Thursday, November 12, 2026
Menu

ಅಧಿಕಾರಿಗಳ ತಪ್ಪು: ಅಭ್ಯರ್ಥಿಯ ನೌಕರಿ ಹಕ್ಕು ಕಸಿದುಕೊಳ್ಳುವಂತಿಲ್ಲ ಎಂದ ನ್ಯಾಯಪೀಠ

ಉದಯಕಾಲ ನ್ಯೂಸ್‌, ಬೆಂಗಳೂರು: ಶಾಲಾ ದಾಖಲೆಗಳು ಅಥವಾ ಅಂಕಪಟ್ಟಿಗಳಲ್ಲಿ ಸರ್ಕಾರಿ ಅಧಿಕಾರಿಗಳು ಮಾಡುವ ಮುದ್ರಣ ದೋಷಗಳಿಗೆ ವಿದ್ಯಾರ್ಥಿಗಳು ಅಥವಾ ಪೋಷಕರು ಹೊಣೆಗಾರರಲ್ಲ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ಆಡಳಿತಾತ್ಮಕ ನಿರ್ಲಕ್ಷ್ಯಕ್ಕೆ ನಿರುದ್ಯೋಗಿಯೊಬ್ಬ ತನ್ನ ಬದುಕಿನ ದಾರಿಯನ್ನು ಕಳೆದುಕೊಳ್ಳುವಂತಾಗಬಾರದು ಎಂದು ಸ್ಪಷ್ಟಪಡಿಸಿದೆ.

ಪಾರದರ್ಶಕ ಹಾಗೂ ಜವಾಬ್ದಾರಿಯುತ ಆಡಳಿತ ವ್ಯವಸ್ಥೆಯೇ ಇಂದಿನ ಅಗತ್ಯ ಮತ್ತು ‘ವಿಕಸಿತ ಭಾರತ’ದ ಪ್ರಮುಖ ಆಶಯವಾಗಿದೆ ಎಂದು ತಿಳಿಸಿರುವ ಹೈಕೋರ್ಟ್, ತುಮಕೂರು ಮೂಲದ ಅಭ್ಯರ್ಥಿಗೆ ಕೇವಲ 8 ವಾರಗಳ ಒಳಗೆ ಅಬಕಾರಿ ರಕ್ಷಕ ಹುದ್ದೆಯನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿ, ಸರ್ಕಾರದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ.

ದಾಖಲೆಗಳ ಗೊಂದಲ: ಕೆಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್

ಕರ್ನಾಟಕ ಲೋಕಸೇವಾ ಆಯೋಗವು (KPSC) 2008ರಲ್ಲಿ ಅಬಕಾರಿ ರಕ್ಷಕ (ಪುರುಷ) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿತ್ತು. ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತುಮಕೂರು ತಾಲೂಕಿನ ಕಳ್ಳಿಪಾಳ್ಯದ ಮಂಜುನಾಥ್ ಕೆ. (ಪರಿಶಿಷ್ಟ ಜಾತಿ – ಕನ್ನಡ ಮಾಧ್ಯಮ ವಿಭಾಗ) ಅವರು ಅತ್ಯುತ್ತಮವಾಗಿ ಉತ್ತೀರ್ಣರಾಗಿ 231 ಅಂಕಗಳನ್ನು ಗಳಿಸಿದ್ದರು.

ಆದರೆ, 2010ರಲ್ಲಿ ಮೂಲ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಗೊಂದಲ ಸೃಷ್ಟಿಯಾಯಿತು. ಅರ್ಜಿದಾರರ ವರ್ಗಾವಣೆ ಪ್ರಮಾಣಪತ್ರ (TC) ಹಾಗೂ ಇತರೆ ಶಾಲಾ ದಾಖಲೆಗಳಲ್ಲಿ ಜನ್ಮ ದಿನಾಂಕವು ಜೂನ್ 15, 1982 ಎಂದು ಸರಿಯಾಗಿಯೇ ಇತ್ತು. ಆದರೆ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ಅಧಿಕಾರಿಗಳ ಮುದ್ರಣ ದೋಷದಿಂದಾಗಿ ಜನ್ಮ ದಿನಾಂಕವು ಜೂನ್ 15, 1980 ಎಂದು ತಪ್ಪಾಗಿ ನಮೂದಾಗಿತ್ತು. ಇದನ್ನು ಆಧರಿಸಿ ಅಭ್ಯರ್ಥಿ ವಯೋಮಿತಿ ಮೀರಿದ್ದಾರೆ ಎಂದು ಹೇಳಿ ಕೆಪಿಎಸ್‌ಸಿ ಆಯ್ಕೆಪಟ್ಟಿಯಿಂದ ಕೈಬಿಟ್ಟಿತ್ತು.

