Wednesday, November 11, 2026
Menu

ಕೊಲಂಬಿಯಾ ಹಾಗೂ ಚಿಕಾಗೋ ವಿವಿಗಳಲ್ಲಿ ರಾಹುಲ್ ಸಂವಾದ: ಸ್ಯಾಮ್ ಪಿತ್ರೋಡಾ

ಉದಯಕಾಲ ನ್ಯೂಸ್, ನವದೆಹಲಿ/ಚಿಕಾಗೋ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮುಂದಿನ ವಾರ ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ಈ ಪ್ರವಾಸದ ವೇಳೆ ಅವರು ಪ್ರಸಿದ್ಧ ಕೊಲಂಬಿಯಾ ಮತ್ತು ಚಿಕಾಗೋ ವಿಶ್ವವಿದ್ಯಾಲಯಗಳಲ್ಲಿ ಕ್ರಮವಾಗಿ ಜಾಗತಿಕ ವಿದ್ಯಾರ್ಥಿ ಚಳವಳಿ ಹಾಗೂ ಭೌಗೋಳಿಕ ರಾಜಕೀಯದ ಕುರಿತಾದ ಪ್ರಮುಖ ಸಂವಾದಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಬುಧವಾರ ತಿಳಿಸಿದ್ದಾರೆ. ರಾಹುಲ್ ಗಾಂಧಿ ವಿದೇಶದಲ್ಲಿ ಭಾರತವನ್ನು ಅವಮಾನಿಸುತ್ತಿದ್ದಾರೆ ಎಂಬ ಬಿಜೆಪಿಯ ನಿರಂತರ ಟೀಕೆಗಳನ್ನು ಅವರು ತೀವ್ರವಾಗಿ ತಳ್ಳಿಹಾಕಿದ್ದಾರೆ.

ವಿವಿಗಳಲ್ಲಿ ಮಹತ್ವದ ಕಾರ್ಯಕ್ರಮಗಳು

ಚಿಕಾಗೋದಿಂದ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸ್ಯಾಮ್ ಪಿತ್ರೋಡಾ, ಬಹಳ ಹಿಂದೆಯೇ ಯೋಜಿಸಲಾದ ಈ ಎರಡು ಪ್ರಮುಖ ಕಾರ್ಯಕ್ರಮಗಳ ವಿವರಗಳನ್ನು ಹಂಚಿಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿ ಚಳವಳಿಗಳಲ್ಲಿ ಹೆಚ್ಚಳ ಕಂಡುಬರುತ್ತಿರುವುದಕ್ಕೆ ಕಾರಣಗಳು, ಭಾರತದಲ್ಲಿ ಅದನ್ನು ಗ್ರಹಿಸುತ್ತಿರುವ ರೀತಿ, ಪ್ರಜಾಪ್ರಭುತ್ವದ ಮೇಲಿನ ಪರಿಣಾಮ ಹಾಗೂ ಶಿಕ್ಷಣ, ಉದ್ಯೋಗ, ಆರ್ಥಿಕತೆ ಮತ್ತು ಪರಿಸರದ ಕುರಿತು ವಿದ್ಯಾರ್ಥಿಗಳ ಬೇಡಿಕೆಗಳ ಬಗ್ಗೆ ರಾಹುಲ್ ಗಾಂಧಿ ಮಾತನಾಡಲಿದ್ದಾರೆ.

ನವೆಂಬರ್ 18ರಂದು ಚಿಕಾಗೋ ವಿವಿ ಸಂವಾದ

ಜಾಗತಿಕ ಖ್ಯಾತಿಯ ಭೌಗೋಳಿಕ ರಾಜಕೀಯ ತಜ್ಞ ಡಾ. ರಾಬರ್ಟ್ ಪೇಪ್ ಅವರೊಂದಿಗೆ ಈ ಸಂವಾದ ನಡೆಯಲಿದೆ. ಮಧ್ಯಪ್ರಾಚ್ಯ ಹಾಗೂ ಇರಾನ್ ಯುದ್ಧದಂತಹ ಜಾಗತಿಕ ಬಿಕ್ಕಟ್ಟುಗಳ ಕುರಿತು ಇಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ ಎಂದು ಪಿತ್ರೋಡಾ ವಿವರಿಸಿದ್ದಾರೆ.

