ಉದಯಕಾಲ ನ್ಯೂಸ್, ನವದೆಹಲಿ: ಕೇಂದ್ರ ಸರ್ಕಾರದ ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿ (MVAG) 2025 ಅಡಿಯಲ್ಲಿ, ಎಲ್ಲಾ ಸಾರಿಗೆಯೇತರ ದ್ವಿಚಕ್ರ ವಾಹನಗಳಿಗೆ ಅಗ್ರಿಗೇಟರ್ ವೇದಿಕೆಗಳ ಮೂಲಕ ಪ್ರಯಾಣಿಕರ ಸೇವೆ ಒದಗಿಸಲು ಅವಕಾಶ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಎಲ್ಲಾ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಆಯೋಜಿಸಲಾಗಿದ್ದ ‘ರೈಡ್: ಅಗ್ರಿಗೇಟರ್ ಮತ್ತು ಡೆಲಿವರಿ ಸೇವೆಗಳ ಪ್ರದರ್ಶನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕ್ರಮದಿಂದ ದೇಶದಲ್ಲಿ 15 ರಿಂದ 20 ಕೋಟಿ ಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಇದು ಬೃಹತ್ ಆರ್ಥಿಕ ಬೆಳವಣಿಗೆಗೆ ನಾಂದಿ ಹಾಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿತಿನ್ ಗಡ್ಕರಿ, ತಾವು ಎಲ್ಲಾ ರಾಜ್ಯಗಳ ಸಾರಿಗೆ ಆಯುಕ್ತರ ಸಭೆ ಕರೆದು, ತಮ್ಮ ತಮ್ಮ ರಾಜ್ಯಗಳಲ್ಲಿ ಅಗ್ರಿಗೇಟರ್ ಆ್ಯಪ್ಗಳ ಮೂಲಕ ಪ್ರಯಾಣಿಕರನ್ನು ಕರೆದೊಯ್ಯಲು ಎಲ್ಲಾ ಖಾಸಗಿ ಬೈಕ್ಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾಗಿ ತಿಳಿಸಿದ್ದಾರೆ. ಜತೆಗೆ, ಈ ಸಂಬಂಧ ಎಲ್ಲಾ ರಾಜ್ಯ ಸರ್ಕಾರಗಳಿಗೂ ಅಧಿಕೃತವಾಗಿ ಪತ್ರ ಬರೆದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
15–20 ಕೋಟಿ ಉದ್ಯೋಗ ಸಾಧ್ಯತೆ, ರಾಜ್ಯಗಳ ಅನುಮತಿ ಅಗತ್ಯ
ಭಾರತದ ಹಂಚಿಕೆಯ ಸಂಚಾರ ಕ್ಷೇತ್ರಕ್ಕೆ ಕಾನೂನು ಸ್ಪಷ್ಟತೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿ 2025’, ವೈಟ್-ಬೋರ್ಡ್ (ಖಾಸಗಿ) ಬೈಕ್ಗಳನ್ನು ಬೈಕ್ ಟ್ಯಾಕ್ಸಿಗಳಾಗಿ ಬಳಸಲು ರಾಜ್ಯ ಸರ್ಕಾರಗಳಿಗೆ ಅಧಿಕೃತವಾಗಿ ಅನುಮತಿ ನೀಡುವ ಅವಕಾಶ ಕಲ್ಪಿಸಿದೆ. ಆದರೆ, ಕೇಂದ್ರದ ಮಾರ್ಗಸೂಚಿಗಳು ತಂತಾನೇ ದೇಶಾದ್ಯಂತ ಖಾಸಗಿ ಬೈಕ್ ಟ್ಯಾಕ್ಸಿಗಳನ್ನು ಕಾನೂನುಬದ್ಧಗೊಳಿಸುವುದಿಲ್ಲ; ಪ್ರತಿಯೊಂದು ರಾಜ್ಯ ಸರ್ಕಾರವೂ ತನ್ನ ಅಧಿಕಾರ ಬಳಸಿ ಪ್ರತ್ಯೇಕವಾಗಿ ಅನುಮತಿ ನೀಡುವುದು ಅತ್ಯಗತ್ಯವಾಗಿದೆ.
ಕಳೆದ ಜುಲೈನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಮಾರ್ಗಸೂಚಿಗಳನ್ನು ಹೊರಡಿಸಿದ್ದರೂ, ಹಲವು ರಾಜ್ಯಗಳಲ್ಲಿ ಇವುಗಳ ಅನುಷ್ಠಾನ ಇನ್ನೂ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ ಎಂದು ಗಡ್ಕರಿ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ರಾಜಸ್ಥಾನ ಮಾತ್ರ ಈ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಜಾರಿಗೆ ತಂದಿದ್ದು, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳು ಭಾಗಶಃ ಅನುಷ್ಠಾನಗೊಳಿಸಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬೈಕ್ ಹಾಗೂ ಸ್ಕೂಟರ್ ಮಾಲೀಕರಿಗೆ ಅಗ್ರಿಗೇಟರ್ ವೇದಿಕೆಗಳ ಮೂಲಕ ಪ್ರಯಾಣಿಕರ ಸೇವೆ ಒದಗಿಸಲು ಅವಕಾಶ ನೀಡುವುದರಿಂದ ಬಡತನ ನಿವಾರಣೆ, ಘನತೆಯ ಬದುಕು ಹಾಗೂ ಸ್ವಯಂ ಉದ್ಯೋಗಕ್ಕೆ ದೊಡ್ಡ ಬಲ ಸಿಗುತ್ತದೆ ಎಂದು ಗಡ್ಕರಿ ಹೇಳಿದ್ದಾರೆ. 15 ರಿಂದ 20 ಕೋಟಿ ಜನರಿಗೆ ಉದ್ಯೋಗ ದೊರೆತರೆ ಎಷ್ಟು ಕುಟುಂಬಗಳು ಆರ್ಥಿಕವಾಗಿ ಸಬಲವಾಗುತ್ತವೆ, ಎಷ್ಟು ಮಕ್ಕಳಿಗೆ ಶಾಲೆಗೆ ಹೋಗುವ ಅವಕಾಶ ಸಿಗುತ್ತದೆ ಮತ್ತು ಎಷ್ಟು ಜನರಿಗೆ ಸ್ವಂತ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದೇ ನಿಜವಾದ ಮಹತ್ವದ ವಿಚಾರ ಎಂದು ಅವರು ಪ್ರತಿಪಾದಿಸಿದ್ದಾರೆ.
