Thursday, November 19, 2026
Menu

ಮುಂದಿನ ಚುನಾವಣೆಗೆ ಸ್ಪರ್ಧೆ ಇಲ್ಲ: ಯತೀಂದ್ರಗೆ ಬೆಂಬಲಿಸುವಂತೆ ಸಿದ್ದರಾಮಯ್ಯ ಮನವಿ

ಉದಯಕಾಲ ನ್ಯೂಸ್, ಮೈಸೂರು: ನನಗೆ ಈಗ 80 ವರ್ಷ ವಯಸ್ಸಾಗಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಜತೆಗೆ, ಮುಂದಿನ ಚುನಾವಣೆಯಲ್ಲಿ ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ನನ್ನ ರೀತಿಯಲ್ಲಿಯೇ ಸಹಕಾರ ಮತ್ತು ಬೆಂಬಲ ನೀಡುವಂತೆ ಅವರು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನವೆಂಬರ್ 26ರಂದು ನಡೆಯಲಿರುವ ಸಂವಿಧಾನ ದಿನಾಚರಣೆಯ ಸಂಬಂಧ ನಡೆದ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಸಿದ್ದರಾಮಯ್ಯ, ಅಭಿಮಾನಿಗಳು ಮತ್ತು ಕಾರ್ಯಕರ್ತರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ಹೇಳುತ್ತಾರೆ. ಆದರೆ ನನಗೆ ವಯಸ್ಸಾಗಿದೆ, ಹಾಗಾಗಿ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಖಚಿತವಾಗಿ ಹೇಳಿದರು. ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ತಮ್ಮ ನಿರ್ಧಾರವನ್ನು ಅವರು ಈ ಮೂಲಕ ಪುನರುಚ್ಚರಿಸಿದ್ದಾರೆ.

ಹಿಂದಿನ ಸಾಲಿನಲ್ಲಿ ಕುಳಿತ ಚರ್ಚೆಗೆ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟನೆ

ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ತಾವು ಐದನೇ ಅಥವಾ ಆರನೇ ಸಾಲಿನಲ್ಲಿ ಕುಳಿತಿದ್ದ ವಿಚಾರವಾಗಿ ರಾಜಕೀಯ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿರುವ ಬಗ್ಗೆಯೂ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಪ್ರತಿಪಕ್ಷಗಳು ಈ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಟೀಕಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ನಾನು ಕಾರ್ಯಕ್ರಮಕ್ಕೆ ತಡವಾಗಿ ಹೋಗಿದ್ದೆ. ನಾನೇ ತಡವಾಗಿ ತಲುಪಿದ್ದರಿಂದ ಮುಂದಿನ ಸಾಲುಗಳು ಭರ್ತಿಯಾಗಿದ್ದವು; ಹಾಗಾಗಿ ಹಿಂದಿನ ಸಾಲಿನಲ್ಲಿ ಕುಳಿತುಕೊಂಡೆ ಎಂದು ಸಿದ್ದರಾಮಯ್ಯ ನೇರವಾಗಿ ಉತ್ತರಿಸಿದರು. ಈ ಕುರಿತು ಈಗಾಗಲೇ ತಾವು ಸ್ಪಷ್ಟನೆ ನೀಡಿರುವುದಾಗಿಯೂ ತಿಳಿಸಿದ ಅವರು, ಆಸನದ ವಿಚಾರಕ್ಕೆ ಅನಗತ್ಯ ರಾಜಕೀಯ ಬಣ್ಣ ಬಳಿಯುತ್ತಿರುವುದನ್ನು ತಳ್ಳಿಹಾಕಿದರು.

ನ. 26ಕ್ಕೆ ಬೃಹತ್ ಸಂವಿಧಾನ ದಿನಾಚರಣೆ; ಸುನೀಲ್ ಬೋಸ್ ಗೈರು

ಮೈಸೂರಿನಲ್ಲಿ ನವೆಂಬರ್ 26ರಂದು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಬೃಹತ್ ಸಂವಿಧಾನ ದಿನಾಚರಣೆ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಬೃಹತ್ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಅದರ ಸಿದ್ಧತೆಗಳ ಕುರಿತು ಸಿದ್ದರಾಮಯ್ಯ ನೇತೃತ್ವದಲ್ಲಿ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಕಾರ್ಯಕ್ರಮದ ಸ್ವರೂಪ, ಉದ್ದೇಶ, ಜನರ ಸಂಘಟನೆ ಹಾಗೂ ಇತರ ವ್ಯವಸ್ಥೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು.

ಈ ಸಭೆಯಲ್ಲಿ ಸಚಿವರಾದ ನರೇಂದ್ರಸ್ವಾಮಿ, ಯತೀಂದ್ರ ಸಿದ್ದರಾಮಯ್ಯ, ಎನ್. ಚೆಲುವರಾಯಸ್ವಾಮಿ, ಕೆ.ಎಂ. ಶಿವಲಿಂಗೇಗೌಡ ಸೇರಿದಂತೆ ಹಳೇ ಮೈಸೂರು ಭಾಗದ ಹಲವು ಕಾಂಗ್ರೆಸ್ ಶಾಸಕರು ಹಾಗೂ ವಿವಿಧ ಪ್ರಾಧಿಕಾರಗಳ ಅಧ್ಯಕ್ಷರು ಪಾಲ್ಗೊಂಡಿದ್ದರು. ಆದರೆ, ಮಾಜಿ ಸಚಿವ ಹಾಗೂ ಶಾಸಕ ಡಾ. ಹೆಚ್.ಸಿ. ಮಹದೇವಪ್ಪ ಅವರ ಪುತ್ರ, ಸಂಸದ ಸುನೀಲ್ ಬೋಸ್ ಅವರು ಸಭೆಗೆ ಗೈರಾಗಿದ್ದು ಗಮನ ಸೆಳೆಯಿತು.

ಇದಕ್ಕೂ ಮುನ್ನ ಬುಧವಾರ ವರುಣ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, 2028ರ ವಿಧಾನಸಭಾ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಮಗ ಯತೀಂದ್ರ ಅವರಿಗೆ ನನ್ನ ರೀತಿಯಲ್ಲಿಯೇ ಸಹಕಾರ ಮತ್ತು ಬೆಂಬಲವನ್ನು ನೀಡಬೇಕು ಎಂದು ಮನವಿ ಮಾಡಿದ್ದರು. ತಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗದಿದ್ದರೆ ಮಗನಿಗೆ ಆಶೀರ್ವಾದ ಮಾಡಿ ಬೆಂಬಲಿಸುವಂತೆ ಅವರು ಕ್ಷೇತ್ರದ ಜನರಲ್ಲಿ ಕೋರಿದ್ದು, ಮುಂದಿನ ಚುನಾವಣೆಯ ರಾಜಕೀಯ ಚಿತ್ರಣದ ಕುರಿತು ಮೈಸೂರು ಹಾಗೂ ಹಳೇ ಮೈಸೂರು ಭಾಗದಲ್ಲಿ ಹೊಸ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.

#Siddaramaiah #YathindraSiddaramaiah #Mysuru #Varuna #2028Elections #ConstitutionDay #Congress #KarnatakaPolitics #Udayakala #KannadaNews

Related Posts

Leave a Reply

Your email address will not be published. Required fields are marked *