ಉದಯಕಾಲ ನ್ಯೂಸ್, ಮಂಗಳೂರು: ಮುಂಬರುವ ಹಿರಿಯೂರು ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಗೆ ಟಿಕೆಟ್ ನೀಡುವಂತೆ ನಾವು ಕೇಳುತ್ತೇವೆ. ಆದರೆ, ಟಿಕೆಟ್ ವಿಚಾರವಾಗಿ ಮಿತ್ರಪಕ್ಷ ಜೆಡಿಎಸ್ ಜೊತೆ ಯಾವುದೇ ಜಗಳ ಅಥವಾ ಪೈಪೋಟಿ ಮಾಡುವುದಿಲ್ಲ. ಅಂತಿಮವಾಗಿ ಎನ್ಡಿಎ (NDA) ಅಭ್ಯರ್ಥಿ ಗೆಲ್ಲುವುದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದರೆ ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿ ಒಮ್ಮೆ ಗೆದ್ದಿದ್ದು, ಮತ್ತೊಮ್ಮೆ ಎರಡನೇ ಸ್ಥಾನ ಪಡೆದಿದೆ. ಮೊನ್ನೆ ನಡೆದ ನಮ್ಮ ಪಕ್ಷದ ವಿಸ್ತೃತ ಕೋರ್ ಕಮಿಟಿ ಸಭೆಯಲ್ಲೂ ಹಿರಿಯೂರಿನಲ್ಲಿ ಬಿಜೆಪಿ ಸ್ಪರ್ಧಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ನಾವು ಟಿಕೆಟ್ ಕೇಳುತ್ತೇವೆ. ಆದರೆ, ಜೆಡಿಎಸ್ ನಮ್ಮ ಮಿತ್ರಪಕ್ಷವಾಗಿದ್ದು, ಈ ವಿಚಾರದಲ್ಲಿ ಯಾವುದೇ ಪೈಪೋಟಿ ಅಥವಾ ಜಗಳವಿಲ್ಲ ಎಂದು ಹೇಳಿದರು.
ಹಿರಿಯೂರು ಟಿಕೆಟ್ಗೆ ಒಗ್ಗಟ್ಟಿನ ಮಂತ್ರ, ಪುತ್ತೂರಿನಲ್ಲಿ ಶತಪ್ರತಿಶತ ಗೆಲುವಿನ ವಿಶ್ವಾಸ
ಮುಂದುವರಿದು ಮಾತನಾಡಿದ ಆರ್. ಅಶೋಕ್, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ನನಗೆ ಆತ್ಮೀಯ ಸ್ನೇಹಿತರು. ಡಿಸೆಂಬರ್ 2ರ ವಿಧಾನಸಭಾ ಅಧಿವೇಶನ, ಹಿರಿಯೂರು ಉಪಚುನಾವಣೆ ಹಾಗೂ ಬಾಕಿ ಇರುವ ಬಿಜೆಪಿ – ಜೆಡಿಎಸ್ ಸಮನ್ವಯ ಸಮಿತಿ ರಚನೆ ಕುರಿತು ಅವರೊಂದಿಗೆ ಚರ್ಚಿಸುತ್ತೇನೆ. ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಜೆಡಿಎಸ್ಗೆ ಕ್ಷೇತ್ರ ಬಿಟ್ಟುಕೊಡಿ ಎಂದರೂ ಬಿಟ್ಟುಕೊಡಲು ಸಿದ್ಧರಿದ್ದೇವೆ. ಬಿಜೆಪಿಯೇ ಸ್ಪರ್ಧಿಸಲಿ ಎಂದರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಒಟ್ಟಿನಲ್ಲಿ ಹಿರಿಯೂರಿನಲ್ಲಿ ಎನ್ಡಿಎ ಗೆಲ್ಲಬೇಕು ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಕುರಿತು ಪ್ರತಿಕ್ರಿಯಿಸಿದ ಅವರು, ಕಳೆದ ಚುನಾವಣೆಯಲ್ಲಿ ಸ್ಥಳೀಯವಾಗಿ ಸಮನ್ವಯದ ಕೊರತೆಯಿಂದಾಗಿ ಪುತ್ತೂರು ಕ್ಷೇತ್ರದಲ್ಲಿ ನಮಗೆ ಹಿನ್ನಡೆಯಾಗಿತ್ತು. ಆಗ ನಾನು ಪಕ್ಕಾ ಹಿಂದೂವಾದಿ ಎಂದು ಜನ ನಂಬಿದ್ದರಿಂದ ಆ ರೀತಿಯ ಫಲಿತಾಂಶ ಬಂತು. ಆದರೆ, ಈ ಬಾರಿ ಜನರು ಮರಳಾಗುವುದಿಲ್ಲ. ಈಗಾಗಲೇ ನಮ್ಮ ಜಿಲ್ಲಾ ಅಧ್ಯಕ್ಷರು, ಸಂಸದರು, ಶಾಸಕರು ಹಾಗೂ ಎಲ್ಲಾ ಸ್ಥಳೀಯ ನಾಯಕರು ಒಟ್ಟಾಗಿ ಕುಳಿತು ಚರ್ಚಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರವನ್ನು ನೂರಕ್ಕೆ ನೂರರಷ್ಟು ಯಾವುದೇ ಅನುಮಾನವಿಲ್ಲದೆ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಒಡೆದ ಮನೆ, ಗ್ಯಾರಂಟಿ ಹೆಸರಲ್ಲಿ ಲೂಟಿ
ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಆರ್. ಅಶೋಕ್, ದೆಹಲಿಯಲ್ಲಿ ಸಿದ್ದರಾಮಯ್ಯ ಅವರನ್ನು ಐದು ಅಥವಾ ಆರನೇ ಸಾಲಿನಲ್ಲಿ ಕೂರಿಸುವ ಮೂಲಕ ಅವಮಾನಿಸಲಾಗಿದೆ. ಮುಂದೆ ದೆಹಲಿಗೆ ಕರೆದರೆ ಹತ್ತನೇ ಸಾಲಿನಲ್ಲಿ ಕೂರಿಸಬಹುದು. ಚುನಾವಣೆ ಗೆಲ್ಲಲು ಅವರನ್ನು ಬಳಸಿಕೊಂಡು, ಈಗ ಊಟದ ಬಳಿಕ ಕರಿಬೇವಿನ ಸೊಪ್ಪನ್ನು ಎತ್ತಿ ಹಾಕುವಂತೆ ಬಿಸಾಡಿದ್ದಾರೆ. ಸಿದ್ದರಾಮಯ್ಯ ಇಲ್ಲದೆ ಕಾಂಗ್ರೆಸ್ ಇಲ್ಲ ಎಂದು ಅವರ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಈಗ ಕಾಂಗ್ರೆಸ್ ಒಡೆದ ಮನೆಯಂತಾಗಿದ್ದು, ಡಿ.ಕೆ. ಶಿವಕುಮಾರ್ ಅವರನ್ನು ಕೆಳಗಿಳಿಸುವ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ಕರ್ನಾಟಕಕ್ಕೆ ಆದಷ್ಟು ಶೀಘ್ರ ಮೂರನೇ ಮುಖ್ಯಮಂತ್ರಿ ಬರಬಹುದು ಎಂದು ಹೇಳಿದರು.
