Menu

ಗ್ಯಾನೇಂದ್ರನಿಂದ ಗೆಳತಿಗೆ 52.30 ಲಕ್ಷ ಚಿನ್ನ ಗಿಫ್ಟ್, ರಿಯಲ್‌ ಎಸ್ಟೇಟಿನಲ್ಲಿ ಸಾಹುಕಾರ್ ಕೋಟಿಗಟ್ಟಲೆ ಹೂಡಿಕೆ

ಉದಯಕಾಲ ನ್ಯೂಸ್‌, ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅತ್ಯಂತ ವಿವಾದಾತ್ಮಕ ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಬೆಂಗಳೂರಿನ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ಬೃಹತ್ ದೋಷಾರೋಪಣ ಪಟ್ಟಿ (ಚಾರ್ಜ್‌ ಶೀಟ್‌) ಸಲ್ಲಿಸಿದೆ. ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಬಿ.ವಿ. ಗೀತಾ ಶಿವಮೂರ್ತಿ, ಅಂದಿನ ಪರೀಕ್ಷಾ ನಿಯಂತ್ರಕ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ಸೇರಿದಂತೆ ಪ್ರಮುಖರ ವಿರುದ್ಧ ಕೋಟ್ಯಂತರ ರೂ. ಅಕ್ರಮ ಹಣ ವರ್ಗಾವಣೆ ಹಾಗೂ ಲಂಚದ ವ್ಯವಹಾರದ ಸ್ಫೋಟಕ ಸತ್ಯಗಳು ಹೊರಬಂದಿವೆ.

ಪೆನ್‌ಡ್ರೈವ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ: 10 ಅಭ್ಯರ್ಥಿಗಳಿಂದ 3.20 ಕೋಟಿಗೆ ಬೃಹತ್ ಡೀಲ್

ಕಳೆದ ಜನವರಿಯಲ್ಲಿ ನಡೆದ 400 ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆದಿರುವುದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ತನಿಖೆಯಿಂದ ಬಯಲಾಗಿದೆ. ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರು ಪ್ರಶ್ನೆ ಪತ್ರಿಕೆಯನ್ನು ಪೆನ್‌ಡ್ರೈವ್‌ನಲ್ಲಿ ನಕಲು ಮಾಡಿಕೊಂಡು ಮಧ್ಯವರ್ತಿ ಬಸವರಾಜ್ ಕನ್ನಾಲೆಗೆ ನೀಡಿದ್ದರು. ಪರೀಕ್ಷೆಯ ಹಿಂದಿನ ದಿನ ಬೆಂಗಳೂರು ಹೊರವಲಯದ ವಿಲ್ಲಾವೊಂದರಲ್ಲಿ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಯ ಪ್ರಿಂಟ್‌ಔಟ್ ತೋರಿಸಿ, ಬಳಿಕ ಸಾಕ್ಷ್ಯ ನಾಶಪಡಿಸಲು ಪೆನ್‌ಡ್ರೈವ್ ಅನ್ನು ಸುಟ್ಟು ಹಾಕಲಾಗಿತ್ತು.

ಈ ಅಕ್ರಮ ಡೀಲ್‌ಗಾಗಿ ಒಟ್ಟು 10 ಅಭ್ಯರ್ಥಿಗಳಿಂದ ಬರೋಬ್ಬರಿ 3.20 ಕೋಟಿ ರೂಪಾಯಿಗಳಿಗೆ ಬೇಡಿಕೆ ಇಡಲಾಗಿತ್ತು. ಈ ಪೈಕಿ 1.52 ಕೋಟಿ ರೂ. (92 ಲಕ್ಷ ಬ್ಯಾಂಕ್ ಖಾತೆಗೆ ಹಾಗೂ 60 ಲಕ್ಷ ನಗದು ರೂಪದಲ್ಲಿ) ವಸೂಲಿ ಮಾಡಿರುವ ದಾಖಲೆಗಳು ಸಿಕ್ಕಿವೆ. ಬಾಕಿ ಹಣಕ್ಕಾಗಿ ಅಭ್ಯರ್ಥಿಗಳಿಂದ ಖಾಲಿ ಚೆಕ್‌ಗಳು ಹಾಗೂ ಪ್ರಾಮಿಸರಿ ನೋಟ್‌ಗಳನ್ನು ಭದ್ರತೆಯಾಗಿ ಪಡೆಯಲಾಗಿತ್ತು. ಮಾಜಿ ಅಧ್ಯಕ್ಷ ಸಾಹುಕಾರ್ ಸೂಚನೆಯಂತೆ ಗ್ಯಾನೇಂದ್ರ ಅವರು 6 ಅಭ್ಯರ್ಥಿಗಳ ಕೀ ಉತ್ತರಗಳನ್ನು ಸದಸ್ಯೆ ಗೀತಾಗೆ ನೀಡಿದ್ದರು. ಸ್ವತಃ ಗೀತಾ ತಮ್ಮ ಕಾರಿನಲ್ಲೇ ಅಭ್ಯರ್ಥಿಯಿಂದ 20 ಲಕ್ಷ ರೂ. ನಗದು ಪಡೆದರೆ, ಸಾಹುಕಾರ್ ಮತ್ತೊಬ್ಬ ಅಭ್ಯರ್ಥಿಯಿಂದ 10 ಲಕ್ಷ ರೂ. ಪಡೆದಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

