Menu

ಎಸ್‌ಸಿಎಸ್‌ಪಿ/ಟಿಎಸ್‌ಪಿ ಪರಿಣಾಮ ತಿಳಿಯಲು ಸಾಮಾಜಿಕ ಆಡಿಟ್‌; ಮುಖ್ಯಮಂತ್ರಿಗಳ ತೀರ್ಮಾನ

ಉದಯಕಾಲ ನ್ಯೂಸ್,ಬೆಂಗಳೂರು: ಹಲವು ವರ್ಷಗಳ ಕಾಲ ಎಸ್‌ಸಿಎಸ್‌ಪಿ (SCSP) ಹಾಗೂ ಟಿಎಸ್‌ಪಿ (TSP) ಮೂಲಕ ನೀಡಿರುವ ಅನುದಾನವು ಜನಜೀವನ ಮಟ್ಟವನ್ನು ಯಾವ ರೀತಿ ಸುಧಾರಿಸಿದೆ ಎಂಬುದನ್ನು ಅಧ್ಯಯನ ಮಾಡಲು ಪ್ರತಿಷ್ಠಿತ ಸಂಸ್ಥೆಗಳಿಂದ ಸಾಮಾಜಿಕ ಆಡಿಟ್ ನಡೆಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀರ್ಮಾನಿಸಿದ್ದಾರೆ. ವಿಕಾಸಸೌಧದಲ್ಲಿ ರಾಜ್ಯ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ ಸಭೆ ನಡೆಸಿದ ಬಳಿಕ ಅವರು ಮಾಧ್ಯಮಗೋಷ್ಠಿಯಲ್ಲಿ ಈ ಮಹತ್ವದ ಮಾಹಿತಿ ನೀಡಿದರು.

ಅನುದಾನ ಹಂಚಿಕೆ ಹಾಗೂ ಪರಿಶಿಷ್ಟರ ಕಲ್ಯಾಣಕ್ಕೆ ಹೊಸ ಕ್ರಮಗಳು

ಎಸ್‌ಸಿಎಸ್‌ಪಿ /ಟಿಎಸ್‌ಪಿ ಮೂಲಕ 2025-26ನೇ ಸಾಲಿನಲ್ಲಿ 42,503 ಕೋಟಿ ರೂ. ಹಾಗೂ ಪ್ರಸಕ್ತ ಸಾಲಿನ 44,631 ಕೋಟಿ ರೂ.ಗಳನ್ನು 34 ಇಲಾಖೆಗಳ 451 ಯೋಜನೆಗಳಿಗೆ ಹಂಚಿಕೆ ಮಾಡಲಾಗಿದೆ. ಈ ನಿಧಿಯು ಯಾವುದೇ ಕಾರಣಕ್ಕೂ ಕಚೇರಿ ವೆಚ್ಚಕ್ಕೆ ಬಳಕೆಯಾಗಬಾರದು ಎಂದು ಸ್ಪಷ್ಟಪಡಿಸಿರುವ ಸಿಎಂ, ವಿವಿಧ ಯೋಜನೆಗಳು ಓವರ್‌ಲ್ಯಾಪಿಂಗ್ (ಮರುಕಳಿಕೆ) ಆಗುತ್ತಿರುವ ಬಗ್ಗೆ ನಾಯಕರು ಗಮನಸೆರೆದಿರುವುದರಿಂದ, ಡಿಸಿಎಂ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿದೆ. ಎಸ್ಸಿ, ಎಸ್ಟಿ ಶಾಸಕರು ಮತ್ತು ಆರ್ಥಿಕ ಇಲಾಖೆ ಜತೆ ಚರ್ಚಿಸಿ ಅಗತ್ಯ ಬದಲಾವಣೆಗಳ ಕುರಿತು ವರದಿ ನೀಡುವಂತೆ ಸೂಚಿಸಲಾಗಿದೆ. ಅಲ್ಲದೆ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕಲ್ಯಾಣಕ್ಕಾಗಿ ಹೊಸ ಕಾರ್ಯಕ್ರಮಗಳನ್ನು ರೂಪಿಸಲು ‘ವಿಷನ್ ಗ್ರೂಪ್’ ರಚಿಸಲಾಗುವುದು ಎಂದರು. ಮೀಸಲಾತಿ ಹೆಚ್ಚಳದ ತೀರ್ಮಾನವನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸುವ ಕುರಿತು ಪ್ರಧಾನಮಂತ್ರಿಗಳಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಐತಿಹಾಸಿಕ ಐಕ್ಯತಾ ಸಮಾವೇಶ

ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಾಧನೆಗಳನ್ನು ಜನರಿಗೆ ತಿಳಿಸಲು ಹಾಗೂ ಚುನಾವಣಾ ಭರವಸೆಗಳ ಈಡೇರಿಕೆಯನ್ನು ನೆನಪಿಸಲು ಬೃಹತ್ ಐಕ್ಯತಾ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಶಾಲೆಗಳು ಮತ್ತು ಹಾಸ್ಟೆಲ್ ಸಮವಸ್ತ್ರಗಳಿಗೆ ಹೊಸ ರೂಪ ನೀಡಲು ಶಿಕ್ಷಣ ಇಲಾಖೆಗೆ ಸೂಚಿಸಲಾಗಿದ್ದು, ಖಾಸಗಿ ಶಾಲೆಗಳ ರೀತಿಯಲ್ಲಿ ಸರ್ಕಾರಿ ಶಾಲಾ ಮಕ್ಕಳು ಉತ್ತಮ ಸಮವಸ್ತ್ರ ಧರಿಸಲು ಹೆಚ್ಚಿನ ಅನುದಾನ ಒದಗಿಸಲಾಗುವುದು. 2001ರಿಂದ ಇಲ್ಲಿಯವರೆಗೆ ಬಾಕಿ ಉಳಿದಿರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು. ಸಭೆಯಲ್ಲಿ ಪ್ರಮುಖವಾಗಿ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಬೇಕಿರುವ ರೂ. 1,937 ಕೋಟಿ ಅನುದಾನವನ್ನು ಕೋರಿ ಪತ್ರ ಬರೆಯಲು ಹಾಗೂ ಕೇಂದ್ರ ಅನುದಾನ ಬಾರದಿದ್ದರೂ ರಾಜ್ಯದ ಪಾಲಿನ ಅನುದಾನವನ್ನು ಬಳಸಿಕೊಂಡು ಯೋಜನೆಗಳನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. ಎಸ್‌ಸಿಎಸ್‌ಪಿ ಅಡಿ ರೂ. 28,630 ಕೋಟಿ ಹಾಗೂ ಟಿಎಸ್‌ಪಿ ಅಡಿ ರೂ. 10,926.94 ಕೋಟಿ ಸೇರಿದಂತೆ ಒಟ್ಟಾರೆ ಶೇ. 99.74ರಷ್ಟು ಭರ್ಜರಿ ಪ್ರಗತಿ ಸಾಧಿಸಲಾಗಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ವಿವರಿಸಿದರು.
#SCSPTSP #CMDKShivakumar #SocialAudit #KarnatakaGovernment #ScheduledCastes #ScheduledTribes #VikasSoudha #KarnatakaNews

Related Posts

Leave a Reply

Your email address will not be published. Required fields are marked *