಣಪತ್ರಗಳನ್ನು ಕೊರಿಯರ್ ಮೂಲಕ ಕಳುಹಿಸುವ ವ್ಯವಸ್ಥಿತ ಜಾಲ ಇದಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎಸ್‌ಒಜಿ ಕಾರ್ಯಾಚರಣೆ ಮತ್ತು ಆಘಾತಕಾರಿ ಮಾಹಿತಿ

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADG) ವಿಶಾಲ್ ಬನ್ಸಾಲ್ ಅವರ ನಿರ್ದೇಶನದಲ್ಲಿ, ಡಿಐಜಿ (DIG) ಭುವನ್ ಭೂಷಣ್ ಹಾಗೂ ಎಸ್‌ಪಿ (SP) ಸತ್ನಾಮ್ ಅವರ ನೇತೃತ್ವದಲ್ಲಿ ಈ ಮಹತ್ವದ ಕಾರ್ಯಾಚರಣೆ ನಡೆದಿದೆ. ನಾಲ್ಕು ರಾಜ್ಯಗಳಲ್ಲಿ ಹರಡಿಕೊಂಡಿದ್ದ ಈ ಅಂತಾರಾಜ್ಯ ಜಾಲದ ಕುರಿತು ಎಸ್‌ಒಜಿ ನಡೆಸಿದ ತನಿಖೆಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನೇ ಬೆಚ್ಚಿಬೀಳಿಸುವ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.

ಈ ಹಿಂದೆ ಬಿ.ಎ, ಬಿ.ಎಸ್ಸಿ, ಬಿ.ಎಡ್‌ನಂತಹ ಪದವಿಗಳಿಗೆ ಸೀಮಿತವಾಗಿದ್ದ ನಕಲಿ ದಾಖಲೆ ಹಾಗೂ ನಕಲಿ ಪರಿಶೀಲನೆ ದಂಧೆಯು ಈಗ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರಗಳಿಗೂ ವಿಸ್ತರಿಸಿರುವುದು ತನಿಖಾಧಿಕಾರಿಗಳನ್ನು ಕಳವಳಕ್ಕೀಡು ಮಾಡಿದೆ.

೧೧ನೇ ತರಗತಿ ಓದಿದ್ದವನಿಗೆ ಡಾಕ್ಟರ್‌ ಕೆಲಸ

ಈ ಪ್ರಕರಣದಲ್ಲಿ ಬೆಳಕಿಗೆ ಬಂದ ಅತ್ಯಂತ ಗಂಭೀರ ಸಂಗತಿಯೆಂದರೆ, ರಾಮಕಿಶೋರ್ ಮಹಾವರ್ ಎಂಬಾತ ಕೇವಲ 11ನೇ ತರಗತಿಯವರೆಗೆ ಮಾತ್ರ ಶಿಕ್ಷಣ ಪಡೆದಿದ್ದರೂ, ನಕಲಿ ಶೈಕ್ಷಣಿಕ ದಾಖಲೆಗಳ ಮೂಲಕ ಎಂಬಿಬಿಎಸ್‌ (MBBS) ವೈದ್ಯನೆಂದು ಗುರುತಿಸಿಕೊಂಡಿದ್ದಾನೆ.

ಫೇಸ್‌ಬುಕ್ ಜಾಹೀರಾತಿನ ಮೂಲಕ ಈ ಜಾಲದ ಸಂಪರ್ಕಕ್ಕೆ ಬಂದಿದ್ದ ಆರೋಪಿ, ಸುಮಾರು 5.5 ಲಕ್ಷ ರೂ. ಪಾವತಿಸಿ ನಕಲಿ 12ನೇ ತರಗತಿ, ಎಂಬಿಬಿಎಸ್‌ ಹಾಗೂ ಎಂಡಿ (ಸ್ತ್ರೀರೋಗ ಶಾಸ್ತ್ರ) ಪ್ರಮಾಣಪತ್ರಗಳನ್ನು ಕೊರಿಯರ್ ಮೂಲಕ ಪಡೆದುಕೊಂಡಿದ್ದ ಎನ್ನಲಾಗಿದೆ. ನಕಲಿ ಪದವಿಗಳ ಆಧಾರದಲ್ಲಿ ದೆಹಲಿ ವೈದ್ಯಕೀಯ ಮಂಡಳಿ ಹಾಗೂ ರಾಜಸ್ಥಾನ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದ ಈತ, ರಾಜಸ್ಥಾನದ ದೌಸಾ ಹಾಗೂ ದೆಹಲಿಯ ಸಫ್ದರ್‌ಜಂಗ್ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ವೈದ್ಯನಾಗಿ ಕೆಲಸ ಮಾಡಿದ್ದಾನೆ.

