Tuesday, November 24, 2026
Menu

ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರ : ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ

ಉದಯಕಾಲ ನ್ಯೂಸ್‌, ಶಿವಮೊಗ್ಗ / ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸಲು ಮುಂದಾಗಿರುವ ಕ್ರಮಕ್ಕೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಜನರು, ರೈತರು ಹಾಗೂ ಜನಪ್ರತಿನಿಧಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಒಂದು ವೇಳೆ ಆನೆಗಳನ್ನು ಈ ಭಾಗಕ್ಕೆ ಸ್ಥಳಾಂತರಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಸ್ಥಳೀಯ ಮುಖಂಡರು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅವೈಜ್ಞಾನಿಕ ಕ್ರಮ ಕೈಗೊಂಡರೆ ಅರಣ್ಯ ಕಚೇರಿಗೆ ಮುತ್ತಿಗೆ – ಆರಗ ಜ್ಞಾನೇಂದ್ರ ಎಚ್ಚರಿಕೆ

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು, ಆನೆ ಸ್ಥಳಾಂತರ ಯೋಜನೆಯನ್ನು ತೀವ್ರವಾಗಿ ಖಂಡಿಸಿದರು. ಇತ್ತೀಚೆಗೆ ಹಾಸನ ಭಾಗದಲ್ಲಿ ಕಾಡಾನೆ ದಾಳಿಯಿಂದ ಜೀವಹಾನಿ ಸಂಭವಿಸಿದ್ದು, ಅದರ ಬೆನ್ನಲ್ಲೇ ಪ್ರತಿಭಟನೆಗಳು ನಡೆದಿವೆ. ಇದಕ್ಕೆ ಪರಿಹಾರ ಎಂಬಂತೆ ಸುಮಾರು 47 ಕಾಡಾನೆಗಳ ಹಿಂಡನ್ನು ಭದ್ರಾ ಅಭಯಾರಣ್ಯದ ಕಡೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಇದು ಸಂಪೂರ್ಣ ಅವೈಜ್ಞಾನಿಕ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಆನೆಗೂ ಅದರದ್ದೇ ಆದ ನಿರ್ದಿಷ್ಟ ಆವಾಸ ಸ್ಥಾನ ಮತ್ತು ಜಾಗದ ಅಗತ್ಯವಿರುತ್ತದೆ. ಈಗಾಗಲೇ ಭದ್ರಾ ಅಭಯಾರಣ್ಯದಲ್ಲಿರುವ ಆನೆಗಳು ಅಪಾರ ಪ್ರಮಾಣದಲ್ಲಿ ಬೆಳೆಹಾನಿ ಉಂಟುಮಾಡುತ್ತಿವೆ. ಅಲ್ಲದೆ ಅಭಯಾರಣ್ಯದಿಂದ ಆನೆಗಳು ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕುಗಳತ್ತಲೂ ಲಗ್ಗೆ ಇಡುತ್ತಿವೆ. ಈಗಾಗಲೇ ಒಂದು ಆನೆ ಈ ಭಾಗದಲ್ಲಿ ಸಂಚರಿಸುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಫಸಲು ಕೈಗೆ ಬರುವ ಈ ಸಂದರ್ಭದಲ್ಲಿ ಆನೆ ದಾಳಿ ನಡೆದರೆ ರೈತರು ಮಣ್ಣು ತಿನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕಾಡಿನ ಒಳಗಡೆಯೇ ಅನೇಕ ಜನವಸತಿ ಮನೆಗಳಿರುವುದರಿಂದ ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಬಿಡಬಾರದು. ಎನ್.ಆರ್. ಪುರದಲ್ಲೂ ಇತ್ತೀಚೆಗೆ ಸಾವಿನ ಘಟನೆ ನಡೆದಿದ್ದು, ಇಲ್ಲಿಂದಲೇ ಆನೆಗಳನ್ನು ವಾಪಸ್ ಕಳುಹಿಸುವ ಅಗತ್ಯವಿದೆ. ಸದ್ಯ ಇರುವ ಮೂರ್ನಾಲ್ಕು ಆನೆಗಳನ್ನೇ ನಿಯಂತ್ರಿಸಲು ಅರಣ್ಯ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ತೀರ್ಥಹಳ್ಳಿ ಮತ್ತು ಹೊಸನಗರ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿರುವುದರಿಂದ ಜನರು ಸಂಚಾರವನ್ನೇ ಕಡಿಮೆ ಮಾಡಿದ್ದಾರೆ. ರೈತ ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು; ಆನೆಗಳನ್ನು ಕಳುಹಿಸಿದರೆ ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ ಜನರನ್ನು ಸೇರಿಸಿಕೊಂಡು ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಂಕಿ ಪಾರ್ಕ್ ಯೋಜನೆ ಹಾಗೂ ವನ್ಯಜೀವಿ ಸಂಘರ್ಷದ ಬಗ್ಗೆ ಪ್ರಸ್ತಾಪ

ಮಲೆನಾಡಿನಲ್ಲಿ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷದ ಕುರಿತು ಮಾತನಾಡಿದ ಆರಗ ಜ್ಞಾನೇಂದ್ರ, ಮಂಗಗಳ ಹಾವಳಿಯಿಂದ ರೈತರ ತೆಂಗು, ಅಡಿಕೆ ತೋಟಗಳು ಹಾಳಾಗುತ್ತಿವೆ; ಮನೆಯ ಹಂಚು ತೆಗೆದು ಒಳನುಗ್ಗಿ ದಾಂಧಲೆ ನಡೆಸುತ್ತಿವೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮಂಕಿ ಪಾರ್ಕ್ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಆದರೆ ಯಾವುದೇ ಹಳ್ಳಿಯಲ್ಲೂ ಜಾಗ ಸಿಗದ ಕಾರಣ ಅದು ಕಾರ್ಯಗತವಾಗಿಲ್ಲ. ಎಲ್ಲರಿಗೂ ಮಂಕಿ ಪಾರ್ಕ್ ಬೇಕು, ಆದರೆ ನಮ್ಮೂರಿಗೆ ಬೇಡ ಎಂಬ ಮನೋಭಾವವಿದೆ. ವೈಜ್ಞಾನಿಕವಾಗಿ ಮಂಕಿ ಪಾರ್ಕ್ ನಿರ್ಮಿಸುವುದಾಗಿ ಹೇಳಿದರೂ ಸಾರ್ವಜನಿಕರು ಒಪ್ಪುತ್ತಿಲ್ಲ. ಮಲೆನಾಡಿನ ಈ ಗಂಭೀರ ಸಮಸ್ಯೆಗೆ ಸರ್ಕಾರ ವಿಶೇಷ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಚಿಕ್ಕಮಗಳೂರಿನ ಹೊನ್ನಾಳ ಗ್ರಾಮದಲ್ಲಿ ರಸ್ತೆ ತಡೆದು ಪ್ರತಿಭಟನೆ

ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಸ್ಥಳಾಂತರಿಸುವುದನ್ನು ವಿರೋಧಿಸಿ ಚಿಕ್ಕಮಗಳೂರು ಜಿಲ್ಲೆಯ ಮುತ್ತೋಡಿ ಸಮೀಪದ ಹೊನ್ನಾಳ ಗ್ರಾಮದಲ್ಲಿ ನಾಗರಿಕ ಮತ್ತು ರೈತ ಹೋರಾಟ ಸಮಿತಿ, ಕನ್ನಡಪರ ಸಂಘಟನೆಗಳು, ದಲಿತ, ರೈತ ಮತ್ತು ಕೃಷಿ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ರಸ್ತೆ ಬಂದ್ ಮಾಡಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ ಎಸ್. ವಿಜಯ್ ಕುಮಾರ್, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರು ಬೇಲೂರು ಭಾಗದ ಕಾಡಾನೆಗಳನ್ನು ಮೂಡಿಗೆರೆ ವ್ಯಾಪ್ತಿಯ ಭದ್ರಾ ಅಭಯಾರಣ್ಯಕ್ಕೆ ಕಳುಹಿಸಲು ಯತ್ನಿಸುತ್ತಿರುವುದು ಖಂಡನೀಯ. ಅರಣ್ಯ ಇಲಾಖೆ ಸ್ಥಳೀಯ ಆನೆಗಳಿಗೇ ಸಮರ್ಪಕ ಆಹಾರ ಒದಗಿಸುತ್ತಿಲ್ಲ. ಮಲೆನಾಡಿನ ನೆಲ, ಜಲ, ಕಾಡನ್ನು ರಕ್ಷಿಸಿರುವ ರೈತರು ಮತ್ತು ಬೆಳೆಗಾರರು ಎಲ್ಲಿಗೆ ಹೋಗಬೇಕು? ನೆರೆ ತಾಲೂಕಿನಿಂದ ಮತ್ತಷ್ಟು ಆನೆಗಳನ್ನು ಅಭಯಾರಣ್ಯಕ್ಕೆ ತಂದು ಬಿಡುವುದು ಸರಿಯಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇತ್ತೀಚೆಗೆ ಬೇರೆಡೆಯಿಂದ ಹುಲಿಯೊಂದಕ್ಕೆ ಕಾಲರ್ ಐಡಿ ಅಳವಡಿಸಿ ಅಭಯಾರಣ್ಯಕ್ಕೆ ಬಿಡಲಾಗಿದೆ. ಆದರೆ ಆ ಹುಲಿ ಎಲ್ಲಿದೆ ಎಂಬ ಮಾಹಿತಿಯೇ ಇಂದಿಗೂ ಅರಣ್ಯ ಇಲಾಖೆಯ ಬಳಿ ಇಲ್ಲ. ಬೇಲೂರು ಭಾಗದಲ್ಲಿ 50ಕ್ಕೂ ಹೆಚ್ಚು ಆನೆಗಳಿದ್ದು, ಅವುಗಳಲ್ಲಿ ಗಂಡು, ಹೆಣ್ಣು, ಮರಿ ಹಾಗೂ ಗರ್ಭಿಣಿ ಆನೆಗಳೂ ಇವೆ. ಅವೈಜ್ಞಾನಿಕವಾಗಿ ಅವುಗಳನ್ನು ಓಡಿಸಿದರೆ ರೈತರು ಮತ್ತು ಬೆಳೆಗಾರರ ತೋಟಗಳು ಸರ್ವನಾಶವಾಗುತ್ತವೆ; ಜನಜೀವನವೂ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಎಚ್ಚರಿಸಿದರು. ಸೆಟಲೈಟ್ ಮಾಹಿತಿ ಮತ್ತು ಆವಾಸ ಸ್ಥಾನ ಗುರುತಿಸಿ ಆನೆಗಳನ್ನು ಅವುಗಳ ಮೂಲ ನೆಲೆಗೆ ಕಳುಹಿಸಬೇಕೇ ಹೊರತು, ಇಲ್ಲಿಗೆ ತರಬಾರದು. ಜೊತೆಗೆ ಸಮರ್ಪಕ ಆನೆ ಬ್ಯಾರಿಕೇಡ್, ಟ್ರಂಚ್ ನಿರ್ಮಿಸಬೇಕು ಹಾಗೂ ಕಾಡುಕೋಣ ಹಾವಳಿಯನ್ನೂ ತಡೆಯಬೇಕು ಎಂದು ಒತ್ತಾಯಿಸಿದರು.

