Thursday, November 12, 2026
Menu

ಪಟಾಕಿ ಅವಘಡದಿಂದ 51 ಮಕ್ಕಳು ಸೇರಿ 108 ಮಂದಿ ಕಣ್ಣಿಗೆ ಗಾಯ

ಉದಯಕಾಲ ನ್ಯೂಸ್, ಬೆಂಗಳೂರು: ದೀಪಾವಳಿ ಹಬ್ಬದ ಆಚರಣೆ ಹಲವರ ಪಾಲಿಗೆ ಸಂಭ್ರಮವಾದರೆ ಮತ್ತಲವರ ಪಾಲಿಗೆ ಆತಂಕವೇ ಸರಿ. ಪಟಾಕಿ ಸಿಡಿಸುವ ಸಂದರ್ಭದಲ್ಲಿ ಉಂಟಾದ ಅಜಾಗರೂಕತೆಯಿಂದಾಗಿ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ನೂರಕ್ಕೂ ಹೆಚ್ಚು ಮಂದಿ ಕಣ್ಣಿನ ಗಾಯಗಳಿಗೆ ಚಿಕಿತ್ಸೆ ಪಡೆದಿದ್ದಾರೆ. ಇದರೊಂದಿಗೆ ನಗರದಲ್ಲಿ ವಾಯು ಮಾಲಿನ್ಯದ ಪ್ರಮಾಣವೂ ಗಣನೀಯವಾಗಿ ಹೆಚ್ಚಾಗಿರುವುದು ಪರಿಸರ ಪ್ರೇಮಿಗಳಲ್ಲಿ ಕಳವಳ ಮೂಡಿಸಿದೆ.

ಮಿಂಟೋ ಮತ್ತು ನಾರಾಯಣ ನೇತ್ರಾಲಯದಲ್ಲಿ ಕಣ್ಣಿನ ಚಿಕಿತ್ಸೆ

ನಗರದ ಪ್ರಮುಖ ಕಣ್ಣಿನ ಆಸ್ಪತ್ರೆಗಳಾದ ಮಿಂಟೋ ನೇತ್ರ ಚಿಕಿತ್ಸಾಲಯ ಮತ್ತು ರಾಜಾಜಿನಗರದ ನಾರಾಯಣ ನೇತ್ರಾಲಯದಲ್ಲಿ ಹಬ್ಬದ ದಿನಗಳಲ್ಲಿ ಪಟಾಕಿ ಸಿಡಿದು ಗಾಯಗೊಂಡ ಒಟ್ಟು 108 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಆಶ್ಚರ್ಯಕರ ಸಂಗತಿಯೆಂದರೆ ಒಟ್ಟು 51 ಮಂದಿ ಕಂದಮ್ಮಗಳು ಹಾಗೂ ಚಿಣ್ಣರೇ ಇದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ 44 ಮಂದಿ ಚಿಕಿತ್ಸೆ ಪಡೆದಿದ್ದು, ಇವರಲ್ಲಿ 28 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಮೂವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನಾರಾಯಣ ನೇತ್ರಾಲಯದಲ್ಲಿ 64 ಮಂದಿ ದಾಖಲಾಗಿದ್ದು, ಇದರಲ್ಲಿ 33 ಮಕ್ಕಳು ಸೇರಿದ್ದಾರೆ. ಇಲ್ಲಿಯೂ ಮೂವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ವಿಶೇಷವಾಗಿ, ಗಾಯಗೊಂಡವರಲ್ಲಿ 49 ಮಂದಿ ಸ್ವತಃ ಪಟಾಕಿ ಸಿಡಿಸದಿದ್ದರೂ, ಅದರ ಹತ್ತಿರ ನಿಂತಿದ್ದ ಕಾರಣಕ್ಕೆ ಅನ್ಯರ ತಪ್ಪಿಗೆ ಬಲಿಪಯಾಗಿರುವುದು ದಂಗುಬಡಿಸುವ ಸಂಗತಿಯಾಗಿದೆ. ಬಿಜಿಲಿ ಪಟಾಕಿ, ಆಟಮ್ ಬಾಂಬ್ ಹಾಗೂ ಲಕ್ಷ್ಮಿ ಪಟಾಕಿಗಳು ಹೆಚ್ಚಿನ ಗಾಯಗಳಿಗೆ ಕಾರಣವಾಗಿವೆ.

