ಉದಯಕಾಲ ನ್ಯೂಸ್, ಬೆಂಗಳೂರು / ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರು ಭಾಗದಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗಕ್ಕೆ ಅಟ್ಟಿದ್ದಾರೆ ಎಂದು ಆರೋಪಿಸಿ, ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರು ತಮ್ಮದೇ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವ ಅವರು, ಇಂದು ರಾಜೀನಾಮೆ ಪತ್ರದೊಂದಿಗೆ ನೇರವಾಗಿ ವಿಧಾನಸೌಧದಲ್ಲಿರುವ ವಿಧಾನಸಭಾ ಸ್ಪೀಕರ್ ಕಚೇರಿಗೆ ಆಗಮಿಸಿದ್ದು, ರಾಜಕೀಯ ವಲಯದಲ್ಲಿ ಇದೊಂದು ಡ್ರಾಮಾ ಕಂಪನಿಯ ನಟನೆ ಎಂದೇ ಬಿಂಬಿತವಾಗುತ್ತಿದೆ.
ಸ್ಪೀಕರ್ ಕಚೇರಿಯಲ್ಲಿ ಹೈಡ್ರಾಮಾ: ಪೊನ್ನಣ್ಣ ಮನವೊಲಿಕೆಗೂ ಜಗ್ಗದ ಶಾಸಕಿ!
ಮಧ್ಯಾಹ್ನದ ವೇಳೆಗೆ ರಾಜೀನಾಮೆ ಪತ್ರವನ್ನು ಹಿಡಿದು ವಿಧಾನಸೌಧದ ಸ್ಪೀಕರ್ ಕಚೇರಿಗೆ ಆಗಮಿಸಿದ ಶಾಸಕಿ ನಯನಾ ಮೋಟಮ್ಮ ಅವರು, ನಾನು ಈಗಾಗಲೇ ಸ್ಪೀಕರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ ಎಂದು ಹೇಳಿ, ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಅವರ ಆಪ್ತ ಕಾರ್ಯದರ್ಶಿ ಅಶೋಕ್ ಮಿರ್ಜಿ ಅವರಿಗೆ ನೀಡಿ ತೆರಳಲು ಮುಂದಾದರು.
ಆದರೆ, ನಿಯಮಾವಳಿಗಳ ಪ್ರಕಾರ ಪತ್ರ ಸ್ವೀಕರಿಸಲು ನಿರಾಕರಿಸಿದ ಆಪ್ತ ಕಾರ್ಯದರ್ಶಿ ಅಶೋಕ್ ಮಿರ್ಜಿ ಅವರು, ರಾಜೀನಾಮೆ ಪತ್ರವನ್ನು ನನ್ನ ಬಳಿ ಕೊಟ್ಟರೆ ಆಗುವುದಿಲ್ಲ. ಶಾಸಕರು ಖುದ್ದಾಗಿ ಸ್ಪೀಕರ್ ಅವರ ಕೈಗೇ ಪತ್ರವನ್ನು ನೀಡಬೇಕು. ಸ್ಪೀಕರ್ ಅವರ ನಿರ್ದೇಶನದಂತೆ ನಾನು ನಡೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ಈ ವಿಷಯ ತಿಳಿಯುತ್ತಿದ್ದಂತೆಯೇ ತಕ್ಷಣ ಸ್ಪೀಕರ್ ಆಪ್ತ ಕಾರ್ಯದರ್ಶಿಯವರ ಕಚೇರಿಗೆ ದೌಡಾಯಿಸಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು, ನಯನಾ ಮೋಟಮ್ಮ ಅವರೊಂದಿಗೆ ಮಾತುಕತೆ ನಡೆಸಿ ರಾಜೀನಾಮೆ ನೀಡದಂತೆ ಮನವೊಲಿಸಲು ತೀವ್ರ ಪ್ರಯತ್ನ ನಡೆಸಿದರು. ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರೂ ಸಹ, ಪೊನ್ನಣ್ಣ ಅವರ ಮನವೊಲಿಕೆಗೆ ಶಾಸಕಿ ನಯನಾ ಮೋಟಮ್ಮ ಅವರು ಮಣಿಯಲಿಲ್ಲ. ಸ್ಪೀಕರ್ ಅವರು ಕಚೇರಿಗೆ ಬಂದ ನಂತರ ಅವರ ಕೈಗೇ ನೇರವಾಗಿ ರಾಜೀನಾಮೆ ಪತ್ರವನ್ನು ಕೊಟ್ಟು ಹೋಗುತ್ತೇನೆ ಎಂದು ಪಟ್ಟು ಹಿಡಿದು ಸ್ಪೀಕರ್ ಕಚೇರಿಯಲ್ಲೇ ಕಾದು ಕುಳಿತಿದ್ದಾರೆ.
