ಚಿಕಾಗೋ/ವಾಷಿಂಗ್ಟನ್: ಭಾರತೀಯ ಪ್ರಜಾಪ್ರಭುತ್ವವು ಅತ್ಯಂತ ಪವಿತ್ರವಾದುದು. ಆದರೆ, ಈ ವ್ಯವಸ್ಥೆಯು ಸಂಪೂರ್ಣವಾಗಿ ನಾಶವಾಗಿದೆ ಎಂದು ದೇಶದ ಜನರಿಗೆ ಅರಿವಾಗುವವರೆಗೂ ಚುನಾವಣಾ ಸೋಲುಗಳನ್ನು ಎದುರಿಸಲು ಮತ್ತು ಸಹಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಸಿದ್ಧವಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಅವರು, ಚುನಾವಣಾ ವ್ಯವಸ್ಥೆಯಲ್ಲಿನ ಲೋಪಗಳ ಆರೋಪದ ಹಿನ್ನೆಲೆಯಲ್ಲಿ ಚುನಾವಣೆಗಳನ್ನು ಬಹಿಷ್ಕರಿಸುವ ನಿರ್ಧಾರವು ಭಾರತೀಯ ಪ್ರಜಾಪ್ರಭುತ್ವದ ಅಂತ್ಯಕ್ಕೆ ಕಾರಣವಾಗುತ್ತದೆ ಮತ್ತು ಅಂತಹ ತಪ್ಪನ್ನು ಕಾಂಗ್ರೆಸ್ ಎಂದಿಗೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎರಡು ದಿನಗಳ ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ,ನೆನ್ನೆ ಇಲ್ಲಿನ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರೊಂದಿಗೆ ಸಂವಾದ ನಡೆಸಿದರು. ರಾಜಕೀಯ ವಿಜ್ಞಾನ ಪ್ರಾಧ್ಯಾಪಕ ರಾಬರ್ಟ್ ಪೇಪ್ ಅವರು ನಡೆಸಿಕೊಟ್ಟ ಈ ಸಂವಾದದಲ್ಲಿ, ಭಾರತದಲ್ಲಿ ಚುನಾವಣೆಗಳು ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂಬ ಆರೋಪವಿರುವಾಗ ವಿರೋಧ ಪಕ್ಷಗಳು ಚುನಾವಣೆಗಳನ್ನು ಬಹಿಷ್ಕರಿಸಬಹುದಲ್ಲವೇ ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ಸುದೀರ್ಘವಾಗಿ ಉತ್ತರಿಸಿದರು.
ಚುನಾವಣೆ ಬಹಿಷ್ಕಾರ- ಪ್ರಜಾಪ್ರಭುತ್ವದ ಅಂತ್ಯ
ಚಿಕಾಗೋ ವಿಶ್ವವಿದ್ಯಾಲಯದ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತೀಯ ಪ್ರಜಾಪ್ರಭುತ್ವವು ಅತ್ಯಂತ ಪವಿತ್ರವಾದುದು. ಅದರಲ್ಲಿರುವ ಸಮಸ್ಯೆಗಳ ಬಗ್ಗೆ ಮಾತನಾಡುವಾಗ ನೂರಕ್ಕೆ ನೂರು, ಇನ್ನೂರು ಅಥವಾ ಮುನ್ನೂರು ಪ್ರತಿಶತದಷ್ಟು ಖಚಿತ ಸಾಕ್ಷ್ಯಾಧಾರಗಳು ಇರಬೇಕು. ಅಂತಹ ಬಲವಾದ ಸಾಕ್ಷ್ಯಗಳಿಲ್ಲದೆ ಆರೋಪ ಮಾಡುವುದು ಕಷ್ಟ ಎಂದು ಹೇಳಿದರು.