ರಿಯಲ್ ಎಸ್ಟೇಟ್ ಹಾಗೂ ಜಮೀನಿನಲ್ಲಿ ಕೋಟ್ಯಂತರ ರೂ. ಹೂಡಿಕೆ

ಅಕ್ರಮ ಹಣದಿಂದ ಹಿರಿಯ ಅಧಿಕಾರಿಗಳು ಮತ್ತು ರಾಜಕೀಯ ಪ್ರಭಾವಿಗಳು ನಡೆಸಿದ ಅಬಕಾರಿ ಹೂಡಿಕೆಗಳ ವಿವರಗಳು ಇ.ಡಿ ತನಿಖೆಯಲ್ಲಿ ಬೆಚ್ಚಿಬೀಳಿಸುವಂತಿವೆ. ಮಧ್ಯವರ್ತಿಯಿಂದ ಪಡೆದ ಲಂಚದ ಹಣದಲ್ಲಿ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಮದುವೆಯಾಗಲಿರುವ ಯುವತಿಯ ಹೆಸರಿನಲ್ಲಿ ಬರೋಬ್ಬರಿ 52.30 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಖರೀದಿಸಿದ್ದಾರೆ. ಜತೆಗೆ 13.31 ಲಕ್ಷ ರೂ. ಹಣವನ್ನು ಐಷಾರಾಮಿ ವಿಮಾನ ಪ್ರಯಾಣಕ್ಕಾಗಿ ಖರ್ಚು ಮಾಡಿದ್ದಾರೆ.

ಇನ್ನು ಹಗರಣದ ಮೂಲಕ ಒಟ್ಟು 4.17 ಕೋಟಿ ರೂ. ಸಂಪಾದಿಸಿರುವ ಶಿವಶಂಕರಪ್ಪ ಸಾಹುಕಾರ್, ರಿಯಲ್ ಎಸ್ಟೇಟ್ ಡೆವಲಪರ್ ಒಬ್ಬರ ಬಳಿ 3.99 ಕೋಟಿ ರೂ. ಹೂಡಿಕೆ ಮಾಡಿದ್ದರು. ಇದಕ್ಕೂ ಮುನ್ನ ಬರೋಬ್ಬರಿ 8 ರಿಂದ 10 ಕೋಟಿ ರೂ.ವರೆಗೂ ವ್ಯವಹಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ, 1.48 ಕೋಟಿ ರೂ. ಗಳಿಸಿರುವ ಸದಸ್ಯೆ ಗೀತಾ ಅವರು ಸಾಹುಕಾರ್ ಅವರಿಂದ ಸಾಲದ ಹೆಸರಿನಲ್ಲಿ 1 ಕೋಟಿ ರೂ. ಪಡೆದು, ಶಾಲೆ, ಕನ್ವೆನ್ಷನ್ ಹಾಲ್ ಹಾಗೂ ಹೋಟೆಲ್ ನಿರ್ಮಾಣಕ್ಕೆ ಭೂಮಿ ಖರೀದಿಸಲು ಯೋಜನೆ ರೂಪಿಸಿದ್ದರು. ಮಧ್ಯವರ್ತಿ ಬಸವರಾಜ್ ಕೂಡ ವಿವಿಧ ಸಹಕಾರಿ ಸಂಘಗಳು ಹಾಗೂ ಸಂಬಂಧಿಕರ ಖಾತೆಗಳ ಮೂಲಕ ಕೋಟ್ಯಂತರ ರೂ. ಅಕ್ರಮ ಹಣವನ್ನು ಜಮೀನು ಖರೀದಿಗೆ ಬಳಸಿದ್ದಾರೆ. ಒಟ್ಟಾರೆ ಹಗರಣದಲ್ಲಿ ಭಾಗಿಯಾದವರ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಇ.ಡಿ ಈಗಾಗಲೇ ಜಪ್ತಿ ಮಾಡಿದ್ದು, ತನಿಖೆ ಮುಂದುವರಿದಿದೆ.
#KPSCScam #EnforcementDirectorate #IASGyanendraKumar #ShivashankarappaSahukar #BangaloreNews #PMLACase #Udayakala #KarnatakaNews #CorruptionScandal

Related Posts

Leave a Reply

Your email address will not be published. Required fields are marked *