ಅಷ್ಟೇ ಅಲ್ಲದೆ, ದೆಹಲಿಯ ಆಸ್ಪತ್ರೆಯೊಂದರಲ್ಲಿ ಸ್ತ್ರೀರೋಗ ತಜ್ಞನೆಂದು ಹೇಳಿಕೊಂಡು ಅಲ್ಟ್ರಾಸೌಂಡ್ ಪರೀಕ್ಷೆಗಳನ್ನೂ ನಡೆಸುತ್ತಿದ್ದ. ಪ್ರತಿದಿನ ಸುಮಾರು 15ರಿಂದ 20 ಮಂದಿಗೆ ಸೋನೋಗ್ರಫಿ ಪರೀಕ್ಷೆಗಳನ್ನು ನಡೆಸುತ್ತಿದ್ದ ಎನ್ನಲಾಗಿದೆ. ನಂತರ ಡಿಪ್ಲೊಮಾ ಇನ್ ಮೆಡಿಕಲ್ ರೇಡಿಯೊ ಡಯಾಗ್ನೋಸಿಸ್ ನಕಲಿ ಪ್ರಮಾಣಪತ್ರವನ್ನೂ ಪಡೆದು ಆನ್-ಕಾಲ್ ಸೋನೋಗ್ರಫಿ ಸೇವೆ ನೀಡುತ್ತಿದ್ದ ಮಾಹಿತಿ ಹೊರಬಿದ್ದಿದೆ. ಅಗತ್ಯ ವೈದ್ಯಕೀಯ ಅರ್ಹತೆಯೇ ಇಲ್ಲದ ವ್ಯಕ್ತಿಯೊಬ್ಬ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಹಾಗೂ ತಪಾಸಣೆ ನಡೆಸುತ್ತಿದ್ದ ಸಂಗತಿ ರೋಗಿಗಳ ಸುರಕ್ಷತೆಯ ದೃಷ್ಟಿಯಿಂದ ಗಂಭೀರ ಆತಂಕಕ್ಕೆ ಕಾರಣವಾಗಿದೆ.

4 ರಾಜ್ಯಗಳಿಗೆ ವ್ಯಾಪಿಸಿದ್ದ ಜಾಲ; ಆರೋಪಿಗಳ ಬಂಧನ

ನಕಲಿ ಪದವಿಗಳನ್ನು ಸಿದ್ಧಪಡಿಸುವುದರಿಂದ ಹಿಡಿದು, ಅವುಗಳನ್ನು ವಿಶ್ವವಿದ್ಯಾಲಯಗಳ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಿ ಅಧಿಕೃತ ದಾಖಲೆಗಳಂತೆ ಬಿಂಬಿಸುವವರೆಗೆ ಈ ಜಾಲದಲ್ಲಿ ಹಲವು ಮಂದಿ ಪ್ರತ್ಯೇಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರು ಎಂದು ಎಸ್‌ಒಜಿ ತನಿಖೆಯಿಂದ ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ

