Saturday, November 14, 2026
Menu

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಭಾರತೀಯ ವಿದ್ಯಾರ್ಥಿಗೆ 30 ವರ್ಷ ಜೈಲು!

ಲಂಡನ್‌: ಸೋಷಿಯಲ್ ಮೀಡಿಯಾ ಮತ್ತು ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿ ಹದಿಹರೆಯದ ಹುಡುಗನಂತೆ ನಟಿಸಿ, ಅಪ್ರಾಪ್ತ ಬಾಲಕಿಯರನ್ನು ಬ್ಲ್ಯಾಕ್‌ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದ ಭಾರತೀಯ ಮೂಲದ 27 ವರ್ಷದ ವಿದ್ಯಾರ್ಥಿ ಬಿಲಾಲ್ ಖಾಜಿಗೆ ಯುಕೆಯ ಚೆಸ್ಟರ್ ಕ್ರೌನ್ ನ್ಯಾಯಾಲಯವು 30 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಈ ಪ್ರಕರಣವು ಆನ್‌ಲೈನ್ ಜಗತ್ತಿನಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಕಳಳವಳವನ್ನು ಹುಟ್ಟುಹಾಕಿದೆ.

ಆನ್‌ಲೈನ್‌ನಲ್ಲಿ ವಂಚನೆಯ ಜಾಲ ಮತ್ತು ನಕಲಿ ವ್ಯಕ್ತಿತ್ವ

ಲಂಡನ್‌ನಲ್ಲಿ ನೆಲೆಸಿರುವ ಬಿಲಾಲ್ ಖಾಜಿ, 10 ರಿಂದ 15 ವರ್ಷದೊಳಗಿನ ದುರ್ಬಲ ಯುವತಿಯರನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸೆಗಿದ್ದಾನೆ. ಸಾಮಾಜಿಕ ಜಾಲತಾಣಗಳು ಹಾಗೂ ಆನ್‌ಲೈನ್ ಗೇಮಿಂಗ್ ವೇದಿಕೆಗಳಲ್ಲಿ ತಾನೂ ಒಬ್ಬ ಹದಿಹರೆಯದ ಹುಡುಗನೆಂದು ಸುಳ್ಳು ಹೇಳಿ ಬಾಲಕಿಯರ ವಿಶ್ವಾಸ ಸಂಪಾದಿಸಿದ್ದನು. ಅವರೊಂದಿಗೆ ಪ್ರೀತಿ ಹಾಗೂ ಸ್ನೇಹದ ನಾಟಕವಾಡಿ, ನಂಬಿಕೆದ್ರೋಹ ಎಸಗಿದ್ದ. ಬಳಿಕ ಬಾಲಕಿಯರಿಂದ ಲೈಂಗಿಕ ಪ್ರಚೋದನೆ ನೀಡುವ ಫೋಟೋಗಳು ಮತ್ತು ವಿಡಿಯೋಗಳನ್ನು ಬಲವಂತವಾಗಿ ಪಡೆದುಕೊಂಡಿದ್ದಾನೆ. ಈ ವೀಡಿಯೊಗಳು ಮತ್ತು ಚಿತ್ರಗಳನ್ನು ಮುಂದಿಟ್ಟುಕೊಂಡು ಬಾಲಕಿಯರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ತಾನು ಕೇಳಿದಂತೆ ಕೇಳದಿದ್ದರೆ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಅಥವಾ ಸ್ನೇಹಿತರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದನೆಂದು ಪ್ರಾಸಿಕ್ಯೂಷನ್ ವಿವರಿಸಿದೆ.

ಸಂತ್ರಸ್ತರ ಕಣ್ಣೀರು ಮತ್ತು ಪೊಲೀಸರ ತನಿಖೆ

ಮೊದಲ ಬಾರಿಗೆ 2021ರ ನವೆಂಬರ್‌ನಲ್ಲಿ ಡರ್ಬಿಶೈರ್ ಪೊಲೀಸರಿಗೆ ಸಂತ್ರಸ್ತ ಬಾಲಕಿಯೊಬ್ಬಳು ನೀಡಿದ ದೂರಿನ ಆಧಾರದ ಮೇಲೆ ಈ ಘೋರ ಅಪರಾಧದ ಜಾಲ ಬಯಲಿಗೆ ಬಂದಿತು. 13 ವರ್ಷದವಳಿದ್ದಾಗ ಸ್ನ್ಯಾಪ್‌ಚಾಟ್ ಮೂಲಕ ಖಾಜಿಯ ಪರಿಚಯವಾಗಿದ್ದು, ಆತ ತನ್ನ ವಯಸ್ಸಿನವನೇ ಎಂದು ಬಾಲಕಿ ನಂಬಿದ್ದಳು. ಆದರೆ 2021ರ ಜುಲೈನಲ್ಲಿ ತಾನು ಕೇವಲ ಸ್ನೇಹಿತಳಾಗಿರಲು ಬಯಸುವುದಾಗಿ ಮತ್ತು ಚಿತ್ರಗಳನ್ನು ಕಳುಹಿಸುವುದಿಲ್ಲ ಎಂದಾಗ, ಖಾಜಿ ಆಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದನು.

ಪೊಲೀಸರ ತನಿಖೆಯ ವೇಳೆ ಖಾಜಿ ಬರೀ ಒಬ್ಬಳ ಮೇಲಷ್ಟೇ ಅಲ್ಲ, 180ಕ್ಕೂ ಹೆಚ್ಚು ಮಕ್ಕಳ ಮೇಲೆ ಈ ರೀತಿ ದೌರ್ಜನ್ಯ ಎಸಗಿರುವುದು ಹಾಗೂ 11 ರಿಂದ 17 ವರ್ಷ ವಯಸ್ಸಿನ ಕನಿಷ್ಠ 70 ಸಂತ್ರಸ್ತರನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ದೌರ್ಜನ್ಯದಿಂದಾಗಿ ಅನೇಕ ಬಾಲಕಿಯರು ತೀವ್ರ ಮಾನಸಿಕ ಆಘಾತಕ್ಕೊಳಗಾಗಿದ್ದು, ದೀರ್ಘಕಾಲೀನ ನೋವನ್ನು ಅನುಭವಿಸುತ್ತಿದ್ದಾರೆ ಎಂದು ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ (CPS) ತಿಳಿಸಿದೆ. ಯುಕೆಯ ಸಂಘಟಿತ ಮಕ್ಕಳ ಲೈಂಗಿಕ ದೌರ್ಜನ್ಯ ಘಟಕವು ನೀಡಿದ ಗಂಭೀರ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ನ್ಯಾಯಾಲಯವು ಈ ಐತಿಹಾಸಿಕ ಮತ್ತು ಕಠಿಣ ಶಿಕ್ಷೆಯನ್ನು ಪ್ರಕಟಿಸಿದೆ.
#CyberCrime #UKNews #ChildSafety #BilalKhazi #OnlineHarassment #ChesterCrownCourt #UdayakalaNews

Related Posts

Leave a Reply

Your email address will not be published. Required fields are marked *