ಈ ತೀರ್ಮಾನವನ್ನು ಪ್ರಶ್ನಿಸಿ ಮಂಜುನಾಥ್ ಕರ್ನಾಟಕ ಆಡಳಿತ ನ್ಯಾಯಮಂಡಳಿಯ (KAT) ಮೊಕದ್ದಮೆ ಹೂಡಿದ್ದರು. ಅರ್ಜಿಯನ್ನು ಪರಿಶೀಲಿಸಿದ್ದ ಕೆಎಟಿ, ಮಂಜುನಾಥ್ ಅವರಿಗೆ ಹುದ್ದೆ ನೀಡುವಂತೆ 2018ರಲ್ಲಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಮತ್ತು ನ್ಯಾಯಮೂರ್ತಿ ಡಾ.ಚಿಲ್ಲಕೂರ್ ಸುಮಲತಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಕೆಎಟಿ ಆದೇಶವನ್ನು ಎತ್ತಿಹಿಡಿದಿದೆ.

ಸರ್ಕಾರದ ವಾದ ತಳ್ಳಿಹಾಕಿದ ಕೋರ್ಟ್‌: 8 ವಾರಗಳಲ್ಲಿ ಹುದ್ದೆ ನೀಡಲು ಸೂಚನೆ

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಜನ್ಮ ದಿನಾಂಕ ತಿದ್ದುಪಡಿಗೆ ಸಿವಿಲ್ ನ್ಯಾಯಾಲಯದ ಡಿಕ್ರಿ (ಆಜ್ಞಾಪ್ತಿ) ಕಡ್ಡಾಯವಾಗಿ ಬೇಕು, ಆದರೆ ಇಲ್ಲಿ ಡಿಕ್ರಿ ಇಲ್ಲದೆಯೇ ಶಿಕ್ಷಣ ಇಲಾಖೆ ಅಧಿಕಾರಿಗಳು ಅಂಕಪಟ್ಟಿ ತಿದ್ದುಪಡಿ ಮಾಡಿದ್ದಾರೆ ಎಂದು ವಾದಿಸಿದ್ದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಅರ್ಜಿದಾರರು ತಿದ್ದುಪಡಿಗಾಗಿ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ವಿಚಾರಣೆ ಬಾಕಿ ಇರುವಾಗಲೇ ಖುದ್ದು ಸರ್ಕಾರಿ ಅಧಿಕಾರಿಯೇ ತಪ್ಪನ್ನು ಮನಗಂಡು ಸರಿಪಡಿಸಿ ಹೊಸ ಅಂಕಪಟ್ಟಿ ನೀಡಿದ್ದರಿಂದ ಆ ದಾವೆ ನಿರರ್ಥಕವಾಗಿದೆ. ಈಗ ತನ್ನದೇ ಇಲಾಖೆಯ ಅಧಿಕಾರಿಯ ತಪ್ಪುಗಳನ್ನು ಮುಂದಿಟ್ಟುಕೊಂಡು ಅಭ್ಯರ್ಥಿಯ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದಿದೆ. ಅಲ್ಲದೆ, ಜನ್ಮ ದಿನಾಂಕದ ಪುರಾವೆಯಾಗಿ ಟಿಸಿ ಅಥವಾ ಇತರ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಲು ಅವಕಾಶವಿದ್ದರೂ, ಸರಿಯಾದ ದಿನಾಂಕವಿದ್ದ ಟಿಸಿಯನ್ನು ಪರಿಗಣಿಸದಿರುವುದು ಕೆಪಿಎಸ್‌ಸಿ ಎಸಗಿರುವ ಪ್ರಮಾದ ಎಂದು ತರಾಟೆಗೆ ತೆಗೆದುಕೊಂಡಿದೆ.
#KarnatakaHighCourt #SPO #ExciseGuard #KPSC #GovernmentJob #Tumakuru #UdayakalaNews #LegalNews #KarnatakaGovernment

Related Posts

Leave a Reply

Your email address will not be published. Required fields are marked *