ಚುನಾವಣೆ ಬಹಿಷ್ಕರಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷಗಳು ಚುನಾವಣೆಗಳನ್ನು ಬಹಿಷ್ಕರಿಸಿದರೆ ಆ ಕ್ಷಣವೇ ದೇಶದಲ್ಲಿ ಪ್ರಜಾಪ್ರಭುತ್ವ ಕೊನೆಯಾದಂತೆ. ಒಂದು ವೇಳೆ ನಮ್ಮ ಪಕ್ಷದ ಕಾರ್ಯಕರ್ತರಿಗೆ ‘ನೀವು ಇನ್ನು ಮುಂದೆ ಚುನಾವಣೆಯಲ್ಲಿ ಭಾಗವಹಿಸಬೇಡಿ ಎಂದು ಹೇಳುತ್ತೇನೆ ಎಂದುಕೊಳ್ಳಿ. ನಾವು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಲ್ಲಿಸಿದರೆ, ಆಗಿನಿಂದಲೇ ದೇಶದಲ್ಲಿನ ಪವಿತ್ರ ಪ್ರಜಾಪ್ರಭುತ್ವದ ರಚನೆಯನ್ನು ಕೊನೆಗೊಳಿಸಿದಂತಾಗುತ್ತದೆ. ಅಂತಹ ತಪ್ಪನ್ನು ಕಾಂಗ್ರೆಸ್ ಮಾಡುವುದಿಲ್ಲ ಮತ್ತು ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಮುರಿಯಲು ನಾವು ಬಯಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.
ವಿರೋಧ ಪಕ್ಷವು ಚುನಾವಣೆಯಿಂದ ಹಿಂದೆ ಸರಿದರೆ, ಜನರ ದೃಷ್ಟಿಯಲ್ಲಿ ಸಂಪೂರ್ಣ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಕುಸಿಯುತ್ತದೆ. ನಮಗೆ ಅದು ಬೇಕಾಗಿಲ್ಲ. ಆದ್ದರಿಂದ ಜವಾಬ್ದಾರಿಯುತ ವಿಪಕ್ಷವಾಗಿ ಕಾಂಗ್ರೆಸ್ ಚುನಾವಣೆಗಳನ್ನು ಬಹಿಷ್ಕರಿಸುವುದಿಲ್ಲ; ಬದಲಿಗೆ ದೇಶದಲ್ಲಿ ಏನು ನಡೆಯುತ್ತಿದೆ ಮತ್ತು ವ್ಯವಸ್ಥೆ ಹೇಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತದೆ. ದೇಶದ ನಾಗರಿಕರಿಗೆ ವ್ಯವಸ್ಥೆಯು ಹಾಳಾಗಿದೆ ಎಂದು ಅರಿವಾಗುವವರೆಗೂ ನಾವು ಸೋಲುಗಳನ್ನು ಸಹಿಸಿಕೊಳ್ಳುತ್ತೇವೆ ಮತ್ತು ಸತ್ಯವನ್ನು ಜನರ ಮುಂದಿಡುವ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ” ಎಂದು ರಾಹುಲ್ ಗಾಂಧಿ ತಮ್ಮ ಕಾರ್ಯತಂತ್ರವನ್ನು ವಿವರಿಸಿದರು. ಜತೆಗೆ ಚುನಾವಣಾ ಆಯೋಗದೊಳಗಿನ ಕೆಲವು ಹಿರಿಯ ಅಧಿಕಾರಿಗಳಿಂದಲೂ ಒಳಗಿನ ಮಾಹಿತಿಗಳು ಬರುತ್ತಿವೆ ಎಂದು ಅವರು ಇದೇ ವೇಳೆ ಹೇಳಿಕೊಂಡರು.
ಕೊಲಂಬಿಯಾ ವಿವಿಯಲ್ಲಿ ಆರ್ಥಿಕತೆ, ನಿರುದ್ಯೋಗದ ಕುರಿತು ಟೀಕೆ
ಇದಕ್ಕೂ ಮುನ್ನ, ಮಂಗಳವಾರ (ನವೆಂಬರ್ 17) ನ್ಯೂಯಾರ್ಕ್ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ರಾಹುಲ್ ಗಾಂಧಿ ಭಾರತದ ಆರ್ಥಿಕ ಪರಿಸ್ಥಿತಿ, ನಿರುದ್ಯೋಗ, ಉತ್ಪಾದನಾ ವಲಯದ ಸ್ಥಿತಿ ಹಾಗೂ ಶಿಕ್ಷಣ ವ್ಯವಸ್ಥೆಯ ಕುರಿತು ತೀವ್ರ ಟೀಕೆಗಳನ್ನು ವ್ಯಕ್ತಪಡಿಸಿದ್ದರು.