ಬಿಜೆಪಿಯ ಟೀಕೆಗೆ ತಿರುಗೇಟು

ರಾಹುಲ್ ಗಾಂಧಿ ವಿದೇಶಿ ನೆಲದಲ್ಲಿ ದೇಶೀಯ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಾರೆ ಎಂಬ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಪಿತ್ರೋಡಾ, ಇಂದಿನ ತಂತ್ರಜ್ಞಾನ ಯುಗದಲ್ಲಿ 800 ಕೋಟಿ ಜನರು ಪರಸ್ಪರ ಸಂಪರ್ಕ ಹೊಂದಿರುವುದರಿಂದ ‘ಸ್ಥಳೀಯ’ ಎಂಬ ಪರಿಕಲ್ಪನೆಯೇ ಇಲ್ಲ ಎಂದಿದ್ದಾರೆ. ಸ್ಥಳೀಯ ಘಟನೆಗಳು ಜಾಗತಿಕವಾಗುತ್ತವೆ ಮತ್ತು ಜಾಗತಿಕ ವಿದ್ಯಮಾನಗಳು ಸ್ಥಳೀಯವಾಗುತ್ತವೆ. ಭಾರತದಲ್ಲಿ ಹೇಳುವ ಸತ್ಯಾಂಶಗಳನ್ನೇ ವಿದೇಶದಲ್ಲೂ ಮಂಡಿಸಬೇಕೇ ಹೊರತು, ಎರಡು ಕಡೆ ಎರಡು ಮಾತುಗಳನ್ನು ಆಡಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ರಾಹುಲ್ ಗಾಂಧಿ ಒಬ್ಬ ಜಾಗತಿಕ ನಾಯಕರಾಗಿದ್ದು, 150 ಕೋಟಿ ಜನಸಂಖ್ಯೆಯುಳ್ಳ ಭಾರತದಂತಹ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ದ್ವನಿಯನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವುದು ನೈತಿಕ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹೈದರಾಬಾದ್‌ನಲ್ಲಿ ‘ಭಾರತ್ ಶೃಂಗಸಭೆ’

ಇದಲ್ಲದೆ, ನವೆಂಬರ್ 13 ಮತ್ತು 14 ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ‘ಭಾರತ್ ಶೃಂಗಸಭೆ’ಯ ಕುರಿತು ಮಾತನಾಡಿದ ಪಿತ್ರೋಡಾ, ಸುಮಾರು 70 ದೇಶಗಳ ರಾಜಕೀಯ ನಾಯಕರು, ನೀತಿ ನಿರೂಪಕರು ಹಾಗೂ ಶಿಕ್ಷಣ ತಜ್ಞರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು. ತೆಲಂಗಾಣ ಸರ್ಕಾರ, ಪ್ರೋಗ್ರೆಸಿವ್ ಅಲೈಯನ್ಸ್ ಮತ್ತು ಕಾಂಗ್ರೆಸ್ ಪಕ್ಷದ ಜಂಟಿ ಆಶ್ರಯದಲ್ಲಿ ನಡೆಯಲಿರುವ ಈ ಸಭೆಯಲ್ಲಿ ‘ಅವರ್ ವರ್ಲ್ಡ್’ ಹೊಸ ಚಿಂತಕರ ಚಾವಡಿಯ (think tank) ರಚನೆ ಸೇರಿದಂತೆ ಜಾಗತಿಕ ಪ್ರಜಾಪ್ರಭುತ್ವದ ಬಲವರ್ಧನೆ ಕುರಿತು ಮಹತ್ವದ ಚರ್ಚೆಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.

#RahulGandhi #SamPitroda #ColoumbiaUniversity #ChicagoUniversity #UdayakalaNews #IndianPolitics #BharatSummit

Related Posts

Leave a Reply

Your email address will not be published. Required fields are marked *