Saturday, November 21, 2026
Menu

ಇಡಿ ಎಡವಟ್ಟು, ಹವಾಲಾ ಕೇಸ್ ಆರೋಪಿ ಮನೆ ಎಂದು ತಪ್ಪಾಗಿ ಬೇರೊಂದು ಮನೆಗೆ ನುಗ್ಗಿ 4 ಗಂಟೆ ಶೋಧ!

ಉದಯಕಾಲ ನ್ಯೂಸ್, ತಿರುವನಂತಪುರಂ: ದೇಶಾದ್ಯಂತ ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ ಹಾಗೂ ಹವಾಲಾ ದಂಧೆಕೋರರ ವಿರುದ್ಧ ನಿರಂತರ ದಾಳಿ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕೇರಳಂನ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಭಾರಿ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. 100 ಕೋಟಿ ರೂಪಾಯಿಗಳ ಶಂಕಿತ ಹವಾಲಾ ವಹಿವಾಟು ಪ್ರಕರಣದ ಆರೋಪಿಯ ಮನೆ ಎಂದು ತಪ್ಪಾಗಿ ಭಾವಿಸಿದ ಇಡಿ ಅಧಿಕಾರಿಗಳ ತಂಡವು, ಬೇರೊಬ್ಬ ಅಮಾಯಕ ವ್ಯಕ್ತಿಯ ಮನೆಗೆ ನುಗ್ಗಿ ಬರೋಬ್ಬರಿ 4 ಗಂಟೆಗಳ ಕಾಲ ತೀವ್ರ ಶೋಧ ಕಾರ್ಯ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಹೆಸರು ಒಂದೇ ಆದ ಕಾರಣ ದೊಡ್ಡ ಗೊಂದಲ

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಹಾಗೂ 100 ಕೋಟಿ ರೂಪಾಯಿಗಳ ಬೃಹತ್ ಹವಾಲಾ ವಹಿವಾಟಿಗೆ ಸಂಬಂಧಿಸಿದಂತೆ ಶುಕ್ರವಾರ ಕೇರಳಂ ರಾಜ್ಯಾದ್ಯಂತ ಸುಮಾರು 12 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು. ಈ ಕಾರ್ಯಾಚರಣೆಯ ಭಾಗವಾಗಿ ಕೋಝಿಕ್ಕೋಡ್ ಜಿಲ್ಲೆಯಲ್ಲಿ ನೌಶಾದ್ ಎಂಬ ಹೆಸರಿನ ಶಂಕಿತ ಆರೋಪಿಯ ಮನೆಯನ್ನು ಅಧಿಕಾರಿಗಳು ಹುಡುಕುತ್ತಿದ್ದರು.

ಆದರೆ, ವಿಳಾಸ ಮತ್ತು ವ್ಯಕ್ತಿಯ ಗುರುತು ಪತ್ತೆ ಹಚ್ಚುವಲ್ಲಿ ಎಡವಿದ ಅಧಿಕಾರಿಗಳು, ಅದೇ ಪ್ರದೇಶದಲ್ಲಿ ವಾಸವಿದ್ದ ಮತ್ತೊಬ್ಬ ನೌಶಾದ್ ಎಂಬವರ ಮನೆಯನ್ನು ಆರೋಪಿಯ ಮನೆ ಎಂದು ತಪ್ಪಾಗಿ ತಿಳಿದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಮನೆಯ ಮೂಲೆ ಮೂಲೆಯನ್ನು ಜಾಲಾಡಿದ ಅಧಿಕಾರಿಗಳು ಸುಮಾರು 4 ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿ, ಕೊನೆಗೆ ಏನೂ ಸಿಗದೆ ಬರಿಗೈಲಿ ವಾಪಸಾಗಿದ್ದಾರೆ.

ನೌಶಾದ್ ಕುಟುಂಬಸ್ಥರು ಹೇಳಿದ್ದೇನು? ತಂದೆಯ ಹೆಸರು ಬೇರೆ ಎಂದರೂ ಕೇಳದ ಅಧಿಕಾರಿಗಳು

ಈ ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ನೌಶಾದ್ ಕುಟುಂಬದ ಸದಸ್ಯರು, ಶುಕ್ರವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಇಡಿ ಅಧಿಕಾರಿಗಳ ತಂಡ ನಮ್ಮ ಮನೆಗೆ ಆಗಮಿಸಿತು. 100 ಕೋಟಿ ರೂಪಾಯಿ ಹವಾಲಾ ವ್ಯವಹಾರಕ್ಕೆ ಸಂಬಂಧಿಸಿದಂತೆ ನೌಶಾದ್ ಎಂಬ ವ್ಯಕ್ತಿಯನ್ನು ಹುಡುಕುತ್ತಿರುವುದಾಗಿ ನಮಗೆ ತಿಳಿಸಿದರು. ಈ ವೇಳೆ ಅಧಿಕಾರಿಗಳು ನೌಶಾದ್ ಅವರ ತಂದೆಯ ಹೆಸರು ಉಸ್ಮಾನ್‌ ಎಂದು ಹೇಳಿದರು. ಆದರೆ ನಮ್ಮ ಮನೆಯ ನೌಶಾದ್ ಅವರ ತಂದೆಯ ಹೆಸರು ಉಸ್ಮಾನ್ ಅಲ್ಲ, ಮೊಹಮ್ಮದ್ ಎಂದು ನಾವು ಸ್ಪಷ್ಟಪಡಿಸಿದೆವು. ನೀವು ತಪ್ಪಾದ ವಿಳಾಸಕ್ಕೆ ಬಂದಿದ್ದೀರಿ ಎಂದು ತಿಳಿಸಿದರೂ ಅಧಿಕಾರಿಗಳು ವಾಪಸ್ ಹೋಗಲು ನಿರಾಕರಿಸಿದರು ಎಂದು ವಿವರಿಸಿದ್ದಾರೆ.

ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಬಾರದು ಎಂಬ ಕಾರಣಕ್ಕೆ ಮನೆಯನ್ನು ಶೋಧಿಸಲು ನಾವು ಅವರಿಗೆ ಸಂಪೂರ್ಣ ಅವಕಾಶ ನೀಡಿದೆವು. ಸುಮಾರು ನಾಲ್ಕು ಗಂಟೆಗಳ ಕಾಲ ಅವರು ಇಡೀ ಮನೆಯನ್ನು ಹುಡುಕಾಡಿದರು, ಆದರೆ ಅವರಿಗೆ ಅಲ್ಲಿ ಏನೂ ಸಿಗಲಿಲ್ಲ. ಕಾರ್ಯಾಚರಣೆಯ ಕೊನೆಯಲ್ಲಿ ಅಧಿಕಾರಿಗಳು ತಾವು ಹುಡುಕುತ್ತಿದ್ದ ನಿಜವಾದ ಶಂಕಿತ ವ್ಯಕ್ತಿಯ ಫೋಟೋವನ್ನು ನಮಗೆ ತೋರಿಸಿದರು. ಆ ಫೋಟೋದಲ್ಲಿದ್ದ ವ್ಯಕ್ತಿ ನಮ್ಮ ಮನೆಯಲ್ಲಿ ವಾಸಿಸುತ್ತಿರುವ ನೌಶಾದ್ ಆಗಿರಲಿಲ್ಲ, ಬೇರೆಯೇ ವ್ಯಕ್ತಿಯಾಗಿದ್ದನು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸಾಮಾನ್ಯ ಮೀನುಗಾರನ ಮನೆ ಮೇಲೆ ಇಡಿ ದಾಳಿ

ಇಡಿ ದಾಳಿಗೊಳಗಾದ ನೌಶಾದ್ ಅವರು ಈ ಹಿಂದೆ ಶಾರ್ಜಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅಲ್ಲಿನ ಕೆಲಸ ತೊರೆದು ಕಳೆದ 9 ತಿಂಗಳ ಹಿಂದಷ್ಟೇ ತಾಯ್ನಾಡು ಕೇರಳಕ್ಕೆ ಮರಳಿದ್ದರು. ಪ್ರಸ್ತುತ ಅವರು ಊರಿನಲ್ಲಿ ಸಣ್ಣ ಮಟ್ಟದಲ್ಲಿ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂತಹ ಸಾಮಾನ್ಯ ಕುಟುಂಬದ ಮನೆಗೆ ಏಕಾಏಕಿ ಇಡಿ ಅಧಿಕಾರಿಗಳು ನುಗ್ಗಿ ಗಂಟೆಗಟ್ಟಲೆ ಶೋಧ ನಡೆಸಿರುವುದು ಸ್ಥಳೀಯರಲ್ಲಿ ತೀವ್ರ ಅಚ್ಚರಿ ಹಾಗೂ ಆತಂಕಕ್ಕೆ ಕಾರಣವಾಗಿತ್ತು.

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರ ಆಗ್ರಹ

ತಪ್ಪಾದ ವಿಳಾಸಕ್ಕೆ ದಾಳಿ ನಡೆಸಿ ತಮ್ಮ ಕುಟುಂಬಕ್ಕೆ ಮಾನಸಿಕ ಕಿರುಕುಳ ಮತ್ತು ಮುಜುಗರ ಉಂಟುಮಾಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೌಶಾದ್ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಯಾವುದೇ ಮನೆಯ ಮೇಲೆ ದಾಳಿ ಮತ್ತು ಶೋಧ ನಡೆಸುವ ಮುನ್ನ ಅಧಿಕಾರಿಗಳು ಸರಿಯಾದ ವಿಳಾಸ, ತಂದೆಯ ಹೆಸರು ಹಾಗೂ ಇತರ ಗುರುತಿನ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕಾಗಿತ್ತು. ಕನಿಷ್ಠ ಪರಿಶೀಲನೆಯನ್ನೂ ನಡೆಸದೆ ಮನೆಗೆ ನುಗ್ಗಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಕುಟುಂಬಸ್ಥರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸದ್ಯ ಈ ಗಂಭೀರ ಆರೋಪದ ಕುರಿತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ.
#EDRaids #EnforcementDirectorate #Keralam #Kozhikode #HawalaCase #FEMA #WrongAddressRaid #KeralaNews #BreakingNews #UdayakalaNews

Related Posts

Leave a Reply

Your email address will not be published. Required fields are marked *