ಕಾಡಾನೆ ವಿವಾದ-ಶಾಸಕಿ ಆಕ್ರೋಶ
ಹಾಸನ ಜಿಲ್ಲೆಯ ಬೇಲೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿತ್ತು. ಈ ಆನೆಗಳನ್ನು ನಿಯಂತ್ರಿಸುವ ಅಥವಾ ಸ್ಥಳಾಂತರಿಸುವ ನೆಪದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಅವುಗಳನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹಾಗೂ ಸುತ್ತಮುತ್ತಲಿನ ಭಾಗಗಳಿಗೆ ಅಟ್ಟಿದ್ದಾರೆ ಎಂಬುದು ಸ್ಥಳೀಯ ಜನಪ್ರತಿನಿಧಿಗಳು ಮತ್ತು ರೈತರ ಗಂಭೀರ ಆರೋಪವಾಗಿದೆ.
ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶೃಂಗೇರಿ ಮತ್ತು ಚಿಕ್ಕಮಗಳೂರು ತಾಲ್ಲೂಕುಗಳಲ್ಲಿ ಕಾಡಾನೆಗಳ ದಾಳಿಯಿಂದ ಬೆಳೆಹಾನಿ ಮತ್ತು ಪ್ರಾಣಹಾನಿಗಳು ಸಂಭವಿಸುತ್ತಿದ್ದು, ಜನರು ಭಯಭೀತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಸನದ ಆನೆಗಳನ್ನೂ ಸಹ ಚಿಕ್ಕಮಗಳೂರಿನತ್ತ ಓಡಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮೂವರು ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಎಚ್ಚರಿಕೆ!
ಈ ಘಟನೆಗೆ ಸಂಬಂಧಿಸಿದಂತೆ ನಿನ್ನೆ ಚಿಕ್ಕಮಗಳೂರು ಜಿಲ್ಲೆಯ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮೂವರು ಶಾಸಕರು ತಮ್ಮದೇ ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ, ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಹಾಗೂ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರು ಜಂಟಿಯಾಗಿ ಆಕ್ರೋಶ ಹೊರಹಾಕಿ, ನಮ್ಮ ಜಿಲ್ಲೆಯ ಜನರ ಪ್ರಾಣ ಮತ್ತು ಬೆಳೆಗಳನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ನಾವು ಶಾಸಕರಾಗಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ ಎಂದು ರಾಜೀನಾಮೆ ನೀಡುವ ಎಚ್ಚರಿಕೆಯನ್ನು ನೀಡಿದ್ದರು.
ಆ ಎಚ್ಚರಿಕೆಯ ಬೆನ್ನಲ್ಲೇ ಇಂದು ಶಾಸಕಿ ನಯನಾ ಮೋಟಮ್ಮ ಅವರು ರಾಜೀನಾಮೆ ಪತ್ರ ಹಿಡಿದು ವಿಧಾನಸೌಧಕ್ಕೆ ಬಂದಿರುವುದು ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರ ತಂದೊಡ್ಡಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ, ಮಲೆನಾಡು ಭಾಗದ ಶಾಸಕರನ್ನು ಹೇಗೆ ಸಮಾಧಾನಪಡಿಸುತ್ತಾರೆ ಹಾಗೂ ಕಾಡಾನೆ ಸಮಸ್ಯೆಗೆ ಯಾವ ರೀತಿಯ ಶಾಶ್ವತ ಪರಿಹಾರ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
#NayanaMotamma #Chikkamagaluru #ElephantMenace #KarnatakaPolitics #CongressMLA #ResignationDrama #VidhanaSoudha #Mudigere #HassanElephants #KarnatakaNews #UdayakalaNews #KannadaNews


