ಇಸ್ಲಾಮಬಾದ್: ಪಾಕಿಸ್ತಾನದ ವಾಯುವ್ಯ ಭಾಗದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕೊಹಾಟ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ ಅತ್ಯಂತ ಭೀಕರ ದಾಳಿಯಲ್ಲಿ ಡಿಎಸ್‌ಪಿ ಸೇರಿದಂತೆ 11 ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಈ ದಾಳಿಯಲ್ಲಿ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಭದ್ರತಾ ಪಡೆಗಳ ವಾಹನಗಳನ್ನು ಸುಟ್ಟುಹಾಕಲಾಗಿದೆ.
ಪೊಲೀಸ್ ಸಿಬ್ಬಂದಿ ಅಕ್ರಮ ಚಿನ್ನದ ಗಣಿಗಾರಿಕೆ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸಿ ಠಾಣೆಗೆ ವಾಪಸಾಗುತ್ತಿದ್ದ ವೇಳೆ ಈ ಸಂಚು ರೂಪಿಸಲಾಗಿದೆ. ಪೊಲೀಸ್ ವಾಹನಗಳ ವ್ಯೂಹದ ಮೇಲೆ ಏಕಾಏಕಿ ನುಗ್ಗಿದ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಅಲ್ಲದೆ, ದಾಳಿಯ ನಂತರ ಒಟ್ಟು ಐದು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿ ಸಂಪೂರ್ಣವಾಗಿ ಸುಟ್ಟುಹಾಕಿದ್ದಾರೆ. ಈ ಘಟನೆಯು ಪಾಕಿಸ್ತಾನದ ಆಂತರಿಕ ಭದ್ರತೆಯ ದುಸ್ಥಿತಿಯನ್ನು ಮತ್ತೊಮ್ಮೆ ಜಗಜ್ಜಾಹೀರುಗೊಳಿಸಿದೆ.
ದಾಳಿಯ ಹೊಣೆ ಹೊತ್ತ ಟಿಟಿಪಿ: 18 ಉಗ್ರರು ಸತ್ತಿರುವ ಬಗ್ಗೆ ಪೊಲೀಸ್ ಸ್ಪಷ್ಟನೆ
ಈ ಕ್ರೂರ ದಾಳಿಯ ಹೊಣೆಯನ್ನು ಪಾಕಿಸ್ತಾನಿ ತಾಲಿಬಾನ್ ಸಂಘಟನೆಯಾದ ‘ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್’ ಅಧಿಕೃತವಾಗಿ ಹೊತ್ತುಕೊಂಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಖೈಬರ್ ಪಖ್ತುಂಕ್ವಾ ಪೊಲೀಸರು, ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ 18 ‘ಖವಾರಿಜ್’ (ಪಾಕಿಸ್ತಾನ ಟಿಟಿಪಿಗೆ ಬಳಸುವ ಪದ) ಉಗ್ರರು ಕೂಡ ಹತರಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ದಾಳಿಕೋರರು ಸ್ಥಳೀಯ ಅಪರಾಧ ಜಾಲಗಳೊಂದಿಗೆ ಕೈಜೋಡಿಸಿ ಈ ಕೃತ್ಯ ಎಸಗಿದ್ದಾರೆ. ವಿದೇಶಿ ಶಕ್ತಿಗಳ ಕುಮ್ಮಕ್ಕಿನಿಂದ ಉಗ್ರರು ಮತ್ತು ಕ್ರಿಮಿನಲ್ ಗ್ಯಾಂಗ್‌ಗಳು ಒಂದಾಗಿವೆ ಎಂದು ಆರೋಪಿಸಲಾಗಿದೆ. ಆದರೂ, ಇದಕ್ಕೆ ತಕ್ಕ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ಘಟನಾ ಸ್ಥಳದಲ್ಲಿ ಪಾಕ್ ಸೇನೆ ಹಾಗೂ ಪೊಲೀಸರು ಜಂಟಿಯಾಗಿ ಉಗ್ರರಿಗಾಗಿ ತೀವ್ರ ಶೋಧನಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಮಿತಿಮೀರಿದ ಉಗ್ರರ ಅಟ್ಟಹಾಸ,ಗೃಹ ಸಚಿವರಿಂದ ಖಂಡನೆ
ಪಾಕಿಸ್ತಾನದಲ್ಲಿ ದಿನದಿಂದ ದಿನಕ್ಕೆ ಟಿಟಿಪಿ ಉಗ್ರರ ದಾಳಿಗಳು ಹೆಚ್ಚುತ್ತಿದ್ದು, ಅಲ್ಲಿನ ಸರ್ಕಾರದ ನಿಯಂತ್ರಣವು ಕೈತಪ್ಪುತ್ತಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ದೇಶದ ರಕ್ಷಣೆಗಾಗಿ ಜೀವ ಬಿಟ್ಟ ಪೊಲೀಸ್ ಅಧಿಕಾರಿಗಳತ್ಯಾಗಕ್ಕೆ ಗೌರವ ನಮನ ಸಲ್ಲಿಸಿದ್ದಾರೆ.
ಉಗ್ರರಿಗೆ ಹಾಗೂ ಅವರಿಗೆ ಆಶ್ರಯ ನೀಡುವ ಅಪರಾಧ ಜಾಲಗಳಿಗೆ ತಕ್ಕೇಟು ನೀಡುವುದಾಗಿ ಎಚ್ಚರಿಕೆ ನೀಡಿರುವ ಪೊಲೀಸ್ ಇಲಾಖೆ, ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳನ್ನು ಮತ್ತು ದೇಶವಿರೋಧಿ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರಮುಖವಾಗಿ ಗಣಿಗಾರಿಕೆ ಪ್ರದೇಶಗಳಲ್ಲಿ ಮತ್ತು ಗಡಿ ಭಾಗಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
#Pakistan #KhyberPakhtunkhwa #KohatAttack #TTP #PakistanPolice #UdayakalaNews #TerrorAttack #PakistanSecurity


