ಉದಯಕಾಲ ನ್ಯೂಸ್, ನವದೆಹಲಿ: ಪ್ರತಿಷ್ಠಿತ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಸೇರಿದಂತೆ ಯುನೈಟೆಡ್ ಕಿಂಗ್ಡಮ್ನ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸ ನೀಡಲು ತೆರಳುತ್ತಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ ಮುಖಂಡ ಹಾಗೂ ಸಹಸಂಸ್ಥಾಪಕ ಸೌರವ್ ದಾಸ್ ಅವರನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳು ತಡೆಹಿಡಿದಿದ್ದಾರೆ. ಈ ಘಟನೆಯ ಬೆನ್ನಲ್ಲೇ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಸೌರವ್ ದಾಸ್ ಮತ್ತು ಸಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ಹೇಡಿ ಹಾಗೂ ಬೌದ್ಧಿಕ ವಿರೋಧಿ ನಡೆ ಎಂದು ಕಿಡಿಕಾರಿದ್ದಾರೆ.
ಮಧ್ಯರಾತ್ರಿ 1 ಗಂಟೆಯ ಲಂಡನ್ ವಿಮಾನ ಏರುವ ಮುನ್ನವೇ ಪಾಸ್ಪೋರ್ಟ್ ತಡೆ!
ಮಂಗಳವಾರ ಮಧ್ಯರಾತ್ರಿ 1 ಗಂಟೆಗೆ ನಿಗದಿಯಾಗಿದ್ದ ಲಂಡನ್ ವಿಮಾನವನ್ನು ಏರಲು ಸೌರವ್ ದಾಸ್ ಅವರು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಇಮಿಗ್ರೇಷನ್ ತಪಾಸಣಾ ಕೌಂಟರ್ಗೆ ತೆರಳಿದ ತಕ್ಷಣ, ಅವರ ಪಾಸ್ಪೋರ್ಟ್ ಅನ್ನು ‘ಫ್ಲಾಗ್’ ಮಾಡಲಾಗಿದೆ ಎಂದು ತಿಳಿಸಿದ ಅಧಿಕಾರಿಗಳು ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ (X) ಹಾಗೂ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಮತ್ತು ಸರಣಿ ಪೋಸ್ಟ್ಗಳನ್ನು ಹಂಚಿಕೊಂಡಿರುವ ಸೌರವ್ ದಾಸ್, ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಲಂಡನ್ಗೆ ಹಾರುತ್ತಿದ್ದ ನನ್ನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಈ ಹೇಡಿ ಮೋದಿ ಸರ್ಕಾರ ತಡೆದಿದೆ. ಆಕ್ಸ್ಫರ್ಡ್, ಕೇಂಬ್ರಿಡ್ಜ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಹಾ ಗೂ ಎಡಿನ್ಬರ್ಗ್ನಂತಹ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಜಿರಳೆ ಚಳವಳಿಯ ಕುರಿತು ಭಾಷಣ ಮಾಡಲು ನನ್ನನ್ನು ಆಹ್ವಾನಿಸಿದ್ದವು. ಈ ಕಾರ್ಯಕ್ರಮಗಳನ್ನು ಆಯೋಜಿಸಲು ಭಾರತೀಯ ವಿದ್ಯಾರ್ಥಿಗಳು ತಮ್ಮ ಸರ್ವಸ್ವವನ್ನೂ ಮುಡಿಪಾಗಿಟ್ಟಿದ್ದರು. ಆದರೆ ಈ ಬೌದ್ಧಿಕ ವಿರೋಧಿ ಸರ್ಕಾರಕ್ಕೆ ನಾನು ಇಂತಹ ಪ್ರತಿಷ್ಠಿತ ಸಂಸ್ಥೆಗಳಿಗೆ ಹೋಗುವುದು ಕಂಡರೆ ಭಯವಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
‘ನಾನೂ ನೀರವ್ ಮೋದಿ, ವಿಜಯ್ ಮಲ್ಯ ಆಗಿರಬೇಕಿತ್ತು!’ – ಕೇಂದ್ರದ ವಿರುದ್ಧ ವ್ಯಂಗ್ಯ
ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘವು ಆಯೋಜಿಸಿದ್ದ ಪ್ಯಾನಲ್ ಚರ್ಚೆಯಲ್ಲಿ ಪಾಲ್ಗೊಳ್ಳಲು ತಾವು ತೆರಳುತ್ತಿದ್ದುದ್ದಾಗಿ ಸ್ಪಷ್ಟಪಡಿಸಿರುವ ಸೌರವ್ ದಾಸ್, ಸರ್ಕಾರದ ನಡೆಯನ್ನು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಒಬ್ಬ ಸುಶಿಕ್ಷಿತ ಯುವಕ, ಸುಶಿಕ್ಷಿತ ಜನರ ನಡುವೆ ಹೋಗಿ ಬೌದ್ಧಿಕ ಚರ್ಚೆ ನಡೆಸುವುದಕ್ಕೆ ಸರ್ಕಾರ ಏಕೆ ಇಷ್ಟೊಂದು ಹೆದರುತ್ತದೆ? ನಾನೊಬ್ಬ ನೀರವ್ ಮೋದಿ ಆಗಿರಬೇಕಿತ್ತು, ವಿಜಯ್ ಮಲ್ಯ ಆಗಿರಬೇಕಿತ್ತು! ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಿರಬೇಕಿತ್ತು, ಆಗ ಈ ಸರ್ಕಾರ ಖಂಡಿತವಾಗಿಯೂ ನನ್ನನ್ನು ಲಂಡನ್ಗೆ ಹಾರಲು ಬಿಡುತ್ತಿತ್ತು ಎಂದು ಕೇಂದ್ರ ಸರ್ಕಾರದ ವಿರುದ್ಧ ಕುಟುಕಿದ್ದಾರೆ.