ರಾಜೀನಾಮೆ ನಾಟಕ ಬೇಡ, ಪಾದಯಾತ್ರೆ ಮೂಲಕ ಹೋರಾಟ – ಸ್ಥಳೀಯರ ಎಚ್ಚರಿಕೆ

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ಗ್ರಾಮಸ್ಥ ಜಾನಕಿರಾಮ್ ಮಾತನಾಡಿ, ಆನೆ ಹಾವಳಿ ತಪ್ಪಿಸುವ ವಿಚಾರದಲ್ಲಿ ಜಿಲ್ಲೆಯ ಶಾಸಕರು ರಾಜೀನಾಮೆ ನೆಪವೊಡ್ಡಿ ಜನರ ಕಣ್ಣಿಗೆ ಮಣ್ಣೆರಚಬಾರದು. ನಿಜವಾಗಿಯೂ ರಾಜೀನಾಮೆ ನೀಡುವ ಇಚ್ಛಾಶಕ್ತಿ ಇದ್ದರೆ ನೇರವಾಗಿ ರಾಜ್ಯಪಾಲರಿಗೆ ಸಲ್ಲಿಸಬೇಕೇ ಹೊರತು, ಮಾಧ್ಯಮಗೋಷ್ಠಿಗಳ ಮೂಲಕ ನಾಟಕ ಆಡಬಾರದು ಎಂದು ಕಿಡಿಕಾರಿದರು.

ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ದೊರೆಯಬೇಕು. ರೈತರು, ಕೂಲಿಕಾರ್ಮಿಕರು ಮತ್ತು ಬೆಳೆಗಾರರ ಬದುಕಿಗೆ ಕುತ್ತಾಗುವ ಯಾವುದೇ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬಾರದು. ಸ್ಥಳೀಯರ ವಿರೋಧದ ನಡುವೆಯೂ ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಬಿಡಲು ಮುಂದಾದರೆ ಪಾದಯಾತ್ರೆ ಮೂಲಕ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಕಳವಾಸೆ ರವಿಕುಮಾರ್, ಮನ್ಸೂರ್, ರಮೇಶ್, ವೆಂಕಟೇಶ್, ಧರ್ಮೇಶ್, ವಿನಯ್‌ರಾಜ್, ರಾಜ್, ಪೀಟರ್, ಚಂದ್ರು, ವಾಸು ಪೂಜಾರಿ ಸೇರಿದಂತೆ ಹಲವು ಮುಖಂಡರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
#BhadraWildlifeSanctuary #AragaJnanendra #WildElephants #ChikkamagaluruNews #ShivamoggaNews #HassanElephants #HumanWildlifeConflict #KarnatakaFarmers #Thirthahalli #Hosanagar #UdayakalaNews #KannadaNews

Related Posts

Leave a Reply

Your email address will not be published. Required fields are marked *