ಬೈಕ್ ಟ್ಯಾಕ್ಸಿ ಕಂಪನಿಗಳಿಗೆ ನಿರಾಳತೆ!
ಇಷ್ಟು ದಿನ ಹಲವು ರಾಜ್ಯಗಳಲ್ಲಿ ಕಾನೂನು ಹಾಗೂ ನಿಯಂತ್ರಣಾತ್ಮಕ ಅಸ್ಪಷ್ಟತೆಯ ನಡುವೆ ಕಾರ್ಯಾಚರಿಸುತ್ತಿದ್ದ ರ್ಯಾಪಿಡೋ ಉಬರ್ ಮತ್ತು ಓಲಾ ನಂತಹ ಬೈಕ್ ಟ್ಯಾಕ್ಸಿ ಸಂಸ್ಥೆಗಳಿಗೆ ಕೇಂದ್ರದ ಈ ಸ್ಪಷ್ಟ ನಿಲುವು ದೊಡ್ಡ ನಿರಾಳತೆ ತಂದಿದೆ. ವಿಶೇಷವಾಗಿ ಖಾಸಗಿ ಬೈಕ್ ಟ್ಯಾಕ್ಸಿಗಳ ಮೇಲಿನ ನಿರ್ಬಂಧಗಳಿಂದಾಗಿ ವಿವಾದ ಹಾಗೂ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದ ಕರ್ನಾಟಕದಂತಹ ರಾಜ್ಯಗಳಲ್ಲೂ ಈ ಮಾರ್ಗಸೂಚಿ ಮಹತ್ವದ ಬದಲಾವಣೆಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.
ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 67ರ ಉಪ-ವಿಭಾಗ (3) ರ ಅಡಿಯಲ್ಲಿ ತಮಗಿರುವ ಅಧಿಕಾರವನ್ನು ಬಳಸಿಕೊಂಡು, ಸಾರಿಗೆಯೇತರ ದ್ವಿಚಕ್ರ ವಾಹನಗಳನ್ನು ಪ್ರಯಾಣಿಕರ ಸಂಚಾರಕ್ಕೆ ಬಳಸಲು ರಾಜ್ಯ ಸರ್ಕಾರಗಳು ಅನುಮತಿ ನೀಡಬಹುದಾಗಿದೆ. ಇದರಿಂದ ಸಂಚಾರ ದಟ್ಟಣೆ ಮತ್ತು ವಾಹನ ಮಾಲಿನ್ಯವನ್ನು ಕಡಿಮೆ ಮಾಡುವ ಜತೆಗೆ, ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಸುಲಭ ಸಂಚಾರ ಸೌಲಭ್ಯ ದೊರೆಯುತ್ತದೆ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
2020ರ ಹಳೆಯ ಮಾರ್ಗಸೂಚಿಗಳನ್ನು ಪರಿಷ್ಕರಿಸಿ, ಬೈಕ್-ಶೇರಿಂಗ್, ಎಲೆಕ್ಟ್ರಿಕ್ ವಾಹನಗಳು (EV) ಹಾಗೂ ಆ್ಯಪ್ ಆಧಾರಿತ ಆಟೋ ಸೇವೆಗಳ ಬೆಳವಣಿಗೆಗೆ ತಕ್ಕಂತೆ 2025ರ ಹೊಸ ಮಾರ್ಗಸೂಚಿ ರೂಪಿಸಲಾಗಿದೆ. ಇದರಲ್ಲಿ ಚಾಲಕರ ಕಲ್ಯಾಣ ಮತ್ತು ಪ್ರಯಾಣಿಕರ ಸುರಕ್ಷತೆಗೂ ಒತ್ತು ನೀಡಲಾಗಿದ್ದು, ಸ್ವಂತ ವಾಹನ ಬಳಸುವ ಚಾಲಕರಿಗೆ ನಿಗದಿತ ದರದಲ್ಲಿ ಕನಿಷ್ಠ ಶೇ. 80ರಷ್ಟು ಪಾಲು, 5 ಲಕ್ಷ ರೂ. ಆರೋಗ್ಯ ವಿಮೆ, ಕನಿಷ್ಠ 10 ಲಕ್ಷ ರೂ. ಟರ್ಮ್ ವಿಮೆ, ಬಹು ವೇದಿಕೆಗಳಲ್ಲಿ ಕಾರ್ಯನಿರ್ವಹಿಸುವ ಸ್ವಾತಂತ್ರ್ಯ, 40 ಗಂಟೆಗಳ ತರಬೇತಿ ಹಾಗೂ 24 ಗಂಟೆಗಳ ಕುಂದುಕೊರತೆ ನಿವಾರಣಾ ವ್ಯವಸ್ಥೆಯಂತಹ ಅಂಶಗಳನ್ನು ಸೇರಿಸಲಾಗಿದೆ.
#NitinGadkari #BikeTaxi #MVAG2025 #PrivateBikes #Rapido #Uber #TransportMinistry #Employment #Udayakala #IndiaNews