ಇದೇ ವೇಳೆ ಸರ್ಕಾರದ ಆಡಳಿತ ವೈಖರಿಯನ್ನೂ ಟೀಕಿಸಿರುವ ಅವರು, ಸಚಿವರು ರಾಜೀನಾಮೆ ನೀಡಲು ನಿರಾಕರಿಸುತ್ತಿರುವುದರಿಂದ ಇವರಿಗೆ ತಮ್ಮ ಸಂಪುಟವನ್ನು ವಿಸ್ತರಣೆ ಮಾಡಲೂ ಸಾಧ್ಯವಾಗುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ. ಈ ಘಟನೆಯಿಂದ ತಮ್ಮ ಹೋರಾಟ ಮತ್ತು ಕೆಲಸಗಳನ್ನು ತಡೆಯಲು ಸಾಧ್ಯವಿಲ್ಲ ಎಂದಿರುವ ದಾಸ್, ಭವಿಷ್ಯದಲ್ಲಿ ತಾನು ಖಂಡಿತವಾಗಿಯೂ ಲಂಡನ್, ಪ್ಯಾರಿಸ್ ಮತ್ತು ಇತರೆ ಅಂತಾರಾಷ್ಟ್ರೀಯ ವೇದಿಕೆಗಳಿಗೆ ಪ್ರಯಾಣಿಸುವುದಾಗಿ ದೃಢವಾಗಿ ತಿಳಿಸಿದ್ದಾರೆ.
ಆಕ್ಸ್ಫರ್ಡ್ ಆಹ್ವಾನ ನೋಡಿ ಸರ್ಕಾರಕ್ಕೆ ಅಸೂಯೆ – ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಕಿಡಿ
ಸೌರವ್ ದಾಸ್ ಅವರಿಗೆ ವಿಮಾನ ನಿಲ್ದಾಣದಲ್ಲಿ ತಡೆಯೊಡ್ಡಿರುವುದನ್ನು ಖಂಡಿಸಿರುವ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜಿತ್ ದಿಪ್ಕೆ ಅವರು, ಅಧಿಕಾರದಲ್ಲಿರುವ ಕೆಲವರಿಗೆ ಸ್ವತಃ ಪ್ರಪಂಚ ಸುತ್ತುವುದೆಂದರೆ ತುಂಬಾ ಇಷ್ಟ. ಆದರೆ ಸೌರವ್ಗೆ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ಆಹ್ವಾನ ಬಂದಿರುವುದನ್ನು ನೋಡಿ ಅವರಿಗೆ ಅಸೂಯೆಯಾದಂತೆ ಕಾಣುತ್ತದೆ. ಸುಶಿಕ್ಷಿತರ ಧ್ವನಿಗಳನ್ನು ಅಡಗಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಎರಡು ತಿಂಗಳಲ್ಲಿ ಎರಡನೇ ಬಾರಿ ವಿಮಾನ ನಿಲ್ದಾಣದಲ್ಲಿ ತಡೆ!
ವಿಶೇಷವೆಂದರೆ, ಕಳೆದ ಎರಡು ತಿಂಗಳ ಅವಧಿಯಲ್ಲಿ ಸೌರವ್ ದಾಸ್ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆಹಿಡಿಯುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ ಅಕ್ಟೋಬರ್ 10ರಂದು ಮುಂಬೈನಿಂದ ದೆಹಲಿಗೆ ಬಂದಿಳಿದಿದ್ದ ಸೌರವ್ ದಾಸ್, ಅಭಿಜಿತ್ ದಿಪ್ಕೆ ಹಾಗೂ ಅಶುತೋಷ್ ರಾಂಕಾ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿತ್ತು. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ವಿರುದ್ಧ ಹಾಗೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಭಟನೆ ನಡೆಸಲು ದೆಹಲಿಗೆ ಬಂದಿದ್ದ ಸಂದರ್ಭದಲ್ಲಿ ಅವರನ್ನು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಅಕ್ಟೋಬರ್ 21ರಂದು ಅವರಿಗೆ ಜಾಮೀನು ಮಂಜೂರಾಗಿತ್ತು. ಇದೀಗ ವಿದೇಶಿ ವಿಶ್ವವಿದ್ಯಾಲಯದ ಉಪನ್ಯಾಸಕ್ಕೆ ತೆರಳುತ್ತಿದ್ದಾಗ ಮತ್ತೆ ಪಾಸ್ಪೋರ್ಟ್ ತಡೆಹಿಡಿದಿರುವುದು ರಾಷ್ಟ್ರಮಟ್ಟದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.
#SauravDas #CockroachJantaParty #CJP #DelhiAirport #UniversityOfOxford #ModiGovernment #Immigration #FreedomOfSpeech #IndianPolitics #LondonFlight #UdayakalaNews #KannadaNews