ಸ್ಪಷ್ಟವಾಗಿ ಹೇಳಬೇಕೆಂದರೆ, ಭಾರತ ಆರ್ಥಿಕ ದುರಂತದ ಅಂಚಿನಲ್ಲಿದೆ. ಇದೇ ವಾಸ್ತವ. ಕೆಲವರು ಇದನ್ನು ಕಡೆಗಣಿಸಬಹುದು, ಮಾಧ್ಯಮಗಳೂ ನಿರ್ಲಕ್ಷಿಸಬಹುದು. ಆದರೆ, ದೇಶ ತೀವ್ರ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದೆ. ಹಾಗೆಯೇ, ಶಿಕ್ಷಣ ವ್ಯವಸ್ಥೆಯಲ್ಲೂ ಗಂಭೀರ ಸಮಸ್ಯೆಗಳಿವೆ ಎಂದು ಅವರು ಎಚ್ಚರಿಸಿದ್ದರು. ದೇಶ ಇದೇ ಹಾದಿಯಲ್ಲಿ ಮುಂದುವರಿದರೆ ಭವಿಷ್ಯದಲ್ಲಿ ದೊಡ್ಡ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ ಎಂದೂ ಆತಂಕ ವ್ಯಕ್ತಪಡಿಸಿದ್ದರು.
ಭಾರತದ ಆರ್ಥಿಕ ಮಾದರಿಯು ದಶಕದ ಹಿಂದೆಯೇ ನಿರೀಕ್ಷಿತ ಫಲಿತಾಂಶ ನೀಡುವುದನ್ನು ನಿಲ್ಲಿಸಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ಕೃಷಿ ಕ್ಷೇತ್ರವು ಆರ್ಥಿಕತೆಯ ಬೆನ್ನೆಲುಬಾಗಿದ್ದು, ಆ ಬೆನ್ನೆಲುಬೇ ಮುರಿದುಬಿದ್ದಿದೆ. ಕೇವಲ ಸೇವಾ ವಲಯದ ಮೂಲಕ ದೇಶದ ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲ; ಉತ್ಪಾದನಾ ವಲಯವನ್ನು ಬಲಪಡಿಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದ್ದರು. ಮೇಕ್ ಇನ್ ಇಂಡಿಯಾ ಮತ್ತು ಸ್ಟಾರ್ಟ್ ಅಪ್ ಇಂಡಿಯಾದಂತಹ ಯೋಜನೆಗಳು ಉದ್ಯೋಗ ಸೃಷ್ಟಿಯಲ್ಲಿ ನಿರೀಕ್ಷಿತ ಯಶಸ್ಸು ಕಂಡಿಲ್ಲ ಎಂದೂ ಟೀಕಿಸಿದ್ದರು.
ಮತ್ತೊಂದೆಡೆ, ವಿದೇಶದಲ್ಲಿ ನಿಂತು ಭಾರತದ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವದ ವಿರುದ್ಧ ರಾಹುಲ್ ಗಾಂಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆಡಳಿತಾರೂಢ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಹೇಳಿಕೆಗಳನ್ನು ಖಂಡಿಸಿದೆ. ಒಟ್ಟಾರೆ, ಅಮೆರಿಕ ಪ್ರವಾಸದಲ್ಲಿ ರಾಹುಲ್ ಗಾಂಧಿ ಆಡಿರುವ ಮಾತುಗಳು ದೇಶೀಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಹಾಗೂ ವಾಕ್ಸಮರಕ್ಕೆ ನಾಂದಿ ಹಾಡಿವೆ.
#RahulGandhi #IndianDemocracy #UniversityOfChicago #ColumbiaUniversity #ElectionBoycott #Opposition #USVisit #IndianEconomy #Udayakala #PoliticsNews