ವಾಯು ಮಾಲಿನ್ಯದಲ್ಲಿ ಶೇ.25ರಷ್ಟು ಜಿಗಿತ: ನಗರದಲ್ಲಿ ಕಲುಷಿತ ಗಾಳಿ

ಪಟಾಕಿಗಳ ಸದ್ದು ಮತ್ತು ಬೆಳಕಿನ ಆಟದ ಜೊತೆಗೆ ಅದರಿಂದ ಹೊರಬಂದ ದಟ್ಟವಾದ ಹೊಗೆಯು ನಗರದ ವಾತಾವರಣವನ್ನು ಸಂಪೂರ್ಣವಾಗಿ ಹದಗೆಡಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಪ್ರಕಾರ, ಕಳೆದ ವರ್ಷದ ದೀಪಾವಳಿಗೆ ಹೋಲಿಸಿದರೆ ಈ ಬಾರಿ ಬೆಂಗಳೂರಿನ ಗಾಳಿಯ ಗುಣಮಟ್ಟ ಸುಮಾರು ಶೇ.25ರಷ್ಟು ಕುಸಿದಿದೆ.
ಪಟಾಕಿಗಳಿಂದ ಹೊರಹೊಮ್ಮಿದ ಅಪಾಯಕಾರಿ PM2.5 ಮತ್ತು PM10 ಕಣಗಳ ಸಾಂದ್ರತೆಯಿಂದಾಗಿ ನಗರದ ವಿವಿಧೆಡೆ ವಾಯು ಮಾಲಿನ್ಯ ಸೂಚ್ಯಂಕ (AQI) 122 ರಿಂದ 204ರ ವರೆಗೆ ದಾಖಲಾಗಿದೆ. ಮೆಜೆಸ್ಟಿಕ್ ಪ್ರದೇಶದಲ್ಲಿ ಅತ್ಯಧಿಕವಾಗಿ AQI ಮೌಲ್ಯ 228ಕ್ಕೆ ತಲುಪಿದ್ದರೆ, ಕೋರಮಂಗಲ, ರಿಚರ್ಡ್ಸ್‌ಟೌನ್ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್‌ಗಳಲ್ಲಿಯೂ ಮಾಲಿನ್ಯದ ಮಟ್ಟ 150ಕ್ಕಿಂತ ಹೆಚ್ಚಿತ್ತು. ಪಟಾಕಿ ಹೊಗೆಯು ದೀರ್ಘಕಾಲ ವಾತಾವರಣದಲ್ಲಿ ಉಳಿದುಕೊಂಡಿದ್ದರಿಂದ ಶ್ವಾಸಕೋಶದ ರೋಗಿಗಳು ಹಾಗೂ ವೃದ್ಧರು ಉಸಿರಾಟದ ಸಮಸ್ಯೆಯಿಂದ ಪರದಾಡುವಂತಾಯಿತು.

ವೈದ್ಯರ ಎಚ್ಚರಿಕೆ

ಈ ಕುರಿತು ಮಾತನಾಡಿರುವ ನಾರಾಯಣ ನೇತ್ರಾಲಯದ ನಿರ್ದೇಶಕ ಡಾ. ನರೇನ್ ಶೆಟ್ಟಿ ಹಾಗೂ ಕಾರ್ನಿಯಾ ಶಸ್ತ್ರಚಿಕಿತ್ಸಕ ಡಾ. ಗೈರಿಕ್ ಕುಂಡು, ಕೆಲವರ ಗಾಯಗಳು ಶಾಶ್ವತ ದೃಷ್ಟಿಹೀನತೆಗೆ ಕಾರಣವಾಗುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ಮಕ್ಕಳು ಪಟಾಕಿ ಸಿಡಿಸುವಾಗ ಪೋಷಕರು ಕಡ್ಡಾಯವಾಗಿ ಹತ್ತಿರದಲ್ಲಿದ್ದು ಸೂಕ್ತ ಮೇಲ್ವಿಚಾರಣೆ ಮಾಡಬೇಕು. ಜನನಿಬಿಡ ಪ್ರದೇಶಗಳಲ್ಲಿ ಪಟಾಕಿ ಸಿಡಿಸುವುದನ್ನು ತಪ್ಪಿಸುವುದು ಹಾಗೂ ಕಣ್ಣಿನ ರಕ್ಷಣೆಗಾಗಿ ಕನ್ನಡಕಗಳನ್ನು ಬಳಸುವುದು ಅತ್ಯಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.
#BangaloreDiwali #FirecrackerInjury #AirPollution #MintoHospital #NarayanaNethralaya #KarnatakaNews #Udayakala

Related Posts

Leave a Reply

Your email address will not be published. Required fields are marked *