ಸಿ.ಡಿ. ಪ್ರಕರಣ ಮತ್ತು ಎಸ್ಐಟಿ ತನಿಖೆಯ ಕುರಿತು ಮಾತನಾಡಿದ ಅವರು, ಸಿ.ಡಿ. ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಸಿಲುಕಿಸಿದ್ದೇ ಕಾಂಗ್ರೆಸ್ನವರು ಎಂದು ಸ್ವತಃ ಅವರ ಪುತ್ರನೇ ಹತ್ತಾರು ಬಾರಿ ಬಹಿರಂಗವಾಗಿ ಹೇಳಿದ್ದಾರೆ. ನಡೆಯುತ್ತಿರುವ ತನಿಖೆಯಲ್ಲಿ ನಿಜವಾದ ಅಪರಾಧಿಗಳನ್ನು ಬಿಟ್ಟು, ನೋಡಿದವರನ್ನು ಮತ್ತು ಮಾತನಾಡಿದವರನ್ನು ಹಿಡಿಯಲಾಗುತ್ತಿದೆ. ಎಸ್ಐಟಿ ರಚಿಸಿರುವುದೇ ಎಲ್ಲದಕ್ಕೂ ಎಸ್ ಎಂದು ಹೇಳಿ, ಪ್ರಕರಣದಲ್ಲಿ ಭಾಗಿಯಾದವರಿಗೆ ಕ್ಲೀನ್ ಚಿಟ್ ನೀಡಲು ಎಂದು ಗಂಭೀರ ಆರೋಪ ಮಾಡಿದರು.
ಗ್ಯಾರಂಟಿ ಯೋಜನೆಗಳ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಗ್ಯಾರಂಟಿ ಯೋಜನೆಗಳಿಗೆ ಬೊಕ್ಕಸದಿಂದ ಹಣ ನೀಡುವ ಬದಲು, ಸರ್ಕಾರವು ಬಸ್ ಪ್ರಯಾಣ ದರ, ಹಾಲಿನ ದರ ಹಾಗೂ ತೆರಿಗೆಗಳನ್ನು ಹೆಚ್ಚಿಸಿ ಜನರಿಂದಲೇ ಹಣ ವಸೂಲಿ ಮಾಡುತ್ತಿದೆ. ಮನೆಯಲ್ಲಿ ಮಹಿಳೆಗೆ ರೂ.2,000 ಕೊಟ್ಟು, ಬೆಲೆ ಏರಿಕೆ ಮೂಲಕ ಅದೇ ಮನೆಯಿಂದ ರೂ.10,000 ಕಿತ್ತುಕೊಳ್ಳಲಾಗುತ್ತಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ತಕ್ಷಣವೇ ಬಸ್ ದರ ಮತ್ತು ಹಾಲಿನ ದರ ಏರಿಕೆಯನ್ನು ಹಿಂಪಡೆಯಬೇಕು. ಇದನ್ನು ಆಗ್ರಹಿಸಿ ಇಂದು ಸಂಜೆ 4 ಗಂಟೆಗೆ ಶಾಸಕ ಡಾ. ಭರತ್ ಶೆಟ್ಟಿ ಅವರ ಮಂಗಳೂರು ಉತ್ತರ ಕ್ಷೇತ್ರದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
ಇದರ ಜತೆಗೆ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಕುರಿತು ಮಾತನಾಡಿದ ಅವರು, ಚುನಾವಣೆಗೂ ಮುನ್ನ ಪ್ರಿಯಾಂಕಾ ಗಾಂಧಿ ಮತ್ತು ಡಿ.ಕೆ. ಶಿವಕುಮಾರ್ ಅವರು ಆಶಾ ಕಾರ್ಯಕರ್ತೆಯರಿಗೆ ರೂ.15,000 ಗೌರವಧನ ನೀಡುವುದಾಗಿ ವೇದಿಕೆ ಮೇಲೆ ಭರವಸೆ ನೀಡಿದ್ದರು. ಆದರೆ ಮೂರುವರೆ ವರ್ಷ ಕಳೆದರೂ ಆ ಭರವಸೆ ಈಡೇರಿಲ್ಲ. ಬೆಂಗಳೂರಿನ ಚಳಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ 10-12 ಆಶಾ ಕಾರ್ಯಕರ್ತೆಯರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೂ ಸರ್ಕಾರ ಕಣ್ಣೆತ್ತಿ ನೋಡಿಲ್ಲ ಎಂದು ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
#RAshoka #HiriyurBypoll #BJPJDSAlliance #NDA #Puttur #Siddaramaiah #CMDKShivakumar #GuaranteeSchemes #ASHACampaign #Udayakala #KarnatakaPolitics