ಮನೀಶ್ ಮಾಂಝಿ (ಗ್ವಾಲಿಯರ್, ಮಧ್ಯಪ್ರದೇಶ): ನಕಲಿ ಪದವಿ, ಅಂಕಪಟ್ಟಿ ಮತ್ತು ಡಿಪ್ಲೊಮಾ ಪ್ರಮಾಣಪತ್ರಗಳನ್ನು ಸಿದ್ಧಪಡಿಸಿ ಪೂರೈಸುತ್ತಿದ್ದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ.
ಖುರ್ರಂ ತೌಫೀಕ್‌ (ಲಕ್ನೋ, ಉತ್ತರ ಪ್ರದೇಶ): ನಕಲಿ ಪದವಿಗಳನ್ನು ವಿಶ್ವವಿದ್ಯಾಲಯಗಳ ಆನ್‌ಲೈನ್ ದಾಖಲೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಿಸುತ್ತಿದ್ದ ಆರೋಪದಲ್ಲಿ ಈತನನ್ನು ಬಂಧಿಸಲಾಗಿದೆ. ಪರಿಶೀಲನೆ ವೇಳೆ ಇವು ನೈಜ ದಾಖಲೆಗಳಂತೆ ಕಾಣುವಂತೆ ಮಾಡುವುದು ಹಾಗೂ ಆನ್‌ಲೈನ್ ದೃಢೀಕರಣ ಸಿಗುವಂತೆ ನೋಡಿಕೊಳ್ಳುವುದು ಈತನ ಕಾರ್ಯವಿಧಾನವಾಗಿತ್ತು.
ಸತ್ಯಜಿತ್ ಪಾಣಿಗ್ರಹಿ: ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್ ಮೂಲಕ ಜಾಹೀರಾತು ನೀಡಿ ಗ್ರಾಹಕರೊಂದಿಗೆ ವ್ಯವಹಾರ ನಡೆಸುತ್ತಿದ್ದ ಹಾಗೂ ನಕಲಿ ಪದವಿಗಳನ್ನು ಪೂರೈಸುತ್ತಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

3೦೦ ಮಂದಿಗೆ ನಕಲಿ ಪದವಿ ಸೇಲ್‌; ಸಂಸ್ಥೆಗಳ ಪರಿಶೀಲನೆ

ಆರೋಪಿಗಳು ಸುಮಾರು 300 ಮಂದಿಗೆ ವೈದ್ಯಕೀಯ ಪದವಿಗಳು ಸೇರಿದಂತೆ ವಿವಿಧ ಶೈಕ್ಷಣಿಕ ಪದವಿಗಳನ್ನು ನಕಲಿಯಾಗಿ ಒದಗಿಸಿರುವುದಾಗಿ ತನಿಖೆಯ ವೇಳೆ ತಿಳಿದುಬಂದಿದೆ. ಈ ಮೂಲಕ ಪದವಿ ಬಯಸಿದವರಿಂದ 15 ಲಕ್ಷ ರೂಪಾಯಿಗೂ ಅಧಿಕ ಹಣ ವಸೂಲಿ ಮಾಡಿರುವ ಶಂಕೆಯಿದೆ.

ತನಿಖೆಯ ವೇಳೆ ಹಲವು ಕಾಲೇಜುಗಳು, ಮಂಡಳಿಗಳು ಹಾಗೂ ವಿಶ್ವವಿದ್ಯಾಲಯಗಳ ಹೆಸರುಗಳು ಮುನ್ನೆಲೆಗೆ ಬಂದಿವೆ. ಈ ಶಿಕ್ಷಣ ಸಂಸ್ಥೆಗಳಿಗೂ ಈ ಜಾಲಕ್ಕೂ ಇರುವ ಸಂಪರ್ಕ ಹಾಗೂ ನಕಲಿ ಪದವಿಗಳ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಧಿಕೃತ ದಾಖಲೆಗಳಂತೆ ಬಿಂಬಿಸಿದ ರೀತಿಯ ಬಗ್ಗೆ ಪೊಲೀಸ್ ಅಧಿಕಾರಿಗಳು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ನಕಲಿ ದಾಖಲೆಗಳ ಆಧಾರದಲ್ಲಿ ವೈದ್ಯಕೀಯ ಮಂಡಳಿಗಳಲ್ಲಿ ನೋಂದಣಿ ಮಾಡಿಸಿಕೊಂಡಿರುವ ಇತರ ವ್ಯಕ್ತಿಗಳ ಪತ್ತೆಗೂ ಹಾಗೂ ಜಾಲದ ಉಳಿದ ಸದಸ್ಯರ ಬಂಧನಕ್ಕೂ ಎಸ್‌ಒಜಿ ಕಾರ್ಯಾಚರಣೆ ಮುಂದುವರಿಸಿದೆ.
#FakeMedicalDegree #RajasthanSOG #MedicalFraud #FakeMBBS #DoctorScam #CrimeNews #Udayakala #NationalNews

Related Posts

Leave a Reply

Your email address will not be published. Required